ತಂತ್ರಜ್ಞಾನದಿಂದ ಸಂಸ್ಕಾರ, ಸಂಬಂಧಗಳು ಕಣ್ಮರೆ

HUN-JULY-24-3(TALENT SCHOOL PROGRAMME)
Published on

ಹುಣಸೂರು: ಮಕ್ಕಳ ಮನಸ್ಸು ಬಿಳಿಯ ಹಾಳೆಯಂತಿದ್ದು, ಹಾಳೆಯ ಮೇಲೆ ಸಂಸ್ಕಾರ, ಸಂಸ್ಕೃತಿಯನ್ನು ಮೂಡಿಸುವ ಚಿತ್ರಗಳನ್ನು ಮೂಡಿಸೋಣ ಎಂದು ರತ್ನಪುರಿ ಗ್ರಾಮದ ವಿಎಸ್‌ಎಸ್‌ಆರ್‌ಐ ಪಿಯು ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಉಪನ್ಯಾಸಕ ಮನೋಜ್ ಸಲಹೆ ನೀಡಿದರು.

ನಗರದ ಟ್ಯಾಲೆಂಟ್ ವಿದ್ಯಾಸಂಸ್ಥೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸಹಯೋಗದಲ್ಲಿ ಗುರುವಾರ ಆಯೋಜಿಸಿದ್ದ ಸ್ವಾಸ್ಥೃ ಸಂಕಲ್ಪ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದರು. ಆಧುನಿಕ ಜೀವನಶೈಲಿ, ನೂತನ ತಂತ್ರಜ್ಞಾನಗಳು ಮನುಷ್ಯನ ಬದುಕನ್ನು ಅವಸರದ ಬದುಕಿನತ್ತ ದೂಡುತ್ತಿದೆ. ಸಂಸ್ಕಾರ, ಸಂಬಂಧಗಳು ಕಣ್ಮರೆಯಾಗುತ್ತಿದೆ. ದೇಶದ ಭವಿಷ್ಯದ ಪ್ರಜೆಗಳಾದ ಮಕ್ಕಳ ಮೇಲೂ ಇದು ಗಾಢವಾಗಿ ಪರಿಣಾಮವನ್ನುಂಟು ಮಾಡುತ್ತಿದೆ.

ಆರೋಗ್ಯ ಎನ್ನುವುದು ದೈಹಿಕ ಮತ್ತು ಮಾನಸಿಕ ಎರಡು ವಿಭಾಗಗಳಲ್ಲೂ ಕಂಡುಬರುತ್ತದೆ. ಮಕ್ಕಳ ಮಾನಸಿಕ ಮತ್ತು ದೈಹಿಕ ಆರೋಗ್ಯದಲ್ಲಿ ಏರುಪೇರಾಗದಂತೆ ಪಾಲಕರು ಮತ್ತು ಸಮಾಜ ಎಚ್ಚೆತ್ತುಕೊಳ್ಳಬೇಕಿದೆ. ನಿರ್ಮಲ, ನಿಷ್ಕಳಂಕ ಮಕ್ಕಳ ಮನಸಿನ ಮೇಲೆ ಕೆಟ್ಟ ಪರಿಣಾಮ ಉಂಟಾಗದಂತೆ ಕ್ರಮವಹಿಸಬೇಕಿದೆ. ಶಿಸ್ತು, ಸಂಯಮ, ಈ ನೆಲದ ಸಂಸ್ಕಾರ, ಸಭ್ಯತೆ, ಪರಂಪರೆಯನ್ನು ತಿಳಿಸುವ ಮೂಲಕ ಸದೃಢ ಸಮಾಜ ನಿರ್ಮಾಣ ಮಾಡಬೇಕಿದೆ ಎಂದರು.

ಕಾರ್ಯಕ್ರಮ ಉದ್ಘಾಟಿಸಿದ ಯೋಜನಾಧಿಕಾರಿ ಶುಭಾದೇವಿ ಮಾತನಾಡಿ, ಇಂದಿನ ಮಕ್ಕಳು ನಾಳೆಯ ಸಮಾಜ ನಿರ್ಮಾತೃಗಳಾಗಿದ್ದು, ಮಕ್ಕಳ ಶೈಕ್ಷಣಿಕ ಪ್ರಗತಿ ಹಾಗೂ ಆರೋಗ್ಯದ ಬಗ್ಗೆ ನಾವು ಹೆಚ್ಚು ಎಚ್ಚರಿಕೆಯಿಂದಿರುವುದು ಅವಶ್ಯಕ ಎಂದರು.

ಕಾರ್ಯಕ್ರಮದಲ್ಲಿ ವಲಯ ಮೇಲ್ವಿಚಾರಕಿ ಅಂಬಿಕಾ, ಸೇವಾ ಪ್ರತಿನಿಧಿ ರಾಣಿ, ಶಾಲೆಯ ಉಪ ಮುಖ್ಯಶಿಕ್ಷಕಿ ಶಶಿಕಲಾ ಹಾಗೂ ಸಹಶಿಕ್ಷಕರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net