

ಮೈಸೂರು: ಕೌಶಲಾಧಾರಿತ ಶಿಕ್ಷಣದೊಂದಿಗೆ ತಂತ್ರಜ್ಞಾನ ಕಲಿಕೆಗೂ ವಿದ್ಯಾರ್ಥಿಗಳು ಸಜ್ಜಾಗಬೇಕು ಎಂದು ಮೈಸೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಹೇಳಿದರು
ಜಯಲಕ್ಷ್ಮೀಪುರಂನ ಸೇಂಟ್ ಜೋಸೆಫ್ ಕಾಲೇಜ್ ಆಫ್ ಎಜುಕೇಷನ್‌ನ 52ನೇ ಬಿ.ಇಡಿ ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಇದು ತಂತ್ರಜ್ಞಾನದ ಜಗತ್ತು. ಮಾಹಿತಿ ಮತ್ತು ತಂತ್ರಜ್ಞಾನ ಸಾಕಷ್ಟು ಪ್ರಮಾಣದಲ್ಲಿ ಬಳಕೆಯಾಗುತ್ತಿದೆ. ಇದೀಗ ಕೃತಕಬುದ್ಧಿಮತ್ತೆಯ ಜ್ಞಾನ ಬಳಕೆಯೂ ವ್ಯಾಪಕವಾಗುತ್ತಿದೆ. ಈ ರೀತಿ ತಂತ್ರಜ್ಞಾನ ಆಧರಿಸಿ ಜ್ಞಾನ, ಚಿಂತನೆ ಬೆಳೆಯುತ್ತಿದೆ. ಇದನ್ನು ಬಳಸಿಕೊಳ್ಳಲು ವಿದ್ಯಾರ್ಥಿಗಳು ಮುಂದಾಗಬೇಕು ಎಂದರು
ಸಾಂಪ್ರದಾಯಿಕ ಕೆಲಸಗಳ ಪ್ರಮಾಣ ಕ್ರಮೇಣ ಕಡಿಮೆಯಾಗಿ ಕೌಶಲಾಧರಿತ ಉದ್ಯೋಗಗಳು ಹೆಚ್ಚಾಗಲಿದ್ದು, ಆದ್ದರಿಂದ ಕುಶಲತೆಯನ್ನು ಯುವ ಜನರು ಕರಗತ ಮಾಡಿಕೊಳ್ಳಬೇಕು ಎಂದರು.
ಎಲ್ಲರೂ ಶಿಕ್ಷಕರಾಗುತ್ತಾರೆ. ಆದರೆ, ಉತ್ತಮ ಶಿಕ್ಷಕರಾಗಲು ಎಲ್ಲರಿಂದಲೂ ಸಾಧ್ಯವಿಲ್ಲ. ರವಿ ಕಾಣದ್ದನ್ನು ಕವಿ ಕಂಡ ಎಂಬ ಮಾತಿನಂತೆ ಶಿಕ್ಷಣದಲ್ಲಿ ಶಿಕ್ಷಕರು ಹೊಸ ತಂತ್ರಜ್ಞಾನ ಬಳಸಿಕೊಂಡು ಮಕ್ಕಳಿಗೆ ಹೊಸತನ ಕಲಿಸಲು ಪರಿಶ್ರಮಿಸಬೇಕು ಎಂದರು.
ಮೈಸೂರು ಧರ್ಮಕ್ಷೇತ್ರದ ಆಡಳಿತಾಧಿಕಾರಿ, ಧರ್ಮಾಧ್ಯಕ್ಷ ಬರ್ನಾಡ್ ಮೊರಸ್ ಮಾತನಾಡಿ, ಜ್ಞಾನಕ್ಕಿಂತ ಮಿಗಿಲಾದದ್ದು ಯಾವುದು ಇಲ್ಲ. ಹಾಗೆಯೇ ಗುರುಗಿಂತ ಶ್ರೇಷ್ಠವಾದದ್ದು ಯಾವುದು ಇಲ್ಲ. ಸಮಾಜದಲ್ಲಿ ಶಿಕ್ಷಕರ ವೃತ್ತಿ ಶ್ರೇಷ್ಠವಾದದ್ದು, ಹೀಗಾಗಿ, ಈ ವೃತ್ತಿ ಅತ್ಯಂತ ಗೌರವಯುತವಾದ ವೃತ್ತಿಯಾಗಿದೆ ಹೇಳಿದರು.
ಎಂಡಿಇಎಸ್ ಕಾರ್ಯದರ್ಶಿ ಎಡ್ವರ್ಡ್ ವಿಲಿಯಂ ಸಲ್ಡಾನ್, ಆಡಳಿತ ಖಜಾಂಚಿ ನವೀನ್ ಕುಮಾರ್ ಹಾಗೂ ಕಾರ್ಯನಿರ್ವಾಹಕ ಅಧಿಕಾರಿ ಸೆಬಿ ಮಾವೆಲ್ಲಿ, ಪ್ರಾಂಶುಪಾಲೆ ಡಾ.ಪ್ರಿಯಾ ಮಾಡ್ಯೂ ಇದ್ದರು