ಡೇರಿ ಕಾರ್ಯದರ್ಶಿಗಳಿಗೆ ಕರೊನಾ ಭೀತಿ ; ಮಾಸ್ಕ್ ವಿತರಿಸಿಲ್ಲ, ವ್ಯಾಕ್ಸಿನ್ ಹಾಕಿಸಿಲ್ಲ ; ಸೋಂಕು ತಗುಲುವ ಆತಂಕದಲ್ಲಿ ಸಿಬ್ಬಂದಿ

15 MDG 1
Published on

ಮಧುಗಿರಿ : ಕರೊನಾ ಹಾವಳಿಗೆ ತುಮುಲ್ ಹಾಲು ಉತ್ಪಾದಕ ಡೇರಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ನಲುಗಿದ್ದು, ಸುರಕ್ಷತಾ ಸೌಕರ್ಯಗಳಿಲ್ಲದೆ ಕೆಲಸ ಮಾಡುವಂತಾಗಿದೆ.

ಜಿಲ್ಲೆಯಲ್ಲಿ ಒಟ್ಟು 1200 ಹಾಲು ಉತ್ಪಾದಕ ಸಂಘಗಳಿದ್ದು, ಸುಮಾರು 1200 ಕಾರ್ಯದರ್ಶಿಗಳು, 1200 ಹಾಲು ಪರೀಕ್ಷಿತರು ಮತ್ತು ಇತರ 600 ಸಿಬ್ಬಂದಿ ಕೆಲಸ ನಿರ್ವಹಿಸುತ್ತಿದ್ದು, ಒಂದಲ್ಲ ಒಂದು ಡೇರಿಗಳಲ್ಲಿ ಸಿಬ್ಬಂದಿ ಕರೊನಾ ಪಾಸಿಟಿವ್‌ಗೆ ತುತ್ತಾಗುತ್ತಿರುವುದು ತಲೆ ನೋವಾಗಿದೆ.

ಜಿಲ್ಲೆಯಲ್ಲಿ ಸುಮಾರು 78 ಸಾವಿರ ಹಾಲು ಉತ್ಪಾದಕರಿದ್ದು, ಪ್ರತೀ ದಿನ 7.88 ಲಕ್ಷ ಲೀಟರ್ ಹಾಲು ತುಮುಲ್‌ಗೆ ಸರಬರಾಜಾಗುತ್ತದೆ. ರೈತರಿಂದ ಹಾಲು ಶೇಖರಿಸಲು ಡೇರಿ ಸಿಬ್ಬಂದಿ ಪ್ರತೀ ದಿನ ಬೆಳಗ್ಗೆ ಮತ್ತು ಸಂಜೆ ಕೆಲಸ ನಿರ್ವಹಿಸುತ್ತಿದ್ದಾರೆ. ಕಳೆದ ವರ್ಷ ಕರೊನಾ ಸಂದರ್ಭದಲ್ಲಿ ಸೋಂಕಿಗೆ ತುತ್ತಾದವರ ಕೈಗೆ ಸೀಲ್ ಹಾಕಲಾಗುತ್ತಿತ್ತು. ಇದರಿಂದ ಅವರು ಮನೆಯಿಂದ ಹೊರಬರದೆ ಮನೆಯ ಇತರ ಸದಸ್ಯರು ಡೇರಿಗೆ ಹಾಲು ಹಾಕುತ್ತಿದ್ದರು. ಆದರೆ ಈ ಬಾರಿ ಸೀಲ್ ಹಾಕುತ್ತಿಲ್ಲ, ಇದರಿಂದ ಡೇರಿಗಳಿಗೆ ಹಾಲು ಹಾಕಲು ಬಂದರೂ ಸೋಂಕಿತರನ್ನು ಪತ್ತೆ ಹಚ್ಚುವುದು ಕಷ್ಟ. ಇದರಿಂದ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿ ಬೇಗ ಸೋಂಕಿಗೆ ತುತ್ತಾಗುತ್ತಿದ್ದಾರೆ. ಜಿಲ್ಲೆಯಲ್ಲಿ ಇದುವರೆಗೂ ತುರುವೇಕೆರೆ, ಗುಬ್ಬಿಯಲ್ಲಿ ತಲಾ ಒಬ್ಬರು, ಹಾಗೂ ಮಧುಗಿರಿಯಲ್ಲಿ ಇಬ್ಬರು ಸೇರಿ ಒಟ್ಟು 4 ಜನ ಡೇರಿ ಕಾರ್ಯದರ್ಶಿಗಳು ಸೋಂಕಿಗೆ ಬಲಿಯಾಗಿದ್ದಾರೆ.

ಕಳೆದ ವರ್ಷ ಜಿಲ್ಲೆಯ 280 ಅಧಿಕಾರಿಗಳು ಮತ್ತು ಹಾಲು ಉತ್ಪಾದಕರಿಗೆ ಮಾಸ್ಕ್ ವಿತರಿಸಿದ ತುಮುಲ್, ಡೇರಿ ಕಾರ್ಯದರ್ಶಿಗಳು ಮತ್ತು ಸಿಬ್ಬಂದಿಗೆ ಮಾಸ್ಕ್ ಮತ್ತು ಇತರ ಸುರಕ್ಷತಾ ಸಲಕರಣೆ ವಿತರಿಸಿಲ್ಲ. ಪ್ರತಿನಿತ್ಯ ಸಾವಿರಾರು ಹಾಲು ಉತ್ಪಾದಕರು ಹಾಲು ಹಾಕಲು ಡೇರಿಗಳಿಗೆ ಬರುತ್ತಾರೆ. ನಮಗೂ ಕುಟುಂಬಗಳಿವೆ. ನಮಗೆ ವೇತನವೂ ಅಷ್ಟಕಷ್ಟೇ, ಸೋಂಕು ತಗುಲಿ ಮೃತಪಟ್ಟಲ್ಲಿ ತುಮುಲ್ 50 ಸಾವಿರ ರೂಪಾಯಿ ನೀಡಿ ಕೈತೊಳೆದುಕೊಳ್ಳುತ್ತದೆ. ಇಲ್ಲಿಯವರೆಗೂ ತುಮುಲ್ ವತಿಯಿಂದ ಅಧಿಕಾರಿಗಳಿಗೆ, ಡೇರಿ ಕಾರ್ಯದರ್ಶಿಗಳಿಗೆ ಮತ್ತು ಸಿಬ್ಬಂದಿಗೆ ವ್ಯಾಕ್ಸಿನ್ ನೀಡಲೂ ಕ್ರಮ ಕೈಗೊಂಡಿಲ್ಲ. ಸೋಂಕು ತಗುಲಿದರೆ ಕುಟುಂಬಗಳಿಗೆ ಯಾರು ದಿಕ್ಕು. ತುಮುಲ್‌ನ ಹಿರಿಯ ಅಧಿಕಾರಿಗಳು ನಮ್ಮನ್ನೂ ಕರೊನಾ ಸೇನಾನಿಗಳೆಂದು ಪರಿಗಣಿಸಬೇಕು ಎನ್ನುತ್ತಾರೆ ಕಾರ‌್ಯದರ್ಶಿಗಳು.

ತುಮುಲ್‌ಗೆ ಹಾಲು ಸಮರ್ಪಕ ಸರಬರಾಜಾಗಬೇಕು. ಆದರೆ, ನಮ್ಮ ರಕ್ಷಣೆಯ ಹೊಣೆ ಮಾತ್ರ ಬೇಡವಾ..? ಕರೊನಾದಿಂದಾಗಿ ಡೇರಿ ಕಾರ್ಯದರ್ಶಿಗಳು ತೊಂದರೆ ಅನುಭವಿಸುತ್ತಿದ್ದು, ಜೀವ ಭಯದಿಂದ ಕೆಲಸ ನಿರ್ವಹಿಸುತ್ತಿದ್ದರೂ ತುಮುಲ್ ವತಿಯಿಂದ ಯಾವುದೇ ಸೌಲಭ್ಯ ಕಲ್ಪಿಸಿಲ್ಲ. ಬಿ.ಚೌಡಪ್ಪ, ಡೇರಿ ಕಾರ್ಯದರ್ಶಿ, ಬಡಚೌಡನಹಳ್ಳಿ ತುಮುಲ್ ವತಿಯಿಂದ ಮಾಸ್ಕ್ ಸೇರಿ ಯಾವುದೇ ಸುರಕ್ಷತೆಗಳ ಬಗ್ಗೆ ಕ್ರಮ ಕೈಗೊಂಡ್ಲಿ. ಸೋಂಕಿನಿಂದಾಗಿ ಬಹುತೇಕ ಡೇರಿ ಕಾರ್ಯದರ್ಶಿಗಳು ಮೃತಪಟ್ಟಿದ್ದು, ಅವರ ಕುಟುಂಬಗಳು ತತ್ತರಿಸುತ್ತಿವೆ. ಯಾವುದೇ ಕಾರ್ಯದರ್ಶಿ ಕರೊನಾದಿಂದಾಗಿ ಮೃತಪಟ್ಟಲ್ಲಿ ಅವರ್ಲೆರಿಗೂ ತಲಾ 3 ಲಕ್ಷ ಪರಿಹಾರ ವಿತರಿಸಬೇಕು. ಡಿ.ಬಿ.ರಮೇಶ್, ಜಿಲ್ಲಾ ಹಾಲು ಉತ್ಪಾದಕ ನೌಕರರ ಸಂದ ಖಜಾಂಚಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net