ತಂತ್ರಜ್ಞಾನದ ಜತೆ ಇಂಗ್ಲೀಷ್ ಜ್ಞಾನ ಅಗತ್ಯ

CTD 21 BAPJJI--0001
Published on

ಚಿತ್ರದುರ್ಗ: ಪ್ರಸ್ತುತ ವಿಜ್ಞಾನ-ತಂತ್ರಜ್ಞಾನದ ಈ ಜಗತ್ತಿನಲ್ಲಿ ಮಾಹಿತಿ, ಸಂವಹನ ಕೌಶಲ, ತಂತ್ರಜ್ಞಾನವಿಲ್ಲದಿದ್ದರೆ ಉತ್ತಮ ಶಿಕ್ಷಕರಾಗಲು ಸಾಧ್ಯವಾಗದು ಎಂದು ದಾವಣಗೆರೆ ವಿವಿ ಉಪಕುಲಪತಿ ಡಾ.ಬಿ.ಡಿ.ಕುಂಬಾರ ಅಭಿಪ್ರಾಯಪಟ್ಟರು.
ನಗರದ ಬಾಪೂಜಿ ಶಿಕ್ಷಣ ಮಹಾವಿದ್ಯಾಲಯದಲ್ಲಿ ಗುರುವಾರ ಏರ್ಪಡಿಸಿದ್ದ ದಾವಣಗೆರೆ ವಿವಿದ್ಯಾನಿಲಯದ 4ನೇ ಸೆಮಿಸ್ಟರ್ ಬಿಇಡಿ ಪ್ರಶಿಕ್ಷಣಾರ್ಥಿಗಳ ಬೀಳ್ಕೊಡುಗೆ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಮಾಹಿತಿ ತಂತ್ರಜ್ಞಾನದೊಂದಿಗೆ ಇಂಗ್ಲಿಷ್ ಭಾಷೆ ಮೇಲೆ ಹಿಡಿತ ಹೊಂದುವುದು ಅನಿವಾರ‌್ಯವಾಗಿದೆ. ಬಿಇಡಿ ಪದವೀಧರರೆಲ್ಲರೂ ಶಿಕ್ಷಕರಾಗಬೇಕೆಂದಿಲ್ಲ. ಬೇರೆ, ಬೇರೆ ಕ್ಷೇತ್ರಗಳಲ್ಲೂ ಸಾಕಷ್ಟು ಅವಕಾಶಗಳಿವೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಾಪೂಜಿ ಸಮೂಹ ಸಂಸ್ಥೆಗಳ ಕಾರ್ಯದರ್ಶಿ ಕೆ.ಎಂ.ವೀರೇಶ್ ಮಾತನಾಡಿ, ಶ್ರೇಷ್ಠ ಶಿಕ್ಷಕನಿಂದ ಸಮಾಜದಲ್ಲಿ ಬದಲಾವಣೆ ಸಾಧ್ಯವಾಗಲಿದೆ ಎಂದು ಹೇಳಿದರು.
ಸಾನ್ನಿಧ್ಯ ವಹಿಸಿದ್ದ ವಿಜಯಪುರ ವನಶ್ರೀ ಮಠದ ಶ್ರೀ ಬಸವಕುಮಾರ ಸ್ವಾಮೀಜಿ ಮಾತನಾಡಿ, ಮನಸ್ಸಿನ ಹತೋಟಿಯೇ ನಿಜವಾದ ಮಂತ್ರ. ಕೃತಜ್ಞತೆಗಿಂತ ಮಿಗಿಲಾದುದು ಮತ್ತೊಂದಿಲ್ಲ. ಶಿಕ್ಷಕರು ಆದರ್ಶ, ಮೌಲ್ಯಗಳೊಂದಿಗೆ ಇತರರಿಗೆ ಮಾದರಿಯಾಗಿರಬೇಕು ಎಂದರು.
ಬಾಪೂಜಿ ಸಮೂಹ ಸಂಸ್ಥೆಗಳ ನಿರ್ದೇಶಕ ಕೆ.ಎಂ.ಚೇತನ್, ಎಸ್‌ಆರ್‌ಎಸ್ ವಿದ್ಯಾಸಂಸ್ಥೆ ಆಡಳಿತಾಧಿಕಾರಿ ರವಿ, ಸನ್ಮಾನ ಸ್ವೀಕರಿಸಿದ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ ಪುರಸ್ಕೃತ ರಂಗಶಿಕ್ಷಕ ಪಿ.ತಿಪ್ಪೇಸ್ವಾಮಿ ಮಾತನಾಡಿದರು.
ವಿವಿ ಸಿಂಡಿಕೇಟ್ ಸದಸ್ಯೆ ಎಂ.ಆರ್.ಜಯಲಕ್ಷ್ಮಿ, ಉಪ ಪ್ರಾಚಾರ್ಯ ಎಚ್.ಎನ್.ಶಿವಕುಮಾರ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net