

ಮೈಸೂರು: ಶುಶ್ರೂಷಕರ ಸ್ಪರ್ಶದಿಂದ ಸಿಗುವ ಆರೈಕೆ ಅನುಭವವನ್ನು ಯಾವುದೇ ತಂತ್ರಜ್ಞಾನ ನೀಡಲು ಆಗುವುದಿಲ್ಲ ಎಂದು ತಮಿಳುನಾಡಿನ ಅಣ್ಣೈ ಜೆಕೆಕೆ ಸಂಪೂರಾಣಿ ಅಮ್ಮಳ್ ನರ್ಸಿಂಗ್ ಕಾಲೇಜ್ ಮುಖ್ಯಸ್ಥ ಡಾ.ಜಯಶೀಲನ್ ಮಾಣಿಕ್ಕಮ್ ದೇವದಾಸನ್ ಅಭಿಪ್ರಾಯಪಟ್ಟರು.
ಜೆಎಸ್‌ಎಸ್ ನರ್ಸಿಂಗ್ ಕಾಲೇಜಿನಿಂದ ಜೆಎಸ್‌ಎಸ್ ಆಸ್ಪತ್ರೆಯ ಶ್ರೀರಾಜೇಂದ್ರ ಶತಮಾನೋತ್ಸವ ಸಭಾಂಗಣದಲ್ಲಿ ಮಂಗಳವಾರ ಆಯೋಜಿಸಿದ್ದ ಚಿಕಿತ್ಸಾ ವಿಧಾನದಲ್ಲಿ ರೂಪಾಂತರತೆ ಕುರಿತ ಎರಡು ದಿನದ ಸಮ್ಮೇಳನಕ್ಕೆ ಚಾಲನೆ ನೀಡಿ ಮಾತನಾಡಿದರು.
ವೈದ್ಯಕೀಯ ಕ್ಷೇತ್ರದಲ್ಲಿ ತಂತ್ರಜ್ಞಾನ ಎಷ್ಟೇ ಪಾರಮ್ಯ ಸಾಧಿಸಿದ್ದರೂ, ರೋಗಿಯ ಆರೈಕೆಗೆ ಶುಶ್ರೂಷಕರು ಬೇಕೇ ಬೇಕು. ರೋಗಿಯ ಆರೈಕೆ, ಶುಶ್ರೂಷಕರ ಕಾಳಜಿ ಬಗ್ಗೆ ಫ್ಲಾರೆನ್ಸ್ ನೈಟಿಂಗೇಲ್ ಹೇಳಿದ ಪಾಠಗಳು ಸದಾ ಅನುಕರಣೀಯ. ಕಾಯಿಲೆ ಗುಣವಾಗಬೇಕಾದರೆ ಸ್ವಚ್ಛತೆ ಎಷ್ಟು ಮುಖ್ಯ ಎಂಬುವ ಪ್ರಥಮ ಪಾಠಗಳು ಕೋವಿಡ್ ಸಂದರ್ಭದಲ್ಲೂ ಪದೇ ಪದೇ ಕೈತೊಳೆದುಕೊಳ್ಳುವಾಗ ಎಲ್ಲರಿಗೂ ಅರ್ಥವಾಗಿದೆ ಎಂದರು.
ಮೆಡಿಕಲ್, ಎಂಜಿನಿಯರಿಂಗ್ ಕ್ಷೇತ್ರ ಬೆಳೆದಿದ್ದರೂ ಚಿಕಿತ್ಸಾ ವಿಧಾನ ಬದಲಾಗಲ್ಲ. ರೋಬಾಟ್ ಬಂದ ಮೇಲೆ ವೈದ್ಯರು ಶುಶ್ರೂಷಕರೇ ಇಲ್ಲವಾಗುತ್ತಾರೆ ಎನ್ನುವ ಕಲ್ಪನೆ 40 ವರ್ಷದ ಹಿಂದೆ ಬೆಳೆದಿದ್ದವು. ಆದರೆ ತಂತ್ರಜ್ಞಾನ ಎಷ್ಟೇ ಬೆಳೆದರು ವೈದ್ಯರು ಶುಶ್ರೂಷಕರ ಕಾರ್ಯವನ್ನು ಯಾವುದೇ ತಂತ್ರಜ್ಞಾನದಿಂದ ಬದಲಿಸಲು ಸಾಧ್ಯವಿಲ್ಲ. ಕೃತಕ ಬುದ್ಧಿಮತ್ತೆ, ರೋಬಾಟ್ ತಂತ್ರಜ್ಞಾನಗಳು ಸಹ ಸೇವೆಯನ್ನು ಬದಲಿಸಲು ಆಗದು ಎಂದು ಹೇಳಿದರು.
ಕೋವಿಡ್‌ಗೂ ಮೊದಲು ನರ್ಸಿಂಗ್ ಶಿಕ್ಷಣದಿಂದ ಹಲವರು ವಿಮುಖರಾಗಿದ್ದರು. ಆದರೆ ಕೋವಿಡ್ ಸಮಯದಲ್ಲಿ ಶುಶ್ರೂಷಕರ ಬೆಲೆ ಎಲ್ಲರಿಗೂ ತಿಳಿಯಿತು. ಇದರಿಂದ ವೈದ್ಯಕೀಯ ಕ್ಷೇತ್ರದಲ್ಲಿ ವಿಪುಲ ಅವಕಾಶಗಳು ಸೃಷ್ಟಿಯಾಗಿವೆ ಎಂದು ತಿಳಿಸಿದರು.
ಕೋಯಿಕೋಡ್‌ನ ಬೇಬಿ ಮೆಮೋರಿಯಲ್ ಆಸ್ಪತ್ರೆಯ ನರ್ಸಿಂಗ್ ವಿಭಾಗದ ಅಧಿಕಾರಿ ಪ್ರೊ.ಎಲಿಜಬೆತ್ ವಾರ್ಕಿ ಮಾತನಾಡಿ, ಪದವಿ ಮುಗಿದ ನಂತರ ಉದ್ಯೋಗ ಅರಸಿ ಬೇರೋಲ್ಲೋ ಹೋಗುವುದಕ್ಕಿಂತ ನಿಮ್ಮ ಊರಿನ ರೋಗಿಗಳಿಗೆ ಆರೈಕೆ ಮಾಡಬೇಕು. ನಾವು ಬದುಕುವ ಪರಿಸರವನ್ನು ಆರೋಗ್ಯಪೂರ್ಣವಾಗಿಸುವುದು ಎಲ್ಲರ ಜವಾಬ್ದಾರಿಯಾಗಿದೆ ಎಂದು ಸಲಹೆ ನೀಡಿದರು.
ಕಾಲೇಜಿನ ಪ್ರಾಂಶುಪಾಲರಾದ ಪ್ರೊ.ಎಂ.ಕೆ.ಅಶ್ವಥಿದೇವಿ, ಜೆಎಸ್‌ಎಸ್ ವಿದ್ಯಾಪೀಠದ ಉಪನಿರ್ದೇಶಕ ಡಾ.ಶ್ಯಾಮ ಪ್ರಸಾದ್ ಶೆಟ್ಟಿ ಇದ್ದರು.