

ರೋಣ: ದುರುಳರು ರಾತ್ರಿ ವೇಳೆ 11 ಎಕರೆ ಹೊಲದಲ್ಲಿ ಬೆಳೆಯಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ ಬೆಳೆಯನ್ನು ನಾಶಪಡಿಸಿದ ಘಟನೆ ರೋಣ ಪಟ್ಟಣದ ಬಳಿಯ ಜಮೀನೊಂದರಲ್ಲಿ ನಡೆದಿದೆ.
ಭಾನುವಾರ ಬೆಳಗ್ಗೆ ಹೊಲಕ್ಕೆ ಹೋಗಿ ಬೆಳೆ ನೋಡಿ ಸಂತಸಪಟ್ಟಿದ್ದ ರೈತ ಮರುದಿನ ಮತ್ತೆ ಜಮೀನಿಗೆ ಹೋದಾಗ ಬೆಳೆ ಒಣಗಿರುವುದು ಕಂಡು ಬಂದಿದೆ. ಅಧಿಕಾರಿಗಳ ತಂಡ ಹಾನಿಯ ಪರಿಶೀಲಿಸಿದೆ. ಮಳೆಯಿಂದಾಗಿ ಜಮೀನು ಒದ್ದೆಯಾಗಿದೆ. ಸಾಮಾನ್ಯ ಯಂತ್ರದ ಮೂಲಕ ಕಳೆ ನಾಶಕ ಸಿಂಪಡಿಸಿದರೆ ಹೊಲದಲ್ಲಿ ಅವರ ಹೆಜ್ಜೆ ಗುರುತು ಮೂಡಬೇಕಿತ್ತು. ಅಲ್ಲದೆ, ಒಂದೇ ರಾತ್ರಿಯಲ್ಲಿ 11 ಎಕರೆಗೆ ಔಷಧ ಸಿಂಪಡಣೆ ಮಾಡುವುದು ಕಷ್ಟಸಾಧ್ಯ. ಹೀಗಾಗಿ, ಡ್ರೋನ್ ಬಳಸಿ ಈ ದುಷ್ಕೃತ್ಯ ಎಸಗಿರುವ ಸಂಶಯ ಮೂಡಿದೆ.
ರೋಣ ಪಟ್ಟಣದ ರೈತ ರಾಜು ಕೆಂಚರಡ್ಡಿ ಎಂಬುವವರ ಕಳೆದ ಹದಿನೈದು ದಿನಗಳ ಹಿಂದೆ 2 ಲಕ್ಷ ರೂ. ಖರ್ಚು ಮಾಡಿ ಮೆಣಸಿನ ಹಾಗೂ ಉಳ್ಳಾಗಡ್ಡಿ ಬೆಳೆ ಬಿತ್ತನೆ ಮಾಡಿದ್ದರು. ಸಕಾಲಕ್ಕೆ ಮಳೆಯಾಗಿದ್ದರಿಂದ ಮೊಳಕೆಯೂ ಸಮೃದ್ಧವಾಗಿ ಬಂದಿತ್ತು. ಈ ಬಾರಿ ಉತ್ತಮ ಆದಾಯ ಬರುವ ನಿರೀಕ್ಷೆ ಮೂಡಿಸಿತ್ತು. ಆದರೆ, ದುರುಳರು ರಾತ್ರಿ ಕಳೆ ನಾಶಕ ಸಿಂಪಡಣೆ ಮಾಡಿ ಬೆಳೆ ಹಾಳು ಮಾಡಿದ್ದಾರೆ. ಪರಿಣಾಮ ಇಡೀ ಬೆಳೆ ಒಣಗಿ ಅಲ್ಲಿಯೇ ಉದುರಿ ಬಿದ್ದಿದೆ.
ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ:
ಕಳೆ ನಾಶಕ ಸಿಂಪಡಣೆಯಿಂದಾಗಿ ಮೆಣಸಿನ ಹಾಗೂ ಉಳ್ಳಾಗಡ್ಡಿ ಬೆಳೆ ಹಾನಿಯಾದ ಜಮೀನಿಗೆ ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಗಿರೀಶ ಹೊಸೂರ ಅವರನ್ನೊಳಗೊಂಡ ತಂಡ ಶುಕ್ರವಾರ ಹೊಲಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಗಿರೀಶ ಹೊಸೂರ ಮಾತನಾಡಿ, ‘ಮೇಲ್ನೋಟಕ್ಕೆ ಕಳೆನಾಶಕ ಸಿಂಪಡಣೆ ಮಾಡಿರುವುದು ಕಂಡು ಬರುತ್ತಿದೆ. ಇನ್ನೆರಡು ದಿನಗಳಲ್ಲಿ ಕೃಷಿ ಸಂಶೋಧನಾ ಅಧಿಕಾರಿಗಳನ್ನು ಕರೆತಂದು ಪರೀಕ್ಷಿಸಿದಾಗ ಸಂಪೂರ್ಣ ಮಾಹಿತಿ ತಿಳಿಯಲಿದೆ’ ಎಂದರು.
ರಾಜು ಕೆಂಚರಡ್ಡಿ ಅವರ ಜಮೀನಿನಲ್ಲಿ ಮೆಣಸಿನಕಾಯಿ ಹಾಗೂ ಉಳ್ಳಾಗಡ್ಡಿ ಬೆಳೆ ಹಾನಿಯಾಗಿರುವುದು ಕಳೆ ನಾಶಕ ಸಿಂಪಡಣೆಯಿಂದ ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಈ ಬಗ್ಗೆ ಸಂಪೂರ್ಣವಾಗಿ ತನಿಖೆ ನಡೆಸಿ ತಪ್ಪಿತಸ್ಥರನ್ನು ಹಿಡಿಯಲೇ ಬೇಕು ಇಲ್ಲದಿದ್ದರೆ ರೈತರು ಮುಂದಿನ ದಿನಗಳಲ್ಲಿ ಕೃಷಿ ಚಟುವಟಿಕೆ ಮಾಡುವುದು ಕಷ್ಟವಾಗುತ್ತದೆ.ಮಲ್ಲಯ್ಯ ಮಹಾಪುರುಷಮಠ, ರೈತಇದೊಂದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಒಬ್ಬ ರೈತ ತಮ್ಮ ಜಮೀನಿನಲ್ಲಿ ಉತ್ತಿ, ಬಿತ್ತಿ ಬೆಳೆ ತೆಗೆಯಲು ತಿಂಗಳಾನುಗಟ್ಟಲೇ ಶ್ರಮದ ಜತೆಗೆ ಹಣವನ್ನು ವ್ಯಯಿಸಿರುತ್ತಾನೆ. ದುಷ್ಕರ್ವಿುಗಳ ಕೈಯಲ್ಲಿ ಡ್ರೋನ್ನಂತಹ ಅಸ್ತ್ರ ಸಿಕ್ಕರೆ ರೈತರ ಪಾಡೇನಾಗಬೇಕು. ಡ್ರೋನ್ ಮೂಲಕ ಬೆಳೆ ಹಾನಿ ಮಾಡಿದ್ದೇ ಸಾಬೀತಾದರೆ ಆರೋಪಿಗಳಿಗೆ ಕಠಿಣ ಶಿಕ್ಷಯಾಗಲೇ ಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರಿಗೆ ಉಳಿಗಾಲವಿಲ್ಲ.| ಲೋಕನಗೌಡ ಗೌಡರ, ಹಿರೇಹಾಳ ಗ್ರಾಮದ ರೈತ ಮುಖಂಡ