

ಹಾಸನ: ಬಸ್‌ಗಾಗಿ ಕಾಯುತ್ತಿದ್ದ ಮಹಿಳೆಯನ್ನು ಬೈಕಿನಲ್ಲಿ ಕೂರಿಸಿಕೊಂಡು ಹೋಗಿ ಅವರ ಕೊರಳಿನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಸರ ಕಿತ್ತುಕೊಂಡು ಪರಾರಿಯಾಗಿರುವ ಘಟನೆ ಶಾಂತಿಗ್ರಾಮ ಬಳಿ ನಡೆದಿದೆ. ತಾಲೂಕಿನ ಬೈಲಹಳ್ಳಿ ಗ್ರಾಮದ ಪಾರ್ವತಮ್ಮ ಎಂಬುವರು ಆ.20 ರಂದು ತಮ್ಮ ಸಂಬಂಧಿಕರಾದ ಮಡೆನೂರು ಗ್ರಾಮದ ರಂಗಮಣಿ ಅವರ ಮನೆಯ ಮದುವೆ ಕಾರ್ಯಕ್ರಮಕ್ಕೆ ಹೋಗಲು 20 ಗ್ರಾಂ ತೂಕದ ಚಿನ್ನದ ಗುಂಡಿನ ಸರ ಹಾಕಿಕೊಂಡು ಪತಿ ನಾಗೇಗೌಡರೊಂದಿಗೆ ಬಸ್ಸಿನಲ್ಲಿ ಹಾಸನಕ್ಕೆ ಬಂದು, ಅಲ್ಲಿಂದ ಮಳಲಿ ಬಸ್ಸಿನಲ್ಲಿ ಶಾಂತಿಗ್ರಾಮ ಟೋಲ್ ಹತ್ತಿರ ಇಳಿದು, ಮತ್ತೊಂದು ವಾಹನದಲ್ಲಿ ಕಾರೆಕೆರೆ ಗೇಟ್ ಹತ್ತಿರ ಇಳಿದು ಮಡೆನೂರಿಗೆ ಹೋಗಲು ಯಾವುದಾದರೂ ವಾಹನಕ್ಕೆ ಕಾಯುತ್ತಿದ್ದರು.
ರಾತ್ರಿ 7 ಗಂಟೆ ಸುಮಾರಿನಲ್ಲಿ ಬೈಕಿನಲ್ಲಿ ಬಂದ ಯಾರೋ ಒಬ್ಬ ವ್ಯಕ್ತಿ ದಂಪತಿ ಬಳಿ ಬಂದು ಎಲ್ಲಿಗೆ ಹೋಗಬೇಕು ಎಂದು ಕೇಳಿದ.
ಮಡೆನೂರಿಗೆ ಹೋಗಬೇಕು ಎಂದು ತಿಳಿಸಿದಾಗ ಒಬ್ಬೊಬ್ಬರಾಗಿ ಬನ್ನಿ ನಾನೇ ಕರೆದುಕೊಂಡು ಹೋಗುವೆ ಎಂದು ತಿಳಿಸಿ ಮೊದಲು ಲೇಡೀಸ್ ಬನ್ನಿ ಎಂದು ಪಾರ್ವತಮ್ಮ ಅವರನ್ನು ಕೂರಿಸಿಕೊಂಡು ರಾಗಿಮುದ್ದನಹಳ್ಳಿ ಗ್ರಾಮದ ಕಡೆ ಹೋಗಿದ್ದಾನೆ. ಮಹಿಳೆಗೆ ಅನುಮಾನ ಬಂದು ಈ ರಸ್ತೆ ಮಡೆನೂರಿಗೆ ಹೋಗುವುದಿಲ್ಲ ಎಲ್ಲಿಗೆ ಕರೆದುಕೊಂಡು ಹೋಗುತ್ತಿದ್ದಿಯಾ ಎಂದು ಕೇಳಿದರೂ ಆತ ಬೈಕ್ ನಿಲ್ಲಿಸದೆ ಮುಂದೆ ಹೋಗಿದ್ದಾನೆ. ಭಯಗೊಂಡ ಪಾರ್ವತಮ್ಮ ಆತನ ಕೊರಳ ಪಟ್ಟಿ ಹಿಡಿದು ಎಳೆದಾಗ ಕೂಡಲೇ ಆತ ಬೈಕ್ ನಿಲ್ಲಿಸಿ ಮಹಿಳೆ ಕೊರಳಿನಲ್ಲಿದ್ದ 20 ಗ್ರಾಂ ತೂಕದ ಚಿನ್ನದ ಗುಂಡಿನ ಸರ ಕಿತ್ತು ಪರಾರಿಯಾಗಿದ್ದಾನೆ. ಪಾರ್ವತಮ್ಮ ನೀಡಿದ ದೂರಿನ ಮೇರೆಗೆ ಶಾಂತಿಗ್ರಾಮ ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.