ಡೆಪ್ಯೂಟಿ ಚನ್ನಬಸಪ್ಪನವರ ಸೇವೆ ದೊಡ್ಡದು

1-kollegal-1,,,,
Published on

 ಹಿರಿಯ ಶಿಕ್ಷಕ ಲಿಂಗರಾಜು ಅಭಿಮತ

ಕೊಳ್ಳೇಗಾಲ: ಕನ್ನಡ ಭಾಷೆ, ಶಿಕ್ಷಣ, ಈ ನೆಲದ ಸಾಹಿತ್ಯ ಮತ್ತು ಸಂಸ್ಕೃತಿಗಳನ್ನು ಉಳಿಸಿ ಬೆಳೆಸುವಲ್ಲಿ ಡೆಪ್ಯೂಟಿ ಚನ್ನ ಬಸಪ್ಪನವರ ಸೇವೆ ಅನನ್ಯ ಎಂದು ಹಿರಿಯ ಶಿಕ್ಷಕ ಲಿಂಗರಾಜು ಪ್ರಶಂಸೆ ವ್ಯಕ್ತಪಡಿಸಿದರು.

ತಾಲೂಕಿನ ಸೂರಾಪುರ ಸರ್ಕಾರಿ ಪ್ರೌಢಶಾಲೆಯಲ್ಲಿ ಶುಕ್ರವಾರ ಜೆಎಸ್‌ಬಿ ಪ್ರತಿಷ್ಠಾನ ವತಿಯಿಂದ ಹಮ್ಮಿಕೊಂಡಿದ್ದ ಕನ್ನಡ ಮಾಸಾಚರಣೆ 2024 ಸಮಾರಂಭದಲ್ಲಿ ಅವರು ತಾಯಿ ಭುವನೇಶ್ವರಿ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು. ಚನ್ನಬಸಪ್ಪ ಅವರು ಗಣಿತ ಶಿಕ್ಷಕರಾಗಿ, ಶ್ರೇಷ್ಠ ವಾಗ್ಮಿಗಳಾಗಿ, ಕವಿ ಶೇಕ್ಸ್‌ಪಿಯರ್‌ನನ್ನು ಕನ್ನಡಕ್ಕೆ ಪರಿಚಯಿಸಿದ ಪ್ರಥಮ ಲೇಖಕರಾಗಿ, ಕರ್ನಾಟಕದ ಪ್ರಥಮ ಶಿಕ್ಷಣ ತರಬೇತಿ ಸಂಸ್ಥೆಯ ಮೊದಲ ಪ್ರಾಚಾರ್ಯರಾಗಿ ಸಲ್ಲಿಸಿದ ಸೇವೆ ಅಮೋಘ. ಶಿಕ್ಷಣ ಇಲಾಖೆಯ ದಕ್ಷ ಡೆಪ್ಯೂಟಿ ಎಜುಕೇಶನಲ್ ಇನ್ಸ್‌ಪೆಕ್ಟರ್ ರಾಗಿದ್ದ ಅವರು ರಾಜ್ಯದ ವಿವಿಧೆಡೆ ಕನ್ನಡ ಪ್ರಾಥಮಿಕ ಶಾಲೆಗಳನ್ನು ಪ್ರಾರಂಭಿಸುವ ಆಂದೋಲನವನ್ನೇ ರೂಪಿಸಿದರು.

ಧಾರವಾಡ, ಬೆಳಗಾವಿ, ವಿಜಯಪುರ ಜಿಲ್ಲೆಯಲ್ಲಿ 34 ಇದ್ದ ಕನ್ನಡ ಪ್ರಾಥಮಿಕ ಶಾಲೆಗಳ ಸಂಖ್ಯೆ ಚನ್ನಬಸಪ್ಪನವರ ಕಾರ್ಯಕ್ಷಮತೆಯಿಂದ 668ಕ್ಕೆ ಏರಿದ್ದು ದಾಖಲೆ ಬರೆದಿತ್ತು ಎಂದರು. ಆ ಸಂದರ್ಭದಲ್ಲಿ ಅವರ ಹೆಸರಿನೊಂದಿಗೆ ಡೆಪ್ಯೂಟಿ ಎಂಬ ಹುದ್ದೆ ನಾಮವೂ ಅಂಟಿಕೊಂಡಿತು. ರಾಜ್ಯದ ಹಲವೆಡೆ ಬಡ ವಿದ್ಯಾರ್ಥಿಗಳಿಗೆ ಉಚಿತ ಪ್ರಸಾದ ನಿಲಯಗಳನ್ನೂ ಸ್ಥಾಪಿಸುವ ಮೂಲಕ ಚನ್ನಬಸಪ್ಪ ಅವರುಹಲವರ ಬಾಳಿಗೆ ಬೆಳಕಾಗಿದ್ದರು. ರಾಜ್ಯೋತ್ಸವ ಸಂದರ್ಭ ಇಂಥವರು ಸ್ಮರಣೀಯರು ಎಂದು ಶಿಕ್ಷಕ ಲಿಂಗರಾಜು ಹೇಳಿದರು. ಸ್ಫೂರ್ತಿದಾಯಕ: ಜೆಎಸ್‌ಬಿ ಪ್ರತಿಷ್ಠಾನದ ಮುಖ್ಯಸ್ಥ ಎಸ್. ಶಶಿಕುಮಾರ್ ಮಾತನಾಡಿ, ಕನ್ನಡ ಭಾಷಾ ಪುನರುಜ್ಜೀವನ ಮತ್ತು ಕನ್ನಡ ಶಾಲಾ ಸ್ಥಾಪನೆಗೆ ತಮ್ಮನ್ನೇ ಅರ್ಪಿಸಿಕೊಂಡಿದ್ದ ಡೆಪ್ಯೂಟಿ ಎಜುಕೇಶನಲ್ ಇನ್ಸ್‌ಪೆಕ್ಟರ್ ಚನ್ನಬಸಪ್ಪ ಅವರ ಸಾಧನೆ, ನೆನಹು ನಮಗೆಲ್ಲ ಸ್ಫೂರ್ತಿದಾಯಕ ಎಂದರು. ವಿವಿಧ ಸ್ಪರ್ಧೆ ವಿಜೇತ ಮಕ್ಕಳಿಗೆ ಕನ್ನಡ ಪುಸ್ತಕಗಳ ಬಹುಮಾನ, ಕಿರು ಪುಸ್ತಕ ನೀಡಲಾಯಿತು. ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳು ಮನ ಸೆಳೆದವು. ಮುಖ್ಯ ಶಿಕ್ಷಕ ಎನ್ ಲೋಕೇಶ, ಸಹ ಶಿಕ್ಷಕರಾದ ಮೇರಿ ನಿರ್ಮಲಾ, ಮಲ್ಲೇಶ ಬಾಬು, ಶ್ರೀಕಾಂತ, ಗೋವಿಂದ ರಾಜು, ಕಾವ್ಯಾ ಮತ್ತು ಶಾಲಾ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net