ತಂತ್ರಜ್ಞಾನಕ್ಕೆ ಹೊಂದಿಕೊಳ್ಳಲಿ ಶಿಕ್ಷಕರು  -ಪ್ರೊ.ಎಸ್.ಬಿ.ರಂಗನಾಥ ಸಲಹೆ - ವಿಶ್ವವಿದ್ಯಾನಿಲಯದಲ್ಲಿ ಶಿಕ್ಷಕರ ದಿನಾಚರಣೆ

Screenshot_2023-09-06-00-46-14-701_com.android.chrome.jpg
Published on

ದಾವಣಗೆರೆ: ಶಿಕ್ಷಕರು ಬೋಧನಾ ವಿಧಾನಗಳನ್ನು ನಿರಂತರವಾಗಿ ನವೀಕರಿಸಿ, ಸಂಶೋಧನೆಗಳನ್ನು ಸಂಯೋಜಿಸಿಕೊಳ್ಳಬೇಕು. ಬದಲಾಗುತ್ತಿರುವ ತಂತ್ರಜ್ಞಾನ, ಶೈಕ್ಷಣಿಕ ಪ್ರವೃತ್ತಿಗಳಿಗೆ ಹೊಂದಿಕೊಳ್ಳಬೇಕು ಎಂದು ಸಿರಿಗೆರೆ ತರಳಬಾಳು ಬೃಹನ್ಮಠದ ಪ್ರಧಾನ ಕಾರ್ಯದರ್ಶಿ ಪ್ರೊ.ಎಸ್.ಬಿ.ರಂಗನಾಥ ಸಲಹೆ ನೀಡಿದರು.

ದಾವಣಗೆರೆ ವಿಶ್ವವಿದ್ಯಾನಿಲಯದಲ್ಲಿ ದಾವಿವಿ ಅಧ್ಯಾಪಕರ ಸಂಘದಿಂದ ಮಂಗಳವಾರ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಕರು ಜ್ಞಾನ ಪ್ರಸಾರದ ಪ್ರಾಥಮಿಕ ಮೂಲವಾಗಿದ್ದಾರೆ. ಗುಣಮಟ್ಟದ ಶಿಕ್ಷಣ ನೀಡಿ ವೃತ್ತಿ ಕೌಶಲ ಮತ್ತು ಪರಿಣತಿ ಪಡೆದು ಬದುಕು ಕಟ್ಟಿಕೊಳ್ಳಲು ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕು ಎಂದು ಹೇಳಿದರು.

ಶಿಕ್ಷಕರ ದಿನಾಚರಣೆ, ಶಿಕ್ಷಣ ತಜ್ಞ ಡಾ.ಸರ್ವೆಪಲ್ಲಿ ರಾಧಾಕೃಷ್ಣನ್ ಜೀವನ ಮತ್ತು ಕೊಡುಗೆ ಸ್ಮರಿಸುವ ದಿನವಾಗಿದೆ. ಗುರುಗಳಿಗೆ ಕೃತಜ್ಞತೆ ಮತ್ತು ಗೌರವವನ್ನು ವ್ಯಕ್ತಪಡಿಸುವ ಸಂದರ್ಭವಾಗಿದೆ. ಬೋಧನೆಯನ್ನು ಉದಾತ್ತ ವೃತ್ತಿಯಾಗಿ ಪರಿಗಣಿಸಲು ಮತ್ತು ಶಿಕ್ಷಣ ಕ್ಷೇತ್ರದ ಬೆಳವಣಿಗೆಗೂ ಇದು ಕೊಡುಗೆಯಾಗಿದೆ ಎಂದು ಹೇಳಿದರು.

ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಬಕ್ಕಪ್ಪ ಮಾತನಾಡಿ, ಶಿಕ್ಷಕರು ರೂಢಿಸಿಕೊಂಡ ಶ್ರದ್ಧೆ, ಪ್ರಾಮಾಣಿಕತೆ, ವೃತ್ತಿಪರತೆ ಮತ್ತು ಸೇವಾನಿಷ್ಠೆ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಿ ಉತ್ತಮ ಭವಿಷ್ಯವನ್ನು ರೂಪಿಸಿಕೊಳ್ಳಲು ನೆರವಾಗುತ್ತವೆ ಎಂದು ಅಭಿಪ್ರಾಯಪಟ್ಟರು.

ಕುಲಪತಿ ಪ್ರೊ.ಬಿ.ಡಿ.ಕುಂಬಾರ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಜ್ಞಾನದ ವಿಸ್ತರಣೆಗೆ ನೀಡುವ ಕೊಡುಗೆ ಮತ್ತು ಸಂಶೋಧನೆಗಳು ರಾಷ್ಟ್ರದ ಪ್ರಗತಿಯ ಮೇಲೆ ನೇರ ಪರಿಣಾಮ ಬೀರುವ ಕಾರ್ಯ ನಿರ್ವಹಿಸುವ ದಾವಿವಿ ಪ್ರಾಧ್ಯಾಪಕರಿಗೆ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಭರವಸೆ ನೀಡಿದರು.

ಪರೀಕ್ಷಾಂಗ ಕುಲಸಚಿವ ಡಾ.ಕೆ.ಶಿವಶಂಕರ, ಹಣಕಾಸು ಅಧಿಕಾರಿ ಪ್ರೊ. ಆರ್.ಶಶಿಧರ, ನಿವೃತ್ತ ಪ್ರಾಧ್ಯಾಪಕ ಪ್ರೊ.ಎನ್.ಕೆ.ಗೌಡ ಮಾತನಾಡಿದರು. ಉಪಾಧ್ಯಕ್ಷ ಪ್ರೊ.ಜೆ.ಕೆ.ರಾಜು ಇದ್ದರು.

ಪ್ರೊ. ಗೋಪಾಲ ಎಂ.ಅಡವಿರಾವ್, ಎಚ್.ಜೆ. ಪೂರ್ಣಚಂದ್ರ, ಡಾ.ಎಂ.ಎಸ್.ರಾಜಕುಮಾರ ಇತರರನ್ನು ಸನ್ಮಾನಿಸಲಾಯಿತು. ಡುಟಾ ಅಧ್ಯಕ್ಷ ಡಾ.ಶಿವಕುಮಾರ ಕಣಸೋಗಿ ಸ್ವಾಗತಿಸಿದರು. ಡಾ.ಭೀಮಾಶಂಕರ ಜೋಶಿ ಕಾರ್ಯಕ್ರಮ ನಿರೂಪಿಸಿದರು.ಡಾ.ಕೆ.ವೆಂಕಟೇಶ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net