ಡ್ರಮ್ ಕೂರಿಗೆ ಪದ್ಧತಿಯಡಿ ಬಿತ್ತನೆ

16 KAMPLI 01B
Published on

ಕಂಪ್ಲಿ: ತಾಲೂಕಿನ ನಂ.15 ಗೋನಾಳ್ ಗ್ರಾಮದಲ್ಲಿ ಮೊದಲ ಬಾರಿಗೆ ರೈತರು ಡ್ರಮ್ ಕೂರಿಗೆ ಭತ್ತ ಬಿತ್ತನೆ ಮಾಡಿದರು. ಸಾಂಪ್ರದಾಯಿಕ ಸಸಿಮಡಿಯಲ್ಲಿ ಬೆಳೆಸಿದ ಭತ್ತದ ಸಸಿಗಳನ್ನು ನಾಟಿ ಮಾಡುವುದಕ್ಕಿಂತ ಈ ವಿಧಾನಕ್ಕಿಂತ ಭಿನ್ನವಾಗಿದೆ. ಡ್ರಮ್ ಕೂರಿಗೆ ಬಿತ್ತನೆ ಪದ್ಧತಿಯಿಂದ ಕಾರ್ಮಿಕರ ಕೊರತೆ ಮತ್ತು ನೀರಿನ ನಿರ್ವಹಣೆಗೆ ಪರಿಹಾರ ದೊರೆಯಲಿದೆ.

ಡ್ರಮ್ ಸೀಡರ್ ಯಂತ್ರವನ್ನು ಟ್ರ್ಯಾಕ್ಟರ್‌ಗೆ ಅಳವಡಿಸಿ ರೈತರು ನೇರವಾಗಿ ಭತ್ತದ ಗದ್ದೆಗೆ ಬೀಜಗಳನ್ನು ಬಿತ್ತನೆ ಮಾಡುವ ಪದ್ಧತಿಯಾಗಿದೆ. ಸಾಂಪ್ರದಾಯಿಕ ಪದ್ಧತಿಯಲ್ಲಿ ಸಸಿ ಮಡಿ ಮಾಡಿಕೊಂಡು 40 ದಿನ ಸಸಿ ಬೆಳೆಸಿ ನಂತರ ಗದ್ದೆಯಲ್ಲಿ ಸಸಿಗಳನ್ನು ನಾಟಿ ಮಾಡಬೇಕಿತ್ತು. ಇದರಿಂದ ಸಸಿ ಮಡಿಗಳಲ್ಲಿ ಸಸಿ ಬೆಳೆಯುವತನಕ 40 ದಿನ ಕಾಯಬೇಕಿತ್ತು.

ಡ್ರಮ್ ಕೂರಿಗೆ ಬಿತ್ತನೆ ಪದ್ಧತಿಗೆ ಕಡಿಮೆ ನೀರು ಬೇಕಿದ್ದು, ಕೃಷಿ ಕಾರ್ಮಿಕರ ವೆಚ್ಚ, ಬಿತ್ತನೆ ಸಮಯ, ವೆಚ್ಚ ಉಳಿತಾಯವಾಗಲಿದೆ. ಹೆಚ್ಚು ಪ್ರದೇಶದಲ್ಲಿ ಕಡಿಮೆ ಅವಧಿಯಲ್ಲಿ ಬಿತ್ತನೆ ಮಾಡಬಹುದು. ಕಳೆ ನಿರ್ವಹಣೆ ಸುಲಭವಾಗಿರುತ್ತದೆ. ಡ್ರಮ್ ಕೂರಿಗೆ ಬಿತ್ತನೆಯಿಂದ ಸಸಿ ಮಡಿ ಹಾಕುವ ತಾಪತ್ರಯ ತಪ್ಪಿ, 40 ದಿನಗಳ ಉಳಿತಾಯವಾಗಲಿದೆ.

ಡ್ರಮ್ ಕೂರಿಗೆ ಬಿತ್ತನೆ ಮಾಡುವಾಗ ರೈತರು ಬೀಜೋಪಚಾರ ಮಾಡಿದ ಬೀಜಗಳನ್ನೇ ಬಿತ್ತಬೇಕು. ಮಣ್ಣು ಪರೀಕ್ಷೆಯ ಶಿಫಾರಸ್ಸಿನಂತೆ ಗೊಬ್ಬರ ನೀಡಬೇಕು. ಬಿತ್ತನೆ ನಂತರ ನೀರು ನೀಡುವಲ್ಲಿ ಜಾಗ್ರತೆ ತೋರಬೇಕಿದೆ. ಒಂದು ಎಕರೆಗೆ ಒಂದು ಸಾವಿರ ರೂ. ಬಾಡಿಗೆಯಂತೆ ಕಾರಟಗಿ ಸಿದ್ದಾಪುರದಿಂದ ಡ್ರಮ್ ಸೀಡರ್ ತರಿಸಲಾಗಿದೆ. ಸದ್ಯಕ್ಕೆ 20ಎಕರೆಯಲ್ಲಿ ಮೊದಲ ಬಾರಿಗೆ ಡ್ರಮ್ ಸೀಡರ್ ಬಿತ್ತನೆ ಮಾಡಲಾಗಿದೆ. ಕೃಷಿ ಕಾರ್ಮಿಕರ ಕೊರತೆಯನ್ನು ಡ್ರಮ್ ಸೀಡರ್ ತಪ್ಪಿಸಿದಂತಾಗಿದೆ ಎಂದು ರೈತರಾದ ಸರ್ವೇಶ್ವರರಾವ್, ಜಿ.ಶ್ರೀನಿವಾಸ್ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net