ತಂದೆಯನ್ನು ಮೀರಿಸಿದ ಅಪ್ಪು

4
Published on

ಮೈಸೂರು: ನಟ ಪುನೀತ್‌ರಾಜ್‌ಕುಮಾರ್ ಸಮಾಜಕ್ಕೆ ನೀಡಿದ ಕೊಡುಗೆ ಅಪಾರವಾಗಿದೆ. ಆದ್ದರಿಂದ ಜನರ ಮನಸ್ಸಿನಲ್ಲಿ ಶಾಶ್ವತವಾಗಿ ನೆಲೆಯೂರಿದ್ದಾರೆ ಎಂದು ಎಂಡಿಸಿಸಿ ಅಧ್ಯಕ್ಷ ಜಿ.ಡಿ.ಹರೀಶ್‌ಗೌಡ ಹೇಳಿದರು.


ನಗರದ ಡಾ.ಪುನೀತ್ ರಾಜ್‌ಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಬೋಗಾದಿ ರಿಂಗ್‌ರಸ್ತೆಯಲ್ಲಿ ಭಾನುವಾರ ಆಯೋಜಿಸಿದ್ದ ಅಪ್ಪು ಅವರ ಮೊದಲ ವರ್ಷದ ಸ್ಮರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.


ಪುನೀತ್ ನಮ್ಮನ್ನು ಅಗಲಿ ಒಂದು ವರ್ಷವೇ ಕಳೆದಿದೆ. ಇಷ್ಟಾದರೂ ರಸ್ತೆಗಳಲ್ಲಿ ಹಾಕಿದ್ದ ಅವರ ಭಾವಚಿತ್ರ ತೆಗೆಯಲು ಯಾರಿಗೂ ಮನಸ್ಸು ಆಗುತ್ತಿಲ್ಲ. ಅಪ್ಪು ಬಹಳಷ್ಟು ಜನಪರ ಕಾರ್ಯ ಮಾಡಿದ್ದು, ಸಾಮಾಜಿಕ ಕಳಕಳಿ ಹೊಂದಿದ್ದ ನಟನಾಗಿದ್ದರು. ತಂದೆ ರಾಜ್‌ಕುಮಾರ್ ಅವರನ್ನು ಮೀರಿಸಿದ್ದಾರೆ ಎಂದರು.


ಜಿಲ್ಲಾ ಹೋಟೆಲ್ ಮಾಲೀಕರ ಸಂಘದ ಅಧ್ಯಕ್ಷ ಸಿ.ನಾರಾಯಣಗೌಡ ಮಾತನಾಡಿ, ಪುನೀತ್ ಎಲ್ಲರಿಗೂ ಮಾದರಿ ವ್ಯಕ್ತಿಯಾಗಿದ್ದಾರೆ. ಸಾವಿನ ನಂತರವೂ ಅವರ ಹೆಸರು ಸಮಾಜಮುಖಿ ಕಾರ್ಯಗಳ ಮೂಲಕ ಜೀವಂತವಾಗಿದೆ. ಅವರು ಮಾಡಿದ ಜನಪರ ಕೆಲಸವನ್ನು ಆದರ್ಶವಾಗಿ ಇಟ್ಟುಕೊಂಡು ಎಲ್ಲರೂ ಅವರ ದಾರಿಯಲ್ಲಿ ನಡೆಯಬೇಕು ಎಂದರು.


ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲಾಯಿತು. ಬೋಗಾದಿ ಗ್ರಾ.ಪಂ. ಸದಸ್ಯ ಕೆ.ಚಂದ್ರಶೇಖರ್, ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಎಸ್.ಟಿ.ರವಿಕುಮಾರ್, ಮುಖಂಡ ನಾಗರಾಜ್.ವಿ.ಬೈಯರಿ ಇನ್ನಿತರರು ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net