

ಅರಸೀಕೆರೆ: ತಾಲೂಕಿನ ಜಾವಗಲ್ ಹೋಬಳಿ ಬಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಳನಕೊಪ್ಪಲು ಗ್ರಾಮದಲ್ಲಿ ಡೆಂಘೆ ಜ್ವರಕ್ಕೆ ಮೂರುವರೆ ವರ್ಷದ ಕಂದಮ್ಮ ಶುಕ್ರವಾರ ಬಲಿಯಾಗಿದೆ.
ಗ್ರಾಮದ ದಿನೇಶ್-ಜಯಶ್ರೀ ದಂಪತಿ ಪುತ್ರ ಚರಣ್ ಮೃತಪಟ್ಟ ಮಗು. ಮೂಲತಃ ಕಾಳನಕೊಪ್ಪಲು ಗ್ರಾಮದವರಾದ ದಂಪತಿ ಬೆಂಗಳೂರಿನಲ್ಲಿ ವಾಸವಿದ್ದರು. ಪತ್ನಿ ಜಯಶ್ರೀ ಅವರ ತವರು ಗ್ರಾಮ ಚಿಕ್ಕಮಗಳೂರು ಜಿಲ್ಲೆಯ ಹರಿಹರಪುರಕ್ಕೆ ಹೋಗಿ 2 ದಿನದ ಹಿಂದೆ ಕಾಳನಕೊಪ್ಪಲು ಗ್ರಾಮಕ್ಕೆ ಮರಳಿದ್ದರು. ಮಗುವಿಗೆ ಜ್ವರ ಬಂದಿದ್ದರಿಂದ ಜಾವಗಲ್ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ತೋರಿಸಿ, ಹಾಸನ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು. ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಾಣಿವಿಲಾಸ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಶುಕ್ರವಾರ ಮೃತಪಟ್ಟಿದೆ ಎಂದು ತಾಲೂಕು ಆರೋಗ್ಯಾಧಿಕಾರಿ ಡಾ.ತಿಮ್ಮರಾಜು ಮಾಹಿತಿ ನೀಡಿದ್ದಾರೆ.
ಗ್ರಾಮದಲ್ಲಿ ಕಳೆದ ಒಂದೂವರೆ ತಿಂಗಳಿನಿಂದ ಜನರಲ್ಲಿ ಜ್ವರ ಕಾಣಿಸಿಕೊಂಡಿದ್ದು ಆತಂಕ ಮನೆ ಮಾಡಿತ್ತು. ರೋಗ ಲಕ್ಷಣ ಕಾಣಿಸಿಕೊಂಡಿರುವ 10ಕ್ಕೂ ಹೆಚ್ಚು ರೋಗಿಗಳು ವಿವಿಧ ಆಸ್ಪತ್ರೆಗಳಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜ್ವರ ಬರುವ ಮುನ್ನವೇ ಕ್ರಮ ವಹಿಸುವಂತೆ ಗ್ರಾ.ಪಂ.ಅಭಿವೃದ್ಧಿ ಅಧಿಕಾರಿ, ರಾಜ್ಯ ಕೊಳಚೆ ನಿರ್ಮೂಲನಾ ಇಲಾಖೆಗೂ ಗ್ರಾಮಸ್ಥರು ಪತ್ರ ಬರೆದಿದ್ದರು. ನಿರ್ಲಕ್ಷ್ಯದ ಪರಿಣಾಮ ಮಗುವಿನ ಸಾವು ಸಂಭವಿಸಿದೆ. ಹೆಚ್ಚಿನ ಅನಾಹುತ ನಡೆಯುವ ಮುನ್ನ ಅಗತ್ಯ ಮುಂಜಾಗ್ರತಾ ಕ್ರಮ ತೆಗೆದುಕೊಳ್ಳಬೇಕು ಹಾಗೂ ಮಗುವಿನ ಕುಟುಂಬ ಸದಸ್ಯರಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.