

ಬೀದರ್: ಇಲ್ಲಿಯ ಡಾ. ಸುಭಾಷ್ ಕರ್ಪೂರ ಫೌಂಡೇಷನ್ ಅಂತ್ಯಕ್ರಿಯೆಗಳಿಗೆ ಅನುಕೂಲ ಮಾಡಿಕೊಡುವುದಕ್ಕಾಗಿ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಗೆ ‘ಡೆಡ್ ಬಾಡಿ ಫ್ರೀಜರ್ ಬಾಕ್ಸ್’ ಕೊಡುಗೆಯಾಗಿ ನೀಡಿದೆ.
ನಗರದ ನಯಾ ಕಮಾನ್ ಸಮೀಪದ ಡಾ. ಕೃಷ್ಣಮೂರ್ತಿ ಆಸ್ಪತ್ರೆಯಲ್ಲಿ ಫೌಂಡೇಷನ್ ಪದಾಧಿಕಾರಿಗಳು ರೋಟರಿ ಕ್ಲಬ್ ಪದಾಧಿಕಾರಿಗಳಿಗೆ ಬಾಕ್ಸ್ ಹಸ್ತಾಂತರಿಸಿದರು.
ನಗರದ ಜನರಿಗೆ ಗೌರವಯುತ ಅಂತ್ಯ ಸಂಸ್ಕಾರಕ್ಕೆ ನೆರವಾಗುವುದು ಬಾಕ್ಸ್ ಕೊಡುಗೆಯ ಉದ್ದೇಶವಾಗಿದೆ ಎಂದು ಫೌಂಡೇಷನ್ ಹಾಗೂ ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿಯ ಅಧ್ಯಕ್ಷ ನಿತಿನ್ ಕರ್ಪೂರ ತಿಳಿಸಿದರು.
ಕೆಲವೊಮ್ಮೆ ಸಂಬಂಧಿಕರು ದೂರ ಊರುಗಳಲ್ಲಿ ಇರುವ ಕಾರಣ ಅಂತ್ಯಕ್ರಿಯೆಗೆ ತಡವಾಗುತ್ತದೆ. ಇಂತಹ ಸಂದರ್ಭದಲ್ಲಿ ಬಾಕ್ಸ್ ನಿರ್ದಿಷ್ಟ ಅವಧಿ ವರೆಗೆ ಶವವನ್ನು ಸುರಕ್ಷಿತವಾಗಿ ಇಡಲು ಸಹಕಾರಿಯಾಗಲಿದೆ ಎಂದು ಹೇಳಿದರು.
ಬಾಕ್ಸ್ ಕೃಷ್ಣಮೂರ್ತಿ ಆಸ್ಪತ್ರೆಯಲ್ಲಿ ಇರಲಿದೆ. ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದು ಎಂದು ತಿಳಿಸಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ರತಿಕಾಂತ ಸ್ವಾಮಿ ಮಾತನಾಡಿ, ಸುಭಾಷ್ ಕರ್ಪೂರ ಫೌಂಡೇಷನ್ ಮಾನವೀಯ ಕಾರ್ಯ ಮಾಡಿದೆ. ಡೆಡ್ ಬಾಡಿ ಫ್ರೀಜರ್ ಬಾಕ್ಸ್ ನಿರ್ವಹಣಾ ಹಂತದಲ್ಲಿ ಮೃತ ದೇಹಗಳನ್ನು ಸಂರಕ್ಷಿಸಲು ನೆರವಾಗಲಿದೆ ಎಂದು ಹೇಳಿದರು.
ರೋಟರಿ ಕ್ಲಬ್ ಹಾಗೂ ಸುಭಾಷ್ ಕರ್ಪೂರ ಫೌಂಡೇಷನ್ ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರೀಯವಾಗಿವೆ. ಇನ್ನಷ್ಟು ಸಂಘ ಸಂಸ್ಥೆಗಳ ಸಮಾಜಮುಖಿ ಕಾರ್ಯಗಳಿಗೆ ಮುಂದಾಗಬೇಕು ಎಂದು ಸಲಹೆ ಮಾಡಿದರು.
ಹಿರಿಯ ವೈದ್ಯ ಡಾ. ಸುಭಾಷ್ ಕರ್ಪೂರ, ಭಾರತೀಯ ಕುಟುಂಬ ಯೋಜನಾ ಸಂಘದ ಸ್ಥಳೀಯ ಶಾಖೆಯ ಅಧ್ಯಕ್ಷ ಡಾ. ನಾಗೇಶ ಪಾಟೀಲ, ಡಾ. ರಘು ಕೃಷ್ಣಮೂರ್ತಿ, ಬ್ರಿಮ್ಸ್‍ನ ಫಾರೆನ್‍ಸಿಕ್ ವಿಭಾಗದ ಮುಖ್ಯಸ್ಥ ಡಾ. ಸೈಯದ್ ಉಜೇರ್ ಮಾತನಾಡಿದರು.
ರೋಟರಿ ಕ್ಲಬ್ ಆಫ್ ಬೀದರ್ ನ್ಯೂ ಸೆಂಚುರಿ ಉಪಾಧ್ಯಕ್ಷ ಶಿವಕುಮಾರ ಪಾಖಾಲ್, ಕಾರ್ಯದರ್ಶಿ ಡಾ. ರಿತೇಶ ಸುಲೆಗಾಂವ್, ಖಜಾಂಚಿ ಸತೀಶ ಸ್ವಾಮಿ, ಸೂರ್ಯಕಾಂತ ರಾಮಶೆಟ್ಟಿ, ಡಾ. ಕಪಿಲ್ ಪಾಟೀಲ, ಡಾ. ಶರಣ ಬುಳ್ಳಾ, ಡಾ. ನಾಗೇಶ್ವರರಾವ್, ಡಾ. ಸುಮಂತ ಕಣಜಿಕರ್, ಗಜಾನನ್ ಪೋಕಲವಾರ, ಕಾಮಶೆಟ್ಟಿ ಚಿಕ್ಕಬಸೆ, ಶಿವಕುಮಾರ ಪಾಟೀಲ, ರಾಜಕುಮಾರ ಅಳ್ಳೆ, ಡಾ. ಲೋಕೇಶ ಹಿರೇಮಠ, ಡಾ. ನಿತೇಶ ಬಿರಾದಾರ ಮತ್ತಿತರರು ಇದ್ದರು.