

ಶ್ರೀರಂಗಪಟ್ಟಣ: ಕ್ಷೇತ್ರದಲ್ಲಿ ಹಾಲಿ ಶಾಸಕ ಹಾಗೂ ಮಾಜಿ ಶಾಸಕರು ಅವರ ತಂದೆ ಹಾಗೂ ಪಕ್ಷದ ಹೆಸರು ಬಳಸದೆ ಸ್ವತಂತ್ರವಾಗಿ ಸ್ಪರ್ಧಿಸಲಿ, ಅವರಂತೆ ನಾನೂ ಸಮಾನವಾದ ಮತ ಪಡೆಯದಿದ್ದರೆ ರಾಜಕೀಯ ನಿವೃತ್ತಿ ಘೋಷಿಸುತ್ತೇನೆ ಎಂದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ತಗ್ಗಳ್ಳಿ ವೆಂಕಟೇಶ್ ಸವಾಲು ಹಾಕಿದರು.
ತಾಲೂಕಿನ ಆರತಿ ಉಕ್ಕಡದಲ್ಲಿ ಭಾನುವಾರ ಅಭಿಮಾನಿಗಳು ಹಾಗೂ ಬೆಂಬಲಿಗರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿ, ತಗ್ಗಳ್ಳಿ ವೆಂಕಟೇಶ್ ಕೇವಲ ಕೊತ್ತತ್ತಿ ಭಾಗದ ಕೆಲವೇ ಮತದಾರರಿಗೆ ಸೀಮಿತ ಎಂದು ಆರೋಪಿಸುವ ವಿರೋಧಿಗಳಿಗೆ ನನ್ನನ್ನು ಬೆಂಬಲಿಸುವ ಈ ಭಾಗದ ಅಭಿಮಾನಿಗಳು ಈ ಕಾರ್ಯಕ್ರಮ ಆಯೋಜಿಸಿ ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿ ಬೆಂಬಲಿಸುವ ಮೂಲಕ ರಾಜಕಾರಣಕ್ಕೆ ಹಣ ಮುಖ್ಯವಲ್ಲ, ಗುಣ ಮುಖ್ಯ ಎನ್ನುವುದನ್ನು ಸಾಬೀತುಪಡಿಸಿದ್ದೀರಿ ಎಂದು ಹೇಳಿದರು.
5 ವರ್ಷದ ಹಿಂದೆ ಅಧಿಕಾರ, ಆಡಳಿತ ಎಲ್ಲವನ್ನೂ ಅನುಭವಿಸಿ ಮಾತೃಪಕ್ಷಕ್ಕೆ ವಂಚಿಸಿ ಪಕ್ಷಾಂತರಿಯಾದ ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಒಂದು ಕಡೆ, ಮತ್ತೊಂದು ಕಡೆ ಕಾರ್ಯಕರ್ತರ ಸಮಸ್ಯೆ ಹಾಗೂ ಕ್ಷೇತ್ರದ ಅಭಿವೃದ್ಧಿಯಲ್ಲಿ ಶೂನ್ಯ ಸಾಧನೆ ಮಾಡಿದ ಶಾಸಕ ರವೀಂದ್ರ ಶ್ರೀಕಂಠಯ್ಯ ಈ ಎರಡೂ ಕುಟುಂಬಗಳ ನಾಯಕತ್ವವನ್ನು ಕ್ಷೇತ್ರದ ಜನರು ವಿರೋಧಿಸಿ ಹೊಸ ಸೇವಕನ ನಿರೀಕ್ಷೆಯಲ್ಲಿದ್ದಾರೆ ಎಂದು ತಿಳಿಸಿದರು.
ನಿರಂತರವಾಗಿ ಸೋತು ಮನೆಯಲ್ಲೇ ಕುಳಿತಿದ್ದ ರವೀಂದ್ರ ಶ್ರೀಕಂಠಯ್ಯ ಅವರಿಗೆ ಜೆಡಿಎಸ್‌ನಿಂದ ಬಿ ಫಾರ್ಮ್, ಪಕ್ಷದ ಹಣ ನೀಡಿ, ಕಾರ್ಯಕರ್ತರ ಸಂಘಟನೆ, ನೈತಿಕ ಶ್ರಮ ಬೆಂಬಲದೊಂದಿಗೆ ಶಾಸಕ ಸ್ಥಾನದ ಅಧಿಕಾರ ಕೊಡಿಸಿದ್ದೀರಿ. ಆದರೆ ಅವರು ನಿಷ್ಠಾವಂತ ಕಾರ್ಯಕರ್ತರು ಹಾಗೂ ಜನರ ಕೈಗೆ ಸಿಗುತ್ತಿಲ್ಲ ಎಂಬ ನೋವು ಎಲ್ಲೆಡೆ ವ್ಯಕ್ತವಾಗುತ್ತಿದೆ ಎಂದು ತಿಳಿಸಿದರು.
ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ.ಜಯಪ್ರಕಾಶ್‌ಗೌಡ ಮಾತನಾಡಿ, ಜೆಡಿಎಸ್ ಪಕ್ಷದಲ್ಲಿ ಪ್ರಾಮಾಣಿಕವಾಗಿ ದುಡಿದ ತಗ್ಗಳ್ಳಿ ವೆಂಕಟೇಶ್ ಅವರಿಗೆ ಗೌರವ ಸಿಗದ ಕಾರಣ ಅವರು ಅಂತರ ಕಾಯ್ದುಕೊಂಡಿದ್ದಾರೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ಮಧುಚಂದನ್, ಪ್ರಧಾನ ಕಾರ್ಯದರ್ಶಿ ಎನ್.ಪ್ರಸನ್ನಗೌಡ, ರಾಜ್ಯ ಖಜಾಂಚಿ ತಗ್ಗಳ್ಳಿ ಪ್ರಸನ್ನ, ಬಾಬುರಾಯನಕೊಪ್ಪಲು ವಿಜಯ್, ಅರಕೆರೆ ಸಿದ್ದರಾಜು, ಕೃಷ್ಣ, ಸುನೀಲ್, ಗಿರೀಶ್, ಸಚಿನ್, ಬೆಳಗೊಳ ವಿಜಯ್ ಇತರರು ಇದ್ದರು.