

ಬಳ್ಳಾರಿ : ನೀರಿನ ಸಂಗ್ರಹಾರಕಗಳಲ್ಲಿ ಕಂಡುಬರುವ ಬಾಲ ಹುಳುಗಳನ್ನು ನಿರ್ಲಕ್ಷೃ ಮಾಡಬಾರದು, ಅವು ಡೆಂಗೆ ಹರಡುವ ಸೊಳ್ಳೆ ಮರಿಗಳಾಗಬಹುದು ಎಂದು ಡಿಎಚ್‌ಒ ಡಾ. ವೈ. ರಮೇಶಬಾಬು ಹೇಳಿದರು.
ತಾಲೂಕಿನ ಸಿದ್ದಮ್ಮನಹಳ್ಳಿ ಗ್ರಾಮದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗದ ವತಿಯಿಂದ ಈಡೀಸ್ ಲಾರ್ವಾ ಸಮೀಕ್ಷಾ ಕಾರ್ಯವನ್ನು ಪರಿಶೀಲಿಸಿ ಮಾತನಾಡಿದರು. ಪ್ರತಿಯೊಬ್ಬರಿಗೂ ನೀರಿನ ಅವಶ್ಯಕತೆ ಇದ್ದು, ಸಾಮಾನ್ಯವಾಗಿ ಕುಡಿಯಲು ಹೊರತುಪಡಿಸಿ ಬಳಕೆಗಾಗಿ ನೀರು ಸಂಗ್ರಹಿಸುವ ಡ್ರಮ್, ಬ್ಯಾರೆಲ್, ಕಲ್ಲಿನದೋಣಿ, ಸಿಮೆಂಟ್ ತೊಟ್ಟಿ ಹಾಗೂ ಬೀಸಾಡಿದ ಟೈರ್, ತಗಡಿನ ಟಿನ್, ಹೂವಿನ ಕುಂಡಲು, ಫ್ರೀಜ್ ಹಿಂಭಾಗದ ನೀರಿನಲ್ಲಿ ಕಂಡುಬರುವ ಬಾಲದ ಹುಳುವನ್ನು ನಿರ್ಲಕ್ಷ್ಯ ಮಾಡುವಂತಿಲ್ಲ. 7 ದಿನಗಳಲ್ಲಿ ಸೊಳ್ಳೆಯಾಗಿ ನಮ್ಮನ್ನೆ ಕಚ್ಚುವ ಡೆಂೆ ರೋಗ ಹರಡುವ ಈಡೀಸ್ ಸೊಳ್ಳೆಯ ಮರಿಯಾಗಿರುತ್ತದೆ ಎಂದರು.
ಜಿಲ್ಲಾ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ. ಆರ್ ಅಬ್ದುಲ್ಲಾ ಮಾತನಾಡಿ, ಹೆಚ್ಚು ದಿನಗಳ ಕಾಲ ನೀರು ಸಂಗ್ರಹವಿರುವ ಸ್ಥಳಗಳಲ್ಲಿ ಗಪ್ಪಿ ಮತ್ತು ಗಾಂಬೋಷಿಯ ಮೀನುಗಳನ್ನು ಬಿಡಲು ಅವಕಾಶವಿದ್ದು, ಎಲ್ಲ ಆರೋಗ್ಯ ಕೇಂದ್ರಗಳಲ್ಲಿ ಮೀನುಗಳನ್ನು ಪಡೆದು ನೀರಿನ ತಾಣಗಳಲ್ಲಿ ಬಿಡಲು ಹಾಗೂ ಮನೆಯ ಮುಂದೆ ಸ್ವಚ್ಛಗೊಳಿಸಲಾಗದ ನೀರಿನ ಪರಿಕರಗಳಿಗೆ ಟೆಮಿಫಾಸ್ ದ್ರಾವಣವನ್ನು ತಮ್ಮ ಮನೆಗೆ ಆರೋಗ್ಯ ಇಲಾಖೆಯ ಸಿಬ್ಬಂದಿಯವರು ಭೇಟಿ ನೀಡಿದಾಗ ಹಾಕಿಸಿಕೊಳ್ಳಬೇಕು ಎಂದರು.