

ಚಿತ್ರದುರ್ಗ: ಪುಸ್ತಕದಿಂದ ಕಲಿತ ವಿಷಯಗಳು ಹಳೆಯದಾಗುತ್ತವೆ. ಆದ್ದರಿಂದ ಹೊಸ ತಂತ್ರಜ್ಞಾನದ ಅರಿವಿನೊಂದಿಗೆ ಕಲಿಕೆ ನಿರಂತರವಾಗಿದ್ದಾಗ ವೃತ್ತಿಯಲ್ಲಿ ಯಶಸ್ಸು ಗಳಿಸಲು ಸಾಧ್ಯ ಎಂದು ಎಸ್‌ಜೆಎಂ ವಿದ್ಯಾಪೀಠದ ಆಡಳಿತ ಮಂಡಳಿ ಅಧ್ಯಕ್ಷ ಶಿವಯೋಗಿ ಸಿ. ಕಳಸದ ಹೇಳಿದರು.
ಮುರುಘಾಮಠದ ಅನುಭವ ಮಂಟಪದಲ್ಲಿ ಶುಕ್ರವಾರ ಏರ್ಪಡಿಸಿದ್ದ ನಗರದ ಎಸ್‌ಜೆಎಂ ಫಾರ್ಮಸಿ ಕಾಲೇಜಿನ ‘ಫಾರ್ಮ ದೀಕ್ಷಾಂತ್-2025’ ಔಷಧ ತಜ್ಞರ ಪದವಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಭವಿಷ್ಯದ ಕನಸುಗಳನ್ನು ಹೊತ್ತು ಪದವಿ ಪಡೆದಿದ್ದೀರಿ. ಈ ಕ್ಷಣ ನಿಮ್ಮ ಕನಸು ನನಸಾಗಿದೆ. ಇದಕ್ಕೆ ಕಾರಣ ನಿಮ್ಮ ಪರಿಶ್ರಮ, ಪಾಲಕರ ಹಾಗೂ ಶಿಕ್ಷಕರ ಆಶೀರ್ವಾದ ಎಂದು ಹೇಳಿದರು.
ನಿಮ್ಮ ಕಲಿಕೆ ನಿರಂತರವಾಗಿರಲಿ. ಮನುಷ್ಯನ ಆರೋಗ್ಯಕ್ಕಾಗಿ ಔಷಧಗಳ ಆವಿಷ್ಕಾರ ನಿರಂತರ ನಡೆಯುತ್ತಿರುತ್ತವೆ. ಅಂಥ ಆವಿಷ್ಕಾರಗಳನ್ನು ನಮ್ಮವರೇ ಮಾಡಿದಾಗ ತುಂಬಾ ಹೆಮ್ಮೆಪಡುತ್ತೇವೆ. ಅಂತಹ ಫಾರ್ಮಸಿಸ್ಟ್‌ಗಳು ನೀವಾಗಬೇಕು. ಎಐ, ಡಾಟಾ ತಂತ್ರಜ್ಞಾನಗಳನ್ನು ಬಳಸಿಕೊಂಡು ವಿಶೇಷ ಔಷಧಿ ತಜ್ಞರಾಗಿ ಹೊರಹೊಮ್ಮಬೇಕು ಎಂದರು.
ವಿದ್ಯಾಪೀಠದ ಆಡಳಿತ ಮಂಡಳಿ ಸದಸ್ಯ ಡಾ.ಪಿ.ಎಸ್. ಶಂಕರ್ ಮಾತನಾಡಿ, ಇಂದಿನ ತಂತ್ರಜ್ಞಾನ ಯುಗದಲ್ಲಿ ಸ್ಟಾರ್ಟ್ ಆಫ್ ಇಂಡಿಯಾ ಕೌಶಲ, ಆರ್ಟಿಫಿಶಿಯಲ್ ಇಂಟೆಲಿಜೆನ್ಸ್‌ನಂಥ ವಿನೂತನ ಆವಿಷ್ಕಾರಗಳ ಸದ್ಭಳಕೆ ಮಾಡಿಕೊಳ್ಳುವಂತೆ ಪದವೀಧರರಿಗೆ ಸಲಹೆ ನೀಡಿದರು.
ಮಂಗಳೂರು ಪಿ.ಎ. ಫಾರ್ಮಸಿ ಕಾಲೇಜಿನ ಪ್ರಾಚಾರ್ಯ ಡಾ. ಸಲೀಂವುಲ್ಲಾಖಾನ್ ಮಾತನಾಡಿ, ಔಷಧ ಅಂಗಡಿಯಲ್ಲಿ ಎಸ್ಸೆಸ್ಸೆಲ್ಸಿ ಪಾಸಾಗಿರುವ ಕೆಲಸಗಾರ ಔಷಧ ಕೊಡುತ್ತಾನೆ. ಆದರೆ, ಔಷಧಿ ತಜ್ಞರು ಗ್ರಾಹಕರಿಗೆ ಔಷಧ ಬಳಕೆ ಕುರಿತಂತೆ ಉಪಯುಕ್ತ ಮಾಹಿತಿ ತಿಳಿಸಬೇಕು. ಇದನ್ನು ರೂಢಿಸಿಕೊಂಡಾಗ ಉತ್ತಮ ಫಾರ್ಮಸಿಸ್ಟ್‌ಗಳಾಗಿ ಬೆಳೆಯಲು ಸಾಧ್ಯ ಎಂದರು.
ಎಸ್‌ಜೆಎಂ ಫಾರ್ಮಸಿ ಕಾಲೇಜು ಪ್ರಾಚಾರ್ಯ ಡಾ.ಟಿ.ಎಸ್.ನಾಗರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎಸ್‌ಜೆಎಂ ವಿದ್ಯಾಪೀಠ ದ ಆಡಳಿತ ಮಂಡಳಿ ಸದಸ್ಯ ಎಸ್.ಎನ್. ಚಂದ್ರಶೇಖರ್, ಡಾ.ಮಾರುತಿ ಎಕ್ಬೋಟೆ, ಡಾ. ಯೋಗಾನಂದ, ಡಾ. ಸ್ನೇಹಲತಾ, ಡಾ. ಬಸವರಾಜ್ ಹರ್ತಿ, ಡಾ. ನಟರಾಜ್ ಇತರರು ಇದ್ದರು.
ಪದವಿ ಪೂರೈಸಿದ 104 ಬಿ-ಫಾರ್ಮ, 19 ಎಂ-ಫಾರ್ಮ ಹಾಗೂ 22 ಫಾರ್ಮ-ಡಿ ಪದವೀಧರರಿಗೆ ಪ್ರಮಾಣ ಪತ್ರ ಪ್ರದಾನ ಮಾಡಲಾಯಿತು.
ಡಾ.ಟಿ.ಎಸ್. ನಾಗರಾಜ್ ಸ್ವಾಗತಿಸಿ, ತೇಜಸ್ವಿನಿ ವಂದಿಸಿದರು. ಗಗನ್, ಸಹನಾ, ಚಿನ್ಮಯ್ ಪ್ರಾರ್ಥಿಸಿದರು.