

ಹಾಸನ: ತಲತಲಾಂತರದಿಂದ ಮಾಡಿಕೊಂಡು ಬಂದಿರುವ ಕಸುಬುಗಳಿಗೆ ತಂತ್ರಜ್ಞಾನ ಬಳಸಿಕೊಂಡು ಹೇಗೆ ಹೊಸ ರೂಪ ನೀಡಬಹುದು ಎಂಬುದನ್ನು ಆಲೋಚಿಸಿ ಉದ್ಯಮವನ್ನು ಉನ್ನತೀಕರಿಸಿಕೊಳ್ಳುವಂತೆ ಜಿಲ್ಲಾಧಿಕಾರಿ ಸಿ.ಸತ್ಯಭಾಮಾ ಅವರು ಕುಶಲಕರ್ಮಿಗಳಿಗೆ ಕರೆ ನೀಡಿದರು.
ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಗುರುವಾರ ಪ್ರಧಾನಮಂತ್ರಿ ವಿಶ್ವಕರ್ಮ ಯೋಜನೆಯಡಿ ಗುರುವಾರ ಆಯೋಜಿಸಲಾಗಿದ್ದ ಕಾರ್ಯಾಗಾರ ಮತ್ತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೊಸ ಕೌಶಲದೊಂದಿಗೆ ಕಲಾತ್ಮಕವಾಗಿ ಉತ್ತಮ ಗುಣಮಟ್ಟದ ವಸ್ತುಗಳನ್ನು ತಯಾರು ಮಾಡುವ ಮೂಲಕ ಜನರಿಗೆ ಸೇವೆ ನೀಡದಾಗ ಜನರು ತಮ್ಮ ಸೇವೆಗೆ ಮನಸೋತು ತಮ್ಮನ್ನು ಹುಡುಕಿಕೊಂಡು ಬರುತ್ತಾರೆ. ಈ ನಿಟ್ಟಿನಲ್ಲಿ ಶ್ರಮಪಟ್ಟು ಕೆಲಸ ಮಾಡಿ ಅಭಿವೃದ್ಧಿ ಹೊಂದುವುದರ ಜತೆಗೆ ಉತ್ತಮ ಹೆಸರು ಗಳಿಸುವಂತೆ ತಿಳಿಸಿದರು.
ಹೆಣ್ಣು ಮಕ್ಕಳು ಸಣ್ಣ ಸಣ್ಣ ಉದ್ಯಮಗಳನ್ನು ಪ್ರಾರಂಭಿಸಿ ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಯಾರ ಮೇಲು ಅವಲಂಬಿರಾಗದಂತೆ ಜೀವನ ರೂಪಿಸಿಕೊಳ್ಳಿ. ಪಿಎಂ ವಿಶ್ವಕರ್ಮ ಯೋಜನೆಯಡಿ ಸಾಲ ಸೌಲಭ್ಯ ಪಡೆದುಕೊಂಡು ಪ್ರಾಮಾಣಿಕವಾಗಿ ನಿಗದಿತ ಸಮಯದಲ್ಲಿ ಕಂತುಗಳನ್ನು ಬ್ಯಾಂಕ್ಗಳಿಗೆ ಮರುಪಾವತಿ ಮಾಡುವ ಮೂಲಕ ಉದ್ಯಮವನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದರು.
ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಬಿ.ಆರ್.ಪೂರ್ಣಿಮಾ ಅವರು ಮಾತನಾಡಿ, ವಿಶ್ವಕರ್ಮ ಯೋಜನೆಯಡಿ ಆಯೋಜಿಸುವ ಕಾರ್ಯಾಗಾರದಲ್ಲಿ ನೀಡುವ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ತಿಳಿದುಕೊಂಡು ಸದುಪಯೋಗಪಡಿಸಿಕೊಳ್ಳಬೇಕು. ಕುಶಲಕರ್ಮಿಗಳನ್ನು ಬಲಪಡಿಸಲು ಬ್ಯಾಂಕ್ಗಳ ಮೂಲಕ ಆರ್ಥಿಕ ನೆರವು ನೀಡಲಾಗುತ್ತದೆ. ಶೇ. 5 ಬಡ್ಡಿ ದರದಲ್ಲಿ ಮೊದಲ ಹಂತದಲ್ಲಿ ಒಂದು ಲಕ್ಷ ರೂ. ಸಾಲವನ್ನು ನೀಡಲಾಗುತ್ತದೆ. ಅದನ್ನು ನಿಗದಿತ ಸಮಯದಲ್ಲಿ ಮರುಪಾವತಿ ಮಾಡಿದರೆ 2ನೇ ಹಂತದಲ್ಲಿ 2 ಲಕ್ಷ ರೂ. ಪಡೆಯಬಹುದು. 18 ಸಾಂಪ್ರದಾಯಿಕ ಚಟುವಟಿಕೆಗಳಲ್ಲಿ ಈ ಸೌಲಭ್ಯ ಬಳಸಿಕೊಳ್ಳಬಹುದಾಗಿದೆ ಎಂದು ತಿಳಿಸಿದ್ದರು.
ಎರಡು ತಿಂಗಳಿಂದ ಗ್ರಾಮ ಪಂಚಾಯಿತಿಗಳಲ್ಲಿ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಬ್ಯಾಂಕ್ಗಳಲ್ಲಿ ಸರಿಯಾದ ದಾಖಲಾತಿಗಳನ್ನು ನೀಡಿ ಸಾಲ ಸೌಲಭ್ಯವನ್ನು ಪಡೆಯಬಹುದು. ಆರ್ಥಿಕವಾಗಿ ಸ್ವಾವಲಂಬಿತರಾಗಲು ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮ ಅಭಿವೃದ್ಧಿಯ ಜಂಟಿ ನಿರ್ದೇಶಕ ಡಾ.ಸಾಕ್ರೆಟಿಸ್, ಉಪ ನಿರ್ದೇಶಕ ಆರ್.ಗೋಪಿನಾಥ್ ರಾವ್, ಎಂ.ಶಶಿಕುಮಾರ್, ಜಿಲ್ಲಾ ಜಂಟಿ ಕೈಗಾರಿಕಾ ನಿರ್ದೇಶಕ ಸಿದ್ದರಾಜು, ಜಿಲ್ಲಾ ಕೌಶಲಾಭಿವೃದ್ಧಿ ಅಧಿಕಾರಿ ಶಿವಕುಮಾರ್ ಇತರರು ಇದ್ದರು.