ಡ್ರಗ್ಸ್ ಪ್ರಕರಣ ನಿಷ್ಪಕ್ಷಪಾತ ತನಿಖೆಯಾಗಲಿ

19-hvr-01
Published on

ಹಾವೇರಿ: ರಾಜ್ಯದಲ್ಲಿ ಪ್ರಸ್ತುತ ಮಾದಕ ವಸ್ತುಗಳ ಸೇವನೆ, ಸಾಗಣೆ ಮತ್ತು ಪೂರೈಕೆಯ ಕುರಿತು ಹಲವು ಪ್ರಕರಣಗಳು ವರದಿಯಾಗುತ್ತಿದ್ದು, ದೊಡ್ಡ ಪ್ರಮಾಣದಲ್ಲಿ ಡ್ರಗ್ಸ್ ಪೂರೈಕೆಯಾಗುತ್ತಿರುವುದು ಆತಂಕಕಾರಿ ವಿಚಾರವಾಗಿದೆ. ಸರ್ಕಾರ ಈಗ ದಾಖಲಾಗಿರುವ ಪ್ರಕರಣಗಳಲ್ಲಿ ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಧಾರವಾಡ ಪ್ರಾದೇಶಿಕ ನಿರ್ದೇಶಕ ದುಗ್ಗೇಗೌಡ ತಿಳಿಸಿದರು.

ನಗರದ ಯೋಜನಾ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಾದಕ ವ್ಯಸನದಿಂದ ಸಮಾಜವನ್ನು ರಕ್ಷಿಸಲು ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಕಳೆದ ಎರಡೂವರೆ ದಶಕಗಳಿಂದ ಜಾಗೃತಿ ಮತ್ತು ಮನಪರಿವರ್ತನಾ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದಾರೆ. ಪ್ರಸ್ತುತ ಸಮಯದಲ್ಲಿನ ಡ್ರಗ್ಸ್ ಜಾಲದಿಂದ ಸಮಾಜವನ್ನು ರಕ್ಷಿಸಲು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಜಿಲ್ಲಾ ಜನಜಾಗೃತಿ ವೇದಿಕೆಯಿಂದ ಪ್ರತಿ ಜಿಲ್ಲಾ ಕೇಂದ್ರಗಳ ಮೂಲಕ ಸರ್ಕಾರದ ಗಮನಕ್ಕೆ ತಂದು ಡ್ರಗ್ಸ್​ನ ನಿಮೂಲನೆಗೆ ಕ್ರಿಯಾಯೋಜನೆ ರೂಪಿಸಲು ಒತ್ತಡ ತರುವುದು ಶ್ರೀಗಳ ಆಶಯವಾಗಿದೆ. ಅದರಂತೆ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿಯೂ ಜಿಲ್ಲಾಧಿಕಾರಿ ಮೂಲಕ ಮನವಿ ಸಲ್ಲಿಸಲಾಗುತ್ತಿದೆ ಎಂದರು.

ಮಾದಕ ವಸ್ತುಗಳ ಬಳಕೆಯ ದುಷ್ಪರಿಣಾಮಗಳ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವ ಮತ್ತು ಶಾಲಾ ಕಾಲೇಜ್​ಗಳಲ್ಲಿ ಮಾದಕ ವಸ್ತುಗಳ ಕರಾಳಹಸ್ತ ಚಾಚದಂತೆ ಎಚ್ಚರ ವಹಿಸಬೇಕಿದೆ. ಸಿನಿಮಾ ಮತ್ತು ಸಾಂಸ್ಕೃತಿಕ ರಂಗದಲ್ಲಿ ಮಾದಕ ವಸ್ತುಗಳ ನಂಟಿರುವ ಜನರನ್ನು ನಿಷ್ಪಕ್ಷಪಾತ ತನಿಖೆಗೆ ಒಳಪಡಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.

ಜಿಲ್ಲಾ ಜನಜಾಗೃತಿ ವೇದಿಕೆ ಅಧ್ಯಕ್ಷ ಮುತ್ತಣ್ಣ ಯಲಿಗಾರ ಮಾತನಾಡಿ, ಜಿಲ್ಲೆಯಲ್ಲಿ ಜನಜಾಗೃತಿ ವೇದಿಕೆ ಮೂಲಕ 19 ಮದ್ಯವರ್ಜನ ಶಿಬಿರ ಆಯೋಜಿಸಿ 1,520 ವ್ಯಸನಿಗಳಿಗೆ ಚಿಕಿತ್ಸೆ ನೀಡಿ ಪಾನಮುಕ್ತ ಜೀವನ ನಡೆಸಲು ಕ್ರಮ ವಹಿಸಲಾಗಿದೆ. ಶಾಲಾ, ಕಾಲೇಜ್​ಗಳಲ್ಲಿ 87 ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ನಡೆಸಿ 10,440 ವಿದ್ಯಾರ್ಥಿಗಳಿಗೆ ಮಾದಕ ವಸ್ತುಗಳ ವಿರುದ್ಧ ಜಾಗೃತಿ ಮೂಡಿಸಲಾಗಿದೆ ಎಂದರು.

ವೇದಿಕೆ ಉಪಾಧ್ಯಕ್ಷ ಸುಭಾಸ ಹದಡೇರ, ಮಾಜಿ ಅಧ್ಯಕ್ಷ ಮೋಹನ ಮೆಣಸಿನಕಾಯಿ, ನಾಗೇಂದ್ರ ಕಟಕೋಳ, ಯೋಜನೆ ಜಿಲ್ಲಾ ನಿರ್ದೇಶಕ ಮಹಾಬಲ ಕುಲಾಲ್ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net