ತಂದೆಯನ್ನೇ ಮೀರಿಸಿದ ಮಗ ಪುನೀತ್: ಸಿಪಿಕೆ ಬಣ್ಣನೆ

22
Published on

ಮೈಸೂರು: ನಟ ಪುನೀತ್‌ರಾಜ್‌ಕುಮಾರ್ ಸಮಾಜಮುಖಿ ಚೇತನವಾಗಿ ಡಾ.ರಾಜ್‌ಕುಮಾರ್ ಅವರನ್ನೇ ಮೀರಿಸಿದ್ದಾರೆ ಎಂದು ಹಿರಿಯ ಸಾಹಿತಿ ಡಾ.ಸಿ.ಪಿ.ಕೃಷ್ಣಕುಮಾರ್ (ಸಿಪಿಕೆ) ಬಣ್ಣಿಸಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್, ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ, ಸಾಂಸ್ಕೃತಿಕ ಲೋಕ ಟ್ರಸ್ಟ್‌ನಿಂದ ವಿಜಯನಗರದ ಸಾಹಿತ್ಯ ಭವನದಲ್ಲಿ ಶನಿವಾರ ಆಯೋಜಿಸಿದ್ದ ಅಪ್ಪು ಸ್ಮರಣೆ ಹಾಗೂ ಗಾಯನೋತ್ಸವ ಕಾರ್ಯಕ್ರಮದಲ್ಲಿ ಡಾ.ಪುನೀತ್ ರಾಜ್‌ಕುಮಾರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಅವರು ಮಾತನಾಡಿದರು.
ನಟನೆಯಲ್ಲಿ ಡಾ.ರಾಜ್‌ಕುಮಾರ್ ಅವರು ಅದ್ಬುತ ಕಲಾವಿದರಾಗಿದ್ದು, ಅವರನ್ನು ಮೀರಿಸಿದವರು ಇಲ್ಲ. ಪುನೀತ್ ರಾಜ್‌ಕುಮಾರ್ ಕೂಡಾ ಪ್ರಬುದ್ಧ ನಟರಾಗುವ ಜತೆಗೆ ಸಮಾಜಮುಖಿ ಕಾರ್ಯಗಳಿಂದ ತಂದೆಯನ್ನೇ ಮೀರಿಸಿದ್ದಾರೆ. ಶರಣರ ಗುಣವನ್ನು ಮರಣದಲ್ಲಿ ನೋಡು ಎಂಬ ಮಾತಿನಂತೆ ಅಪ್ಪು ಮಾಡಿದ ದಾನ-ಧರ್ಮವನ್ನು ಅವರ ಮರಣಾ ನಂತರ ಕಾಣುತ್ತಿದ್ದೇವೆ. ಅಪ್ಪು ಅವರದ್ದು ಅಷ್ಟೊಂದು ಎತ್ತರದ ವ್ಯಕ್ತಿತ್ವ ಎಂದು ಬಣ್ಣಿಸಿದರು.
ಕಲೆ, ಸಂಸ್ಕೃತಿ, ಸಾಹಿತ್ಯ ಮುನ್ನಲೆಗೆ ತಂದು ಪ್ರೋತ್ಸಾಹ ನೀಡಬೇಕು. ಆದರೆ ಪ್ರಸ್ತುತ ಸಾಹಿತ್ಯಕ್ಕಿಂತ ರಾಜಕೀಯಕ್ಕೆ ಪ್ರಾದಾನ್ಯತೆ ಇದೆ. ಸಾಂಸ್ಕೃತಿಕ ಲೋಕ ಟ್ರಸ್ಟ್ ಈಗಾಗಲೇ ಹಲವಾರು ಕಾರ್ಯಕ್ರಮಗಳನ್ನು ನಡೆಸಿದೆ. ಮುಂದೆಯೂ ಉತ್ತಮ ಕಾರ್ಯಕ್ರಮಗಳನ್ನು ರೂಪಿಸಲಿ ಎಂದು ಅವರು ಆಶಿಸಿದರು.
ಸಾಂಸ್ಕೃತಿಕ ಲೋಕ ಟ್ರಸ್ಟ್‌ನ ಲಾಂಛನ ಆನಾವರಣ ಮಾಡಿದ ಕವಯತ್ರಿ ಡಾ.ಲತಾ ರಾಜಶೇಖರ್ ಮಾತನಾಡಿ, ಪುನೀತ್ ರಾಜ್‌ಕುಮಾರ್ ಮೇರು ಕಲಾವಿದರಾಗಿ ಜನಮಾನಸದಲ್ಲಿ ನೆಲೆಸಿದ್ದಾರೆ ಎಂದರು.
ಮುಖ್ಯ ಅತಿಥಿಯಾಗಿದ್ದ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಮಾತನಾಡಿ, ಡಾ.ರಾಜ್‌ಕುಮಾರ್ ನಟಿಸಿರುವ ಎಲ್ಲಾ ಚಿತ್ರಗಳು ಸಮಾಜಕ್ಕೆ ಸಂದೇಶ ನೀಡುವಂತವಾಗಿದ್ದವು. ಅಪ್ಪು ಪುಣ್ಯ ಸ್ಮರಣೆ ಅಂಗವಾಗಿ ಮೈಸೂರು ಮಿನಿ ವಿಧಾನಸೌಧದದಲ್ಲಿ ಲಿಫ್ಟ್ ದುರಸ್ತಿಗೆ 2.50 ಲಕ್ಷ ರೂ. ನೀಡಿರುವುದಾಗಿ ಅವರು ಹೇಳಿದರು.
ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್ ಮಾತನಾಡಿ, ಅಪ್ಪು ತನ್ನ ನಟನೆಯ ಜತೆಗೆ ಮುಗ್ಧತೆ, ಸಮಾಜಮುಖಿ ಕಾರ್ಯಗಳಿಂದಾಗಿ ಇಡೀ ದೇಶದಲ್ಲಿಯೇ ಎಲ್ಲರ ಮನಗೆದ್ದಿದ್ದಾರೆ ಎಂದರು.
ಕಸಾಪ ಜಿಲ್ಲಾಧ್ಯಕ್ಷ ಮಡ್ಡೀಕೆರೆ ಗೋಪಾಲ್ ಅಧ್ಯಕ್ಷತೆ ವಹಿಸಿದ್ದರು. ಅಖಿಲ ಕರ್ನಾಟಕ ಒಕ್ಕಲಿಗರ ಮಹಾಸಭಾ ಸಂಸ್ಥಾಪಕ ಅಧ್ಯಕ್ಷ ಎನ್. ಬೆಟ್ಟೇಗೌಡ, ಶಿಕ್ಷಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ಶ್ರೀಕಂಠೇಶ್, ಮಹಾಸಭಾ ಪ್ರಧಾನ ಕಾರ್ಯದರ್ಶಿ ಡಾ.ಈ.ಸಿ. ನಿಂಗರಾಜ್‌ಗೌಡ, ಜಿಲ್ಲಾ ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ಕ್ಯಾತನಹಳ್ಳಿ ಪ್ರಕಾಶ್, ಮುಡಾ ಮಾಜಿ ಅಧ್ಯಕ್ಷೆ ಲಕ್ಷ್ಮೀದೇವಿ, ಕನ್ನಡ ಚಳವಳಿಗಾರ ಮೂಗೂರು ನಂಜುಂಡಸ್ವಾಮಿ, ಎಂ.ಜಿ. ದೇವರಾಜ್, ಪದ್ಮಾ ಇತರರು ಇದ್ದರು.
ಹಾಡು ಹೇಳಿದ ಎಂಎಲ್‌ಸಿ:
ಅಪ್ಪು ಸ್ಮರಣೆ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ ಅವರು ಡಾ.ರಾಜ್‌ಕುಮಾರ್ ಅಭಿನಯನ ಕೆಲವು ಗೀತೆಗಳನ್ನು ಹಾಡಿ ಗಮನ ಸೆಳೆದರು. ನಂತರ ಡಾ.ವೈ.ಡಿ.ರಾಜಣ್ಣ, ಎನ್. ಬೆಟ್ಟೇಗೌಡ, ಡಾ.ಬಿ.ಎನ್. ರವೀಶ್, ಹೇಮಚಂದ್ರ, ಅಶ್ವಿನಿ ಗಾಯನ ಕಾರ್ಯಕ್ರಮ ನಡೆಸಿಕೊಟ್ಟರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net