ತಂತ್ರಜ್ಞಾನ ಒಳ್ಳೆಯ ಉದ್ದೇಶಕ್ಕೆ ಬಳಸಿಕೊಳ್ಳಿ: ವಿದ್ಯಾರ್ಥಿಗಳಿಗೆ ಪಿ.ಎಸ್.ಐ. ಆನಂದ್ ಕಿವಿಮಾತು

1
Published on

ಹಾಸನ: ಇಂದಿನ ಯುವಜನತೆ ಮೊಬೈಲ್ ಬಳಸುವುದರಿಂದ ಸಾಕಷ್ಟು ತೊಂದರೆಗೆ ಸಿಲುಕಿಕೊಳ್ಳುತ್ತಿದ್ದಾರೆ. ತಂತ್ರಜ್ಞಾನ ಮತ್ತು ಮೊಬೈಲ್ ಅನ್ನು ಒಳ್ಳೆಯ ಉದ್ದೇಶಕ್ಕಾಗಿ ಬಳಸಿಕೊಳ್ಳಬೇಕೆಂದು ಪಿಎಸ್ ಐ ಆನಂದ್  ಸಲಹೆ ನೀಡಿದರು.

ನಗರದ ಅಂಬೇಡ್ಕರ್ ಭವನದಲ್ಲಿ ಬಿ.ಎಸ್.ಎಸ್. ಸಂಸ್ಥೆಯಿಂದ ಮಂಗಳವಾರ ಹಮ್ಮಿಕೊಳ್ಳಲಾಗಿದ್ದ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಗೆ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ಕಷ್ಟಪಟ್ಟು ಓದುವುದರ ಮುಖಾಂತರ ತಮ್ಮ ಗುರಿ ಸಾಧಿಸಲು ಸಾಧ್ಯವಿದೆ. ಪೋಷಕರು ಮಕ್ಕಳ ನಡವಳಿಕೆ ಮೇಲೆ ನಿಗವಹಿಸುವ ಅವಶ್ಯಕತೆ ಇದೆ. ಗುರಿ ಸಾಧಿಸಲು ಕಾರಣಗಳು ನೆಪವಾಗಬಾರದು, ಗುರಿಯನ್ನು ಬೆನ್ನು ಹತ್ತಿ ಗುರಿಮುಟ್ಟುವ ಕಡೆ ಗಮನ ಹರಿಸಿದರೆ ಯಶಸ್ಸು ತಾನಾಗಿ ದೊರೆಯುತ್ತದೆ ಎಂದು ಹೇಳಿದರು.

ಬಿಎಸ್‌ಎಸ್ ಮೈಕ್ರೋ ಫೈನಾನ್ಸ್ ಲಿಮಿಟೆಡ್ ಸಿಇಒ ಎಸ್. ಪಂಚಾಕ್ಷರಿ ಮಾತನಾಡಿ, ಬಿ.ಎಸ್.ಎಸ್. ಮೈಕ್ರೋ ಫೈನಾನ್ಸ್ ಕೇವಲ ಸಾಲ ಸೌಲಭ್ಯವನ್ನು ಮಾತ್ರವಲ್ಲದೆ ಸಂಸ್ಥೆಯು ಎಲ್ಲ ಸಮಾಜಮುಖಿ ಕಾರ್ಯಗಳಾದ ಶಾಲಾ ಅಭಿವೃದ್ಧಿ, ಪ್ರವಾಹ ಪರಿಸ್ಥಿತಿ, ಬರಗಾಲ ಪರಿಸ್ಥಿತಿಗಳಲ್ಲಿ ಪರಿಹಾರ ಮತ್ತು ಸರ್ಕಾರಿ ಶಾಲೆಗಳಿಗೆ ಕಾಂಪೌಂಡ್ ವ್ಯವಸ್ಥೆ, ಪೀಠೋಪಕರಣಗಳ ವ್ಯವಸ್ಥೆ, ಆಧುನಿಕ ಶಿಕ್ಷಣ ನೀಡಲು ಕಂಪ್ಯೂಟರ್ ಒದಗಿಸುವುದು ಸೇರಿದಂತೆ ಇನ್ನೂ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿರುವುದಾಗಿ ತಿಳಿಸಿದರು.

ಬಿ.ಎಸ್.ಎಸ್. ಸಂಸ್ಥೆಯು ತನ್ನ ಸಿ.ಎಸ್.ಆರ್.  ಅಡಿಯಲ್ಲಿ ಆರೋಗ್ಯ, ಶಿಕ್ಷಣ, ಹೈನುಗಾರಿಕೆ ಎಂಬ ಮೂರು ಅಂಶಗಳಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಅಪೋಲೋ ಟೆಲಿ ಮೆಡಿಷನ್ ನೆಟ್ವರ್ಕ್ ಪೌಂಡೆಷನ್ ಮುಖಾಂತರ ಬಿಹಾರ, ಮಹಾರಾಷ್ಟ್ರ ಕರ್ನಾಟಕದಲ್ಲಿ ಐದು ಸಂಚಾರಿ ಅರೋಗ್ಯ ಸೇವೆ ಮಾಡುತ್ತಿದೆ. ಸುಮಾರು ವರ್ಷಗಳಿಂದ ಬಿಹಾರ ಮಹಾರಾಷ್ಟ್ರ ತಮಿಳುನಾಡು ಕರ್ನಾಟಕದಲ್ಲಿ ಈ ರಾಜ್ಯಗಳಲ್ಲಿ ಸರ್ಕಾರಿ ಕಟ್ಟಡ ಅಭಿವೃದ್ಧಿ ಹಾಗು ಸರ್ಕಾರಿ ಶಾಲೆಗಳಿಗೆ ಪೀಠೋಪಕರಣಗಳನ್ನು ನೀಡುವುದು ಮತ್ತು ಸರ್ಕಾರಿ ಶಾಲೆಗಳನ್ನು ನವೀಕರಿಸುವುದು, ವೈಜ್ಞಾನಿಕ ತಂತ್ರಜ್ಞಾನ ವನ್ನು ಅಳವಡಿಸುವುದು ಹಾಗು ವಿದ್ಯಾರ್ಥಿ ವೇತನ ನೀಡುತ್ತಾ ಬಡ ಮಕ್ಕಳು ವಿದ್ಯಾಬ್ಯಾಸಕ್ಕಾಗಿ ಶ್ರಮಿಸುತ್ತಿದೆ ಎಂದರು.

ಸಮಗ್ರ ಜಾನುವಾರು ಆಭಿವೃದ್ಧಿ ಕೇಂದ್ರಗಳನ್ನು ಕರ್ನಾಟಕದ ಮಂಡ್ಯ, ಗದಗ, ಹಾವೇರಿ ಧಾರವಾಡ ಜಿಲ್ಲೆಗಳಲ್ಲಿ ಈ ಯೋಜನೆಯನ್ನು ಕಲ್ಪಿಸುತ್ತಿದೆ. ಅದರಂತೆ ಬೇರೆ ರಾಜ್ಯಗಳಲ್ಲಿ ಬಿಹಾರ ಮಹಾರಾಷ್ಟ್ರ ಮಧ್ಯ ಪ್ರದೇಶದಲ್ಲಿ ಹೈನುಗಾರಿಕೆಯ ಏಳಿಗೆಗೆ ಶ್ರಮಿಸುತ್ತಿದೆ. ಬಿ.ಎಸ್.ಎಸ್. ಸಂಸ್ಥೆಯು ಇಂತಹ ಸಮಾಜ ಮುಖಿ ಕೆಲಸಗಳನ್ನು ಮಾಡುತ್ತಾ ಬರುತ್ತದೆ ಇಂತಹ ಸಮಾಜಮುಖಿ ಕೆಲಸಗಳಲ್ಲಿ ಒಂದಾದ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದು ತಮ್ಮ ಸಂಸ್ಥೆಯ ಉದ್ದೇಶವನ್ನು ತಿಳಿಸಿದರು.

ಕಾರ್ಯಕ್ರಮದಲ್ಲಿ ಸಿ.ಎಸ್.ಆರ್. ಚೀಫ್ ಮ್ಯಾನೇಜರ್ ಪಂಡಿತ್ ಗಂಗಾಧರ ಪಾಟೀಲ್, ಮುಖ್ಯ ಶಿಕ್ಷಕ ಎಚ್.ವಿ. ಜಗದೀಶ್, ಡಿ.ಎಂ. ಪ್ರಸನ್ನ, ಪ್ರಶಾಂತ್ ಕುಮಾರ್, ರಮೇಶ್ ಕುಮಾರ್ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net