ತಂಬಾಕಿಗೆ ಉತ್ತಮ ಬೆಲೆ ನೀಡಿ

21ark2
ರಾಮನಾಥಪುರ ತಂಬಾಕು ಮಾರುಕಟ್ಟೆಗೆ ಶುಕ್ರವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ.ದಿನೇಶ್ ಭೈರೇಗೌಡ ಭೇಟಿ ನೀಡಿ, ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚೆ ನಡೆಸಿದರು.
Published on

ಅರಕಲಗೂಡು: ಹೊಗೆಸೊಪ್ಪಿಗೆ ಉತ್ತಮ ಬೆಲೆ ನೀಡಿ ಮಾರುಕಟ್ಟೆಯಲ್ಲಿ ಹರಾಜು ಪ್ರಕ್ರಿಯೆ ಪುನರಾರಂಭಿಸಿ ಬೆಳೆಗಾರರ ಬೇಡಿಕೆಗಳಿಗೆ ಮಂಡಳಿ ಸ್ಪಂದಿಸಬೇಕು ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ವೈದ್ಯಕೀಯ ಘಟಕದ ಅಧ್ಯಕ್ಷ ಡಾ.ದಿನೇಶ್ ಭೈರೇಗೌಡ ಮನವಿ ಮಾಡಿದರು.

ತಾಲೂಕಿನ ರಾಮನಾಥಪುರ ತಂಬಾಕು ಮಾರುಕಟ್ಟೆಗೆ ಶುಕ್ರವಾರ ರೈತರೊಂದಿಗೆ ಭೇಟಿ ನೀಡಿದ ಅವರು, ಹರಾಜು ಅಧೀಕ್ಷಕ ನಿವೇಶ್‌ಕುಮಾರ್ ಪಾಂಡೆ ಅವರೊಂದಿಗೆ ಬೆಳೆಗಾರರ ಸಮಸ್ಯೆಗಳ ಕುರಿತು ಚರ್ಚಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ಹೊಗೆಸೊಪ್ಪು ಬೆಳೆಗಾರರು ಬಹಳ ಸಂಕಷ್ಟದಲ್ಲಿದ್ದಾರೆ. ಅತಿವೃಷ್ಟಿಯಿಂದಾಗಿ ಸಾಕಷ್ಟು ಪ್ರಮಾಣದ ಬೆಳೆ ಕಳೆದುಕೊಂಡು ಸಾಲದ ಶೂಲದಲ್ಲಿ ಮುಳುಗಿದ್ದಾರೆ. ಇಳುವರಿ ಕುಂಠಿತಗೊಂಡು ಅಧಿಕ ಹಣ ವ್ಯಯಿಸಿ ಉತ್ಪಾದಿಸಿರುವ ಅಲ್ಪಸ್ವಲ್ಪ ತಂಬಾಕಿಗೆ ಮಾರುಕಟ್ಟೆಯಲ್ಲಿ ಉತ್ತಮ ದರ ಸಿಗದಿದ್ದರೆ, ಮಾಡಿದ ಖರ್ಚು ಇಲ್ಲದೆ ರೈತರಿಗೆ ಅಪಾರ ಅನ್ಯಾಯವಾಗಲಿದೆ. ಹೀಗಾಗಿ, ಬೆಳೆಗಾರರ ಸಂಕಷ್ಟಗಳನ್ನು ಮನಗಂಡು ಗರಿಷ್ಠ ಮಟ್ಟದ ಬೆಲೆಯಲ್ಲಿ ಸ್ಥಿರತೆ ಕಾಪಾಡಿಕೊಂಡು ಬೆಳೆಗಾರರಿಗೆ ನ್ಯಾಯಯುತ ದರ ದೊರಕಿಸಿಕೊಡಬೇಕು ಎಂದು ಒತ್ತಾಯಿಸಿದರು.

ತಂಬಾಕು ಮಂಡಳಿ ಬೆಳೆಗಾರರ ಹಿತ ಕಾಪಾಡಬೇಕು. ಮಂಡಳಿಯ ಮುಖ್ಯ ಕಚೇರಿಯನ್ನು ಮೈಸೂರಿಗೆ ವರ್ಗಾಯಿಸಿ ಪ್ರಾದೇಶಿಕ ಕಚೇರಿಗಳನ್ನು ಅಧಿಕ ತಂಬಾಕು ಉತ್ಪಾದಿಸುವ ಅರಕಲಗೂಡು, ಹುಣಸೂರು, ಪಿರಿಯಾಪಟ್ಟಣಕ್ಕೆ ವರ್ಗಾಯಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು. ಜನಪ್ರತಿನಿಧಿಗಳು ಸಬೂಬು ಹೇಳದೆ ಬೆಳೆಗಾರರ ಬೇಡಿಕೆಗಳನ್ನು ಈಡೇರಿಸುವುದು ಅಗತ್ಯವಾಗಿದೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net