

ರಾಮದುರ್ಗ: ಡೆಂಘೆ ತಡೆಯಲು ಜನತೆ ಶುಚಿತ್ವಕ್ಕೆ ಆದ್ಯತೆ ನೀಡಿ, ಕೊಳಚೆ ಪ್ರದೇಶಗಳಲ್ಲಿ ಹಾಗೂ ಮನೆ ಸುತ್ತಮುತ್ತ ನೀರು ನಿಲ್ಲದಂತೆ ಎಚ್ಚರಿಕೆ ವಹಿಸಬೇಕು ಎಂದು ತಹಸೀಲ್ದಾರ್ ಪ್ರಕಾಶ ಹೊಳೆಯಪ್ಪಗೋಳ ಕರೆ ನೀಡಿದರು.
ಪಟ್ಟಣದ ತಾಪಂ ಸಭಾಭವನದಲ್ಲಿ ಬುಧವಾರ ಏರ್ಪಡಿಸಿದ್ದ ಡೆಂಘೆ ತಡೆ ಮಾಸಾಚರಣೆ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಗ್ರಾಮೀಣ ಭಾಗದಲ್ಲಿ ರೋಗ ಲಣ ಹಾಗೂ ಹರಡುವಿಕೆ ಕುರಿತು ಜನತೆಗೆ ತಿಳಿವಳಿಕೆ ಇರುವುದಿಲ್ಲ. ಆರೋಗ್ಯ ಇಲಾಖೆಯೊಂದಿಗೆ ಪಂಚಾಯಿತಿ ಅಧಿಕಾರಿಗಳು, ಶಿಶು ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಲು ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಬೇಕು. ಡೆಂಘೆ ಹರಡಲು ಕಾರಣ ಹಾಗೂ ತಡೆಯುವ ವಿಧಾನಗಳನ್ನು ಸಾರ್ವಜನಿಕರಿಗೆ ತಿಳಿಸಿಕೊಡಬೇಕು ಎಂದು ಸೂಚಿಸಿದರು.
ತಾಪಂ ಇಒ ಪ್ರವಿಣಕುಮಾರ ಸಾಲಿ ಮಾತನಾಡಿ, ಗ್ರಾಮಮಟ್ಟದಲ್ಲಿ ಪಿಡಿಒ ನೇತತ್ವ ವಹಿಸಿಕೊಂಡು ಗ್ರಾಮ ಆರೋಗ್ಯ ನೆರ್ಮಲ್ಯ ಪೌಷ್ಟಿಕ ಸಮಿತಿ ರಚನೆ ಮಾಡಿಕೊಳ್ಳಬೇಕು ಎಂದು ಆದೇಶವಿದೆ. ಆದೇಶ ಪಾಲನೆಯೊಂದಿಗೆ ಡೆಂಘೆ ಪ್ರಕರಣ ತಡೆಯಲು ಎಲ್ಲರೂ ಕೈಜೋಡಿಸಬೇಕು ಎಂದು ತಾಕೀತು ಮಾಡಿದರು.
ತಾಲೂಕು ಆರೋಗ್ಯ ಅಧಿಕಾರಿ ಡಾ.ನವೀನ ನಿಜಗುಲಿ ಮಾತನಾಡಿ, ತಾಲೂಕಿನಲ್ಲಿ 35 ಡೆಂಘೆ ಪ್ರಕರಣಗಳು ಪತ್ತೆಯಾಗಿದ್ದು, ಜನತೆ ಭಯಪಡಬಾರದು. ಚಿಕಿತ್ಸೆ ನೀಡಲು ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದರು. ಪುರಸಭೆ ಮುಖ್ಯಾಧಿಕಾರಿ ಈರಣ್ಣ ಗುಡದಾರಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿ, ವೈದ್ಯರು, ಪಿಡಿಒಗಳು ಮತ್ತು ಆಶಾ ಕಾರ್ಯಕರ್ತೆಯರು ಇದ್ದರು.