

ಮೈಸೂರು: ತಂತ್ರಜ್ಞ್ಞಾನದ ಜತೆ ಸಾಹಿತ್ಯದ ಜತೆಗೆ ನಂಟು ಬೆಳೆಸಿಕೊಳ್ಳಬೇಕು. ವರ್ತಮಾನದಲ್ಲಿ ಸಾಹಿತ್ಯದ ಜತೆಗೆ ಸಂಗಮ ಮಾಡಿಕೊಂಡರೆ ಜಾಗತಿಕ ಮಟ್ಟದಲ್ಲಿ ನಮ್ಮನ್ನು ಗುರುತಿಸಿಕೊಳ್ಳಬಹುದು ಎಂದು ಕರಾಮುವಿ ಅಕ್ಕಮಹಾದೇವಿ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದ ನಿರ್ದೇಶಕಿ ಪ್ರೊ.ಕವಿತಾ ರೈ ಸಲಹೆ ನೀಡಿದರು.
ಶೇಷಾದ್ರಿಪುರಂ ಪದವಿ ಕಾಲೇಜಿನಲ್ಲಿ ಆಯೋಜಿಸಿದ್ದ ಬಹುಭಾಷಾ ರಾಷ್ಟ್ರೀಯ ವಿಚಾರ ಸಂಕಿರಣ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಂತ್ರಜ್ಞಾನಕ್ಕೆ ಎಷ್ಟು ಸಾಧ್ಯವೋ ಅಷ್ಟು ನಾವು ಮುಖ ಮಾಡಿದ್ದೇವೆ.
ಜತೆಗೆ ಇದರಿಂದ ವಿಲಕ್ಷಣವನ್ನೂ ಅನುಭವಿಸುತ್ತಿದ್ದೇವೆ. ಕುವೆಂಪು ಅವರು ಹೇಳಿದ ಮನುಜ ಮತ ವಿಶ್ವಪಥದ ಸಂದೇಶಗಳ ಮೂಲಕ ನಮ್ಮ ಜೀವನವನ್ನು ನಡೆಸಬೇಕು. ಪೂರ್ಣಚಂದ್ರ ತೇಜಸ್ವಿ, ಪಿ.ಲಂಕೇಶ್ ಅವರ ಕಥೆ, ಕಾದಂಬರಿಗಳನ್ನು ಹೆಚ್ಚಾಗಿ ಓದಬೇಕು ಎಂದರು.
ದೇಶಿಯ ಭಾಷೆ ಜತೆಗೆ ಜಾಗತಿಕತೆ, ನಾಗರಿಕತೆ ಹೇಗೆ ಸೇರಿಕೊಂಡಿತು ಎಂಬುದನ್ನು ಕಾಣಬಹುದಾಗಿದೆ. ಸಾಹಿತ್ಯ ಮನಸ್ಸನ್ನು ಶೋಧಿಸುವುದಲ್ಲದೆ ಸಮಾನತೆಯನ್ನು ಬೆಸೆಯುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಮಹಾರಾಜ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕ ಡಾ.ಪಿ.ವೆಂಕಟೇಶ್ ಮಾತನಾಡಿ, ಯಾಂತ್ರಿಕೃತಗೊಂಡ ಡೇಟಾ ವಿಶ್ಲೇಷಣೆ ಮೂಲಕ ಆನ್‌ಲೈನ್ ಹೇಗೆ ವಿವಿಧ ಕೇಂದ್ರಗಳಲ್ಲಿ ಕ್ರಾಂತಿ ಉಂಟು ಮಾಡಿದೆ.
ಆನ್‌ಲೈನ್ ಬಳಕೆ ಮತ್ತು ಮಾನವ ನಾವೀನ್ಯತೆಯ ನಡುವೆ ಸಮತೋಲನವನ್ನು ಕಾಪಾಡಿಕೊಳ್ಳಬೇಕು. ಡಿಜಿಟಲೀಕರಣವು ಜ್ಞಾನವನ್ನು ಹೆಚ್ಚು ಪರಿಣಾಮಕಾರಿಯಾಗಿ ಸಂರಕ್ಷಿಸುವ ಮೂಲಕ ಸಂಶೋಧನೆ ಮತ್ತು ಕಲಿಕೆಯನ್ನು ಬೆಂಬಲಿಸುತ್ತದೆ ಎಂದರು.
ಬೆಳಗಾವಿಯ ಡಾ.ಎ.ಎಂ.ಕೊಟ್ರೆಸ್ವಾಮಿ ಅವರು ಸಂಶೋಧನಾ ಬರವಣಿಗೆಗಳ ಗುಣಮಟ್ಟದ ಬಗ್ಗೆ ತಿಳಿಸಿದರು.
ಪ್ರಾಧ್ಯಾಪಕಿ ಡಾ.ಸೌಮ್ಯಾ ಈರಪ್ಪ ಮಾತನಾಡಿ, ಮುಂದಿನ ಪೀಳಿಗೆ ಸಾಹಿತ್ಯದ ಓದುವಿನ ದಾಹವನ್ನು ಹೆಚ್ಚಿಸಿಕೊಳ್ಳಬೇಕು. ಅಲ್ಲದೆ ಅವರಿಗೆ ಇವತ್ತಿನ ಸಾಮಾಜಿಕ ಜಾಲತಾಣಗಳಲ್ಲಿ ಬೇಕಾದಂತಹ ಎಲ್ಲ ಸಾಹಿತ್ಯಗಳು ಕೈಗೆಟಕುವಂತಿವೆ. ಆದ್ದರಿಂದ ಸಾಹಿತ್ಯದ ಓದುವಿನಿಂದ ಉತ್ತಮವಾದ ಮೌಲ್ಯ ರೂಢಿಸಿಕೊಳ್ಳಬಹುದು ಎಂದು ತಿಳಿಸಿದರು.
ಸಾಹಿತ್ಯ ಓದುವುದರಿಂದ ಸಮಾಜದಲ್ಲಿ ಆಗುವಂತಹ ತೊಂದರೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಸಾಹಿತ್ಯ ಓದುವಿಗೆ ಇಂಥದ್ದೇ ಭಾಷೆ ಇರಬೇಕೆಂದಿಲ್ಲ, ಯಾವುದಾದರೂ ಭಾಷೆಯ ಸಾಹಿತ್ಯವನ್ನು ಓದುವುದರಿಂದ ಭಾಷೆಗಳ ಕಲಿಕೆಗೆ ಅವಕಾಶವಾಗುತ್ತದೆ. ಇವತ್ತಿನ ಸಾಮಾಜಿಕ ಮಾಧ್ಯಮಗಳಿಂದ ನಮಗೆ ಬೇಕಾದಂತ ಭಾಷೆಯ ಸಾಹಿತ್ಯವನ್ನು ಓದಬಹುದಾಗಿದೆ ಎಂದು ತಿಳಿಸಿದರು.
ಸಮಾರೋಪ ಕಾರ್ಯಕ್ರಮದಲ್ಲಿ ವಿಶ್ರಾಂತ ಪ್ರಾಧ್ಯಾಪಕ ಪ್ರೊ.ಪ್ರತಿಭಾ ಮುದ್ಲಿಯರ್ ಮಾತನಾಡಿ, ಭಾಷೆ ಎಂಬುದು ಒಂದು ಮಾಧ್ಯಮ. ಭಾಷೆ ಬಗ್ಗೆ ಯಾರಿಗೂ ವೈಮನಸ್ಸು ಇರುವುದಿಲ್ಲ. ನಾವು ಮಕ್ಕಳಿಗೆ ಅವರ ಸ್ವಂತಿಕೆಗೆ ಭಾಷೆಯನ್ನು ಕಲಿಯುವ ಸಂದರ್ಭದಲ್ಲಿ ಆಯ್ಕೆಗೆ ಬಿಡುವುದಿಲ್ಲ.
ಭಾಷೆಯನ್ನು ಕಲಿಯಲು ಯಾವುದೇ ರೀತಿಯ ತೊಂದರೆ ಇಲ್ಲ. ಮಕ್ಕಳು ಇವತ್ತಿನ ತಂತ್ರಜ್ಞಾನವನ್ನು ಬಳಸಿಕೊಂಡು ಪ್ರಪಂಚದ ಯಾವುದಾದರೂ ಭಾಷೆಯನ್ನು ಕಲಿಯಬಹುದಾಗಿದೆ. ಯಾವುದನ್ನು ಕಲಿಯಬೇಕಾದರೂ ಭಾಷೆ ಅಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಸಾಹಿತ್ಯ ನಾಗರಿಕನಾಗಲು ಹಾಗೂ ಸಂಸ್ಕೃತನಾಗಿ ಬದುಕುವುದನ್ನು ತಿಳಿಸಿಕೊಡುತ್ತದೆ ಎಂದು ತಿಳಿಸಿದರು.