

ಚಾಮರಾಜನಗರ: ಕಳೆದ ವರ್ಷದ ಮುಂಗಾರು ಹಂಗಾಮಿನಲ್ಲಿ ಅತಿವೃಷ್ಟಿಯಿಂದ ಬೆಳೆ ನಷ್ಟವಾಗಿರುವ 406.7 ಹೆಕ್ಟೇರ್ ಪ್ರದೇಶಗಳಲ್ಲಿ 210.33 ಹೆಕ್ಟೇರ್ ಬೆಳೆ ಹಾನಿಯನ್ನು ಪರಿಹಾರ ತಂತ್ರಾಂಶಕ್ಕೆ ನಮೂದಿಸಲು ಸಾಧ್ಯವಾಗಿಲ್ಲ.
ನಗರದ ಜಿಲ್ಲಾ ಪಂಚಾಯಿತಿ ಕೆಡಿಪಿ ಸಭಾಂಗಣದಲ್ಲಿ ಹವಾಮಾನ, ಕುಡಿಯುವ ನೀರು ನಿರ್ವಹಣೆ, ಜಾನುವಾರುಗಳ ಮೇವು ಮತ್ತು ಅರಣ್ಯ ಇಲಾಖೆಗೆ ಸಂಬಂಧಿಸಿದ ಮತ್ತು ಇತರ ಇಲಾಖೆ ವಿಷಯಗಳ ಕುರಿತು ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಅಧ್ಯಕ್ಷತೆಯಲ್ಲಿ ಬುಧವಾರ ಆಯೋಜಿಸಿದ್ದ ಸಭೆಯಲ್ಲಿ ಈ ಮಾಹಿತಿ ಹೊರಬಿತ್ತು.
ಸಭೆಯಲ್ಲಿ ಜಿಲ್ಲಾಧಿಕಾರಿ ಶಿಲ್ಪಾನಾಗ್ ಮಾತನಾಡಿ, 2024ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ಮುಂಗಾರಿನಲ್ಲಿ ಜಿಲ್ಲೆಯಲ್ಲಿ ಒಟ್ಟು 406.7 ಹೆಕ್ಟೇರ್ ಬೆಳೆ ಹಾನಿಯಾಗಿದೆ. ಪರಿಹಾರ ತಂತ್ರಾಂಶದಲ್ಲಿ ಒಟ್ಟು 197.27 ಹೆಕ್ಟೇರ್‌ಗಳನ್ನು ಮಾತ್ರ ನಮೂದಿಸಲಾಗಿದೆ. ಉಳಿಕೆ 210.33 ಹೆಕ್ಟೇರ್ ಬೆಳೆ ಹಾನಿ ಮಾಹಿತಿ ನಮೂದಿಸಲು ಸಾಧ್ಯವಾಗಿಲ್ಲ ಎಂದು ತಿಳಿಸಿದರು.
ಪ್ರಮುಖವಾಗಿ ಗುಂಡ್ಲುಪೇಟೆ ತಾಲೂಕಿನಲ್ಲಿ ಉಂಟಾದ ಬೆಳೆ ಹಾನಿಗೆ ಪರಿಹಾರ ವಿತರಣೆ ಮಾಡಲು ಗ್ರಾಮ ಆಡಳಿತ ಅಧಿಕಾರಿಗಳ ಲಾಗಿನ್‌ನಲ್ಲಿ ಬೆಳೆ ಹಾನಿ ವಿವರವನ್ನು ಎಂಟ್ರಿ ಮಾಡುವಾಗ ಪೂರ್ವ ಮುಂಗಾರಿನಲ್ಲಿ ನಡೆಸಿದ ಬೆಳೆ ಸಮೀಕ್ಷೆಯ ಬೆಳೆ ಬರುತ್ತಿದೆ. ಬೆಳೆಯ ಕಾಲಂನಲ್ಲಿ ಎಡಿಟ್ ಮಾಡಲು ಸಾಧ್ಯವಾಗುತ್ತಿಲ್ಲ. ಮುಂಗಾರಿನ ಬೆಳೆ ಸಮೀಕ್ಷೆ ಇನ್ನೂ ಪೂರ್ಣಗೊಂಡಿರದ ಕಾರಣ ಬೆಳೆಯನ್ನು ನಮೂದಿಸಲು ಸಾಧ್ಯವಾಗುತ್ತಿಲ್ಲ. ಈ ಸಂಬಂಧ ಮರು ನಮೂದಿಗೆ ಅವಕಾಶ ನೀಡುವಂತಾಗಬೇಕು. ಇದಕ್ಕಾಗಿ ಕಂದಾಯ ಇಲಾಖೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಿಗೆ ಪತ್ರ ಬರೆಯಲಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಕೆ.ವೆಂಕಟೇಶ್ ಇಲಾಖೆಯ ಸಚಿವರಿಗೆ ನನ್ನ ಹೆಸರಿನಲ್ಲೇ ಪತ್ರ ಬರೆದು ರೈತರಿಗೆ ಪರಿಹಾರ ನೀಡಲು ಕ್ರಮ ವಹಿಸಿ ಎಂದು ನಿರ್ದೇಶನ ನೀಡಿದರು.
ಜಾನುವಾರುಗಳ ಮರಣ ದೊಡ್ಡ ವಿಚಾರ:
ಜಿಲ್ಲೆಯಲ್ಲಿ ಕಳೆದ 1 ವರ್ಷದಲ್ಲಿ 900 ಹಸುಗಳು ಸತ್ತಿರುವುದು ದೊಡ್ಡ ವಿಚಾರ. ನೀವೇನು ಮಾಡುತ್ತಿದ್ದೀರಿ? ಎಂದು ಪಶು ಸಂಗೋಪನೆ, ರೇಷ್ಮೆ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಕೆ.ವೆಂಕಟೇಶ್ ಪ್ರಶ್ನಿಸಿದರು. ಜಿಲ್ಲಾ ಪಶುಸಂಗೋಪನಾ ಇಲಾಖೆ ಉಪ ನಿರ್ದೇಶಕ ಹನುಮೇಗೌಡ ಅವರಿಂದ ಮಾಹಿತಿ ಪಡೆದಾಗ ಜಿಲ್ಲೆಯಲ್ಲಿ 1 ವರ್ಷದಲ್ಲಿ 903 ಹಸುಗಳು ಮೃತಪಟ್ಟಿವೆ. ಸಾವಿರಕ್ಕೂ ಹೆಚ್ಚು ಕುರಿ, ಮೇಕೆಗಳು ಸತ್ತಿವೆ ಎಂದು ತಿಳಿಯಿತು. ಈ ಮಾಹಿತಿ ತಿಳಿದ ಸಚಿವ ಕೆ.ವೆಂಕಟೇಶ್ 1 ವರ್ಷದಲ್ಲಿ ಇಷ್ಟೊಂದು ಜಾನುವಾರುಗಳ ಸಾವು ಸಂಭವಿಸಿರುವುದು ದೊಡ್ಡ ವಿಚಾರ. ನೀವು ಏನು ಮಾಡುತ್ತಿದ್ದೀರಾ?, ಚಾಮರಾಜನಗರ ಕಚೇರಿ ಬಿಟ್ಟು ಹೊರಗೆ ಹೋಗುತ್ತಿಲ್ಲ ಎನಿಸುತ್ತದೆ. ವೈದ್ಯರು ಸಂಜೆ 5 ಗಂಟೆಯವರೆಗೆ ಕೆಲಸ ಮಾಡಬೇಕು. ಆದರೆ ಕೆಲಸ ಮಾಡುತ್ತಿಲ್ಲ ಎಂದು ಕಾಣಿಸುತ್ತದೆ ಎಂದು ಅನುಮಾನ ವ್ಯಕ್ತಪಡಿಸಿದ ಸಚಿವರು ತಮಗೆ ಇಲಾಕೆ ಪ್ರಗತಿಯನ್ನು ತೋರಿಸಬೇಕೆಂದು ಸೂಚನೆ ನೀಡಿದರು.
ಇದಕ್ಕೆ ಉಪನಿರ್ದೇಶಕ ಹನುಮೇಗೌಡ ಪ್ರತಿಕ್ರಿಯಿಸಿ, ಗಣತಿ ಪ್ರಕಾರ ಜಿಲ್ಲೆಯಲ್ಲಿ 5.78 ಲಕ್ಷ ಜಾನುವಾರುಗಳಿವೆ. ವಿಷಾಹಾರ ಸೇವನೆ ಮಾಡಿ ಜಾನುವಾರುಗಳು ಮೃತಪಟ್ಟಿವೆ. ಇದರಲ್ಲಿ 411 ಜಾನುವಾರುಗಳಿಗೆ ಪರಿಹಾರ ವಿತರಣೆ ಮಾಡಲಾಗಿದೆ. ಹನೂರು ತಾಲೂಕಿನಲ್ಲಿ ಹೆಚ್ಚು ಸಾವು ಸಂಭವಿಸಿದೆ. ಕೊಳ್ಳೇಗಾಲದಲ್ಲಿ ವಿಷಾಹಾರ ಸೇವನೆ ಮಾಡಿ ಒಂದೇ ಸಲ 20 ಕುರಿಗಳು ಮೃತಪಟ್ಟಿದ್ದವು. ಬೇರೆ ಜಿಲ್ಲೆಗೆ ಹೋಲಿಸಿದರೆ ನಮ್ಮ ಜಿಲ್ಲೆಯಲ್ಲಿ ಜಾನುವಾರುಗಳ ಮರಣ ಪ್ರಮಾಣ ಕಡಿಮೆ ಇದೆ ಎಂದು ವಿವರಿಸಿದರು.
ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್‌ಪ್ರಸಾದ್, ಕಾಡಾ ಅಧ್ಯಕ್ಷ ಪಿ.ಮರಿಸ್ವಾಮಿ, ಚುಡಾ ಅಧ್ಯಕ್ಷ ಮಹಮ್ಮದ್ ಅಸ್ಗರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಬಿ.ಟಿ.ಕವಿತಾ, ಹೆಚ್ಚುವರಿ ಜಿಲ್ಲಾಧಿಕಾರಿ ಗೀತಾ ಹುಡೇದ, ಮಲೆ ಮದಹೇಶ್ವರ ವನ್ಯಜೀವಿಧಾಮದ ಡಿಸಿಎ್ ಚಕ್ರಪಾಣಿ ಮತ್ತು ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು.
ನಿರಂತರ ಕೆಲಸ ಮಾಡಿ:
ಅರಣ್ಯದೊಳಗಿರುವ ಹಾಡಿ, ಪೋಡುಗಳಿಗೆ ನೀರು, ವಿದ್ಯುತ್ ನೀಡುವ ಕೆಲಸವನ್ನು ನಿರಂತರವಾಗಿ ಮಾಡಿ ಎಂದು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮೇಜರ್ ಪಿ.ಮಣಿವಣ್ಣನ್ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಜಿಲ್ಲೆಯಲ್ಲಿ ಒಟ್ಟು 10 ಕುಡಿಯುವ ನೀರಿನ ಪ್ರಸ್ತಾವನೆಗಳಿಗೆ ಪರಿವೇಶ್ ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ. ಈ ಪೈಕಿ ಒಟ್ಟು 8 ಪ್ರಸ್ತಾವನೆಗಳು 1 ಹೆಕ್ಟೇರ್‌ಗಿಂತಲೂ ಕಡಿಮೆ, 2 ಪ್ರಸ್ತಾವನೆಗಳು 1 ಹೆಕ್ಟೇರ್‌ಗಿಂತ ಮೇಲ್ಪಟ್ಟ ಪ್ರಸ್ತಾವನೆಗಳಾಗಿವೆ ಎಂದು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡು ಮಾತನಾಡಿದರು. ಅರಣ್ಯ ಇಲಾಖೆಗೆ ಅರ್ಜಿ ಸಲ್ಲಿಸಿದ ಬಳಿಕ ಕೆಲಸ ಮಾಡಿ ಎಂದು ಸೂಚನೆ ನೀಡಿದರು.
ಸಚಿವ ಕೆ.ವೆಂಕಟೇಶ್ ಮಾತನಾಡಿ, ಮಲೆ ಮಹದೇಶ್ವರ ವನ್ಯಜೀವಿಧಾಮದ ವ್ಯಾಪ್ತಿಯಲ್ಲಿ ರಸ್ತೆ ಬದಿಯಲ್ಲಿ ಕುಡಿಯುವ ನೀರಿನ ಪೈಪ್‌ಲೈನ್ ಅಳವಡಿಕೆ ಮಾಡಲು ಡಿಸಿಎ್ ಚಕ್ರಪಾಣಿ ಅನುಮತಿ ನೀಡಬೇಕು ಎಂದು ತಿಳಿಸಿದರು.
ಬಿಎಸ್‌ಎನ್‌ಎಲ್ ಸಹಾಯಕ ಇಂಜಿನಿಯರ್ ಮಧುಕುಮಾರ್ ಮಾತನಾಡಿ, ಭೂತಾನಿ ಪೋಡು, ಬಂಡೀಪುರದಲ್ಲಿ ಟವರ್ ಹಾಕಲು ಅರಣ್ಯ ಇಲಾಖೆಯಿಂದ ಆಕ್ಷೇಪಣೆ ಇದೆ ಎಂದು ತಿಳಿಸಿದರು.
ಇದಕ್ಕೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪಿ.ಮಣಿವಣ್ಣನ್ ಮಾತನಾಡಿ, ಬಂಡೀಪುರದ ಸೂಕ್ಷ್ಮ ವಲಯ ಬಿಟ್ಟು ಹೊರಗೆ ವ್ಯಾಪ್ತಿ ವಿಸ್ತರಿಸುವಂತೆ ಎರಡು ಟವರ್ ಹಾಕಿ. ಇದಕ್ಕೆ ಸಂಬಂಧಿಸಿದಂತೆ ಬಿಎಸ್‌ಎನ್‌ಎಲ್ ಕೇಂದ್ರ ಕಚೇರಿಯ ಅಧಿಕಾರಿಗಳೊಂದಿಗೆ ಮಾತನಾಡುತ್ತೇನೆ ಎಂದು ಹೇಳಿದರು. ಮತ್ತೊಂದು ಟವರ್‌ಗೆ ಸೋಲಾರ್ ಅಳವಡಿಕೆ ಮಾಡಲು ಪಿಲ್ಲರ್ ಹಾಕಿ ಕಾಡಾನೆಗಳಿಗೆ ತೊಂದರೆಯಾಗದಂತೆ ನಿರ್ಮಾಣ ಮಾಡಬಹುದು ಎಂದು ತಿಳಿಸಿದರು. ಪುರಾಣಿಪೋಡಿಗೆ ವಿದ್ಯುತ್ ಸೌಲಭ್ಯ ಒದಗಿಸಲು ನಡೆಸುತ್ತಿರುವ ಕಾಮಗಾರಿ ಶೇ.95ರಷ್ಟು ಪೂರ್ಣಗೊಂಡಿದ್ದು, ಇದನ್ನೂ ಬೇಗ ಪೂರ್ಣಗೊಳಿಸಲು ತಾಕೀತು ಮಾಡಿದರು.
ಜೆಜೆಎಂ ಪೂರ್ಣಗೊಳಿಸಿಲ್ಲ:
ಹಲವು ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯನ್ನು ಪೂರ್ಣಗೊಳಿಸದೆ ಇದ್ದರೂ ಹಲವು ಗ್ರಾಮ ಪಂಚಾಯಿತಿಗಳಿಂದ ಎನ್‌ಒಸಿ ಪಡೆಯಲಾಗಿದೆ. ಇದರ ಸಂಪೂರ್ಣ ಜವಾಬ್ದಾರಿಯನ್ನು ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ನೀಡಬೇಕು ಎಂದು ಎಂದು ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಎಚ್.ವಿ.ಚಂದ್ರು ಒತ್ತಾಯಿಸಿದರು. ಇದಕ್ಕೆ ಧ್ವನಿಗೂಡಿಸಿದ ಸಚಿವ ಕೆ.ವೆಂಕಟೇಶ್, ನಮ್ಮ ಜಿಲ್ಲೆಯಲ್ಲೂ ಇದೇ ರೀತಿ ಮಾಡಿದ್ದಾರೆ ಎಂದರು. ತಾಪಂ ಇಒಗಳು ಏನು ಮಾಡುತ್ತಿದ್ದೀರಾ?, ನೀವು ಸ್ಥಳ ಪರಿಶೀಲನೆ ಮಾಡಬೇಕು. ಆಫೀಸಿನಲ್ಲಿ ಕುಳಿತು ಕೆಲಸ ಮಾಡುತ್ತಿದ್ದೀರಾ?, ವಾರಕ್ಕೆ ಒಮ್ಮೆ ಒಂದು ಗ್ರಾಮಪಂಚಾಯಿತಿಗೆ ಹೋಗಬೇಕು ಎಂದು ತಿಳಿಸಿದರು. ಜಿಲ್ಲಾ ಪಂಚಾಯಿತಿ ಸಿಇಒ ಮೋನಾರೋತ್ ಮಾತನಾಡಿ, ಜೆಜೆಎಂ ಕೆಲಸ ಮುಗಿಸದೆ ಎನ್‌ಒಸಿ ಪಡೆದರೆ ಕ್ರಮ ವಹಿಸಲಾಗುವುದು ಎಂದು ಎಚ್ಚರಿಸಿದರು.