

ಔರಾದ್: ತಂತ್ರನವು ವಿಶ್ವ ಗ್ರಂಥಾಲಯದ ಪರಿಕಲ್ಪನೆಗೆ ವರದಾನವಾಗಿದೆ. ಹೆಚ್ಚು ಹೆಚ್ಚು ತಂತ್ರಜ್ಞಾನ ಅಳವಡಿಸಿಕೊಂಡು ಗ್ರಂಥಾಲಯ ಅಭಿವೃದ್ಧಿ ಮಾಡಬಹುದು ಎಂದು ಎಂದು ಜಿಪಂ ಯೋಜನಾ ನಿರ್ದೇಶಕ, ತಾಪಂ ಆಡಳಿತಾಧಿಕಾರಿ ಜಗನ್ನಾಥ ಮೂರ್ತಿ ಹೇಳಿದರು.
ಪಟ್ಟಣದ ಸಾಮರ್ಥ್ಯ ಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಶಿಕ್ಷಣ ಫೌಂಡೇಷನ್ ಹಾಗೂ ಡೆಲ್ ಸಂಸ್ಥೆ ಸಹಯೋಗದಲ್ಲಿ ಗುರುವಾರ ಏರ್ಪಡಿಸಿದ್ದ ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಲ್ಲಿ ಐದು ಗ್ರಂಥಾಲಯಗಳಿಗೆ ಲ್ಯಾಪ್‌ಟಾಪ್ ವಿತರಿಸಿ ಮಾತನಾಡಿ, ಗ್ರಾಮೀಣ ಜನರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗಲು ಗ್ರಂಥಾಲಯಗಳಿಗೆ ವಿವಿಧ ಸಾಧನ ವಿತರಿಸಲಾಗಿದ್ದು, ಸದ್ಬಳಕೆ ಮಾಡಿಕೊಳ್ಳಬೇಕು ಎಂದರು.
ತಾಪಂ ಇಒ ಬೀರೇಂದ್ರಸಿಂಗ್ ಠಾಕೂರ್ ಮಾತನಾಡಿ, ಗ್ರಾಮ ಡಿಜಿ ವಿಕಸನ ಕಾರ್ಯಕ್ರಮದಡಿ ಶಿಕ್ಷಣ ಪೀಡಿಯಾ ಅಪ್ಲಿಕೇಷನ್ ಅಭಿವೃದ್ಧಿಪಡಿಸಲಾಗಿದೆ. ಪ್ರೌಢ ಶಾಲೆ ಮತ್ತು ಪಿಯು ಪಾಠಗಳ ವೀಕ್ಷಣೆಗೆ ವಿದ್ಯಾರ್ಥಿಗಳಿಗೆ ಸಹಕಾರಿ ಆಗಲಿದೆ ಎಂದರು.
ಪಂಚಾಯಿತಿ ಮಟ್ಟದಲ್ಲಿ ಗ್ರಂಥಾಲಯಗಳಿವೆ. ವಿದ್ಯಾರ್ಥಿಗಳು ಅದರ ಸದುಪಯೋಗ ಪಡೆದುಕೊಳ್ಳಬೇಕು. ಗ್ರಾಪಂನಿಂದ ಹೈಟೆಕ್ ಗ್ರಂಥಾಲಯ ಮಾಡಲು ಅವಕಾಶವಿದೆ ಎಂದರು. ತಾಲೂಕಿನ ಎಕಲಾರ, ಶೆಂಬೆಳ್ಳಿ, ಲಾಧಾ, ಸುಂಧಾಳ, ಬೆಳಕುಣಿ (ಚೌ), ಬೋಂತಿ ಗ್ರಂಥಾಲಯಗಳ ಗ್ರಂಥಪಾಲಕರಿಗೆ ಲ್ಯಾಪ್‌ಟಾಪ್ ವಿತರಿಸಲಾಯಿತು.
ಗ್ರಂಥಪಾಲಕರ ಸಂಘದ ಜಿಲ್ಲಾ ಉಪಾಧ್ಯಕ್ಷ ಸಂತೋಷ ಎಸ್ ಭಾಲ್ಕೆ ಮಾತನಾಡಿದರು. ಗ್ರಾಮ ಡಿಜಿ ವಿಕಾಸನದ ಜಿಲ್ಲಾ ಸಂಯೋಜಕ ಸೂರ್ಯಕಾಂತ ತಳಘಾಟೆ, ತಾಲೂಕು ಸಂಯೋಜಕ ಮಲ್ಲಿಕಾರ್ಜುನ ಭಾಲ್ಕೆ, ಪ್ರಮುಖರಾದ ರಾಜಪ್ಪ ದೊಡ್ಡಿ ಇತರರಿದ್ದರು.