

ಚಿತ್ರದುರ್ಗ: ಶಾಲಾ, ಕಾಲೇಜುಗಳ ಬಳಿ ಮಾದಕ ವಸ್ತುಗಳ ಮಾರಾಟಕ್ಕೆ ಕಡಿವಾಣ ಹಾಕುವಂತೆ ಡಿಸಿ ಟಿ. ವೆಂಕಟೇಶ್ ಪೊಲೀಸರಿಗೆ ಸೂಚಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಮಂಗಳವಾರ ನಶಾಮುಕ್ತ ಭಾರತ ಅಭಿಯಾನ ಯೋಜನೆ ಕುರಿತ ಸಭೆಯಲ್ಲಿ ಮಾತನಾಡಿದ ಅವರು, ಮಾದಕ ವಸ್ತುಗಳನ್ನು ಮಾರುವ ಡ್ರಗ್ ಪೆಡ್ಲರ್‌ಗಳ ಹೆಡೆಮುರಿ ಕಟ್ಟುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಶಾಲಾ, ಕಾಲೇಜುಗಳ ಕ್ಯಾಂಪಸ್‌ನಲ್ಲಿ ಮಾದಕ ವಸ್ತುಗಳು ಮಾರಾಟವಾಗುತ್ತಿದ್ದು, ವಿದ್ಯಾರ್ಥಿಗಳು ದುಶ್ಚಟಗಳ ದಾಸರಾಗುತ್ತಿದ್ದಾರೆ. ಶಿಕ್ಷಕರು ಜಿಲ್ಲಾಡಳಿತಕ್ಕೆ ದೂರು ನೀಡಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು. ಹೊಳಲ್ಕೆರೆ, ಚಿತ್ರದುರ್ಗ ಹಾಗೂ ಚಳ್ಳಕೆರೆ ನಗರಗಳಲ್ಲಿ ಮಾದಕ ವಸ್ತುಗಳ ವಿರುದ್ಧದ ಕಾರ್ಯಾಚರಣೆ ತೀವ್ರಗೊಳಿಸಬೇಕು ಎಂದರು.
ಶಾಲಾ, ಕಾಲೇಜು ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ಬಳಕೆಯಿಂದಾಗುವ ದುಷ್ಪರಿಣಾಮದ ಜಾಗೃತಿಗೆ ನಶಾಮುಕ್ತ ಭಾರತ ಅಭಿ ಯಾನ ಜಾರಿಗೊಳಿಸಲಾಗಿದೆ. ಇದರ ಅಂಗವಾಗಿ ಪ್ರತಿಯೊಂದು ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿ ಕ್ಲಬ್ ರಚಿಸಬೇಕು. ಕ್ಲಬ್‌ಗಳ ಮೂಲಕ ಮಾದಕ ವಸ್ತುಗಳ ದುಷ್ಪರಿಣಾಮ ಕುರಿತು ಚರ್ಚೆ, ಜಾಗೃತಿಗೆ ಕಾರ‌್ಯಕ್ರಮ ಆಯೋಜಿಸಬೇಕು ಎಂದು ತಿಳಿಸಿದರು.
ಕಾನೂನು ಸೇವಾ ಪ್ರಾಧಿಕಾರ, ಪೊಲೀಸ್ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳನ್ನು ಆಹ್ವಾನಿಸಿ, ಮಾದಕ ವಸ್ತು ಸೇವನೆಯಿಂದ ಎದುರಾಗುವ ಪರಿಣಾಮಗಳ ಕುರಿತು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಡಬೇಕು. ಮಾದಕ ವ್ಯಸನಿಗಳನ್ನು ಗುರುತಿಸಿ ಆಪ್ತ ಸಮಾ ಲೋಚನೆ ನಡೆಸಿ ಪುನರ್ವಸತಿಯೊಂದಿಗೆ ಚಿಕಿತ್ಸೆ ಮತ್ತು ಸೌಲಭ್ಯಗಳನ್ನು ಕಲ್ಪಿಸಬೇಕು ಎಂದು ತಿಳಿಸಿದರು.
ಮಾದಕ ವ್ಯಸನದ ಪಿಡುಗು ನಿರ್ಮೂಲನೆಗೆ ಸರ್ಕಾರೇತರ ಸಂಸ್ಥೆಗಳೂ ಕೈ ಜೋಡಿಸಬೇಕು. ವಿಜ್ಞಾನ ಶಿಕ್ಷಕರಿಗೆ ತರಬೇತಿ ನೀಡುವುದ ರ ಮೂಲಕ ಮಾದಕ ವ್ಯಸನದ ವಿರುದ್ಧ ಜಾಗೃತಿ ಕಾರ್ಯಕ್ರಮಗಳನ್ನು ವಿದ್ಯಾರ್ಥಿ ಕ್ಲಬ್ ಮೂಲಕ ಹಮ್ಮಿಕೊಳ್ಳಬೇಕು ಎಂದರು.
ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ‌್ಯದರ್ಶಿ ಎಂ. ವಿಜಯ್ ಮಾತನಾಡಿ, ಮಾದಕ ವಸ್ತುಗಳ ಬಳಕೆ ವಿರುದ್ಧ ಜಾರಿಯಲ್ಲಿರುವ ವಿವಿಧ ಕಾನೂನುಗಳನ್ನು ಕಟ್ಟುನಿಟ್ಟಿನಿಂದ ಅನುಷ್ಠಾನಗೊಳಿಸಬೇಕು. ಕಾಯ್ದೆಗಳ ಬಿಗಿ ಅನುಷ್ಠಾನದಿಂದ ಮಾದಕ ವಸ್ತುಗಳ ಮಾರಾಟ, ಬಳಕೆ ನಿಯಂತ್ರಿಸಬಹುದು ಎಂದರು.
ನಿವೃತ್ತ ಸರ್ಕಾರಿ ಅಧಿಕಾರಿಗಳಾದ ಬಿ.ಪಿ. ಪ್ರೇಮನಾಥ್,ಟಿ.ತಿಮ್ಮಪ್ಪ ಅವರನ್ನು ನಶಾಮುಕ್ತ ಭಾರತ ಅಭಿಯಾನ ಸಮಿತಿ ಸದಸ್ಯರನ್ನಾಗಿ ನೇಮಿಸಲು ಸಭೆ ಶಿಫಾರಸು ಮಾಡಿತು.
ಎಎಸ್‌ಪಿ ಎಸ್.ಜೆ.ಕುಮಾರಸ್ವಾಮಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ಭಾರತಿ ಆರ್.ಬಣಕಾರ್, ಆರ್‌ಎಂಒ ಡಾ.ಆನಂದಪ್ರಕಾಶ್, ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಸೋಮಶೇಖರ್, ಡೇಟ್ ಚಾರಿಟಬಲ್ ಸೊಸೈಟಿ ಅಧ್ಯಕ್ಷ ಡಾ.ಶಿವಣ್ಣ, ಧರ್ಮಸ್ಥಳ ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಯೋಜನಾಧಿಕಾರಿ ಪಿ.ನಾಗರಾಜ ಮತ್ತಿತರರು ಇದ್ದರು.