ಡೆಂಘಿ ಕಾಯಿಲೆಗೆ ಮುನ್ನೆಚ್ಚರಿಕೆಯೇ ಮದ್ದು:ಡಿಎಚ್ಒ.ಡಾ. ಶಿವಸ್ವಾಮಿ

ಡೆಂಘಿ ಕಾಯಿಲೆಗೆ ಮುನ್ನೆಚ್ಚರಿಕೆಯೇ ಮದ್ದು:ಡಿಎಚ್ಒ.ಡಾ. ಶಿವಸ್ವಾಮಿ
Published on

ಹಾಸನ: ಡೆಂಘಿ ಕಾಯಿಲೆ ಬಾರದಂತೆ ಮೊದಲೇ ಮುನ್ನೆಚ್ಚರಿಕೆಯ ಕ್ರಮಗಳನ್ನು ಅನುಸಿರಿಸುವುದರ ಜತೆಗೆ ಎಲ್ಲಾ ಇಲಾಖೆಗಳು ಒಗ್ಗಟ್ಟಿನಿಂದ ಕೈಜೋಡಿಸುವ ಮೂಲಕ ಆರೋಗ್ಯದ ಬಗ್ಗೆ ಅರಿವು ಮೂಡಿಸಿದಾಗ ಮಾತ್ರ ಈ ರೋಗದಿಂದ ಮುಕ್ತಿ ಪಡೆಯಲು ಸಾಧ್ಯ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿ ಡಾ. ಶಿವಸ್ವಾಮಿ ಸಲಹೆ ನೀಡಿದರು.
ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ಶನಿವಾರ ಮಾಧ್ಯಮ ಪ್ರತಿನಿಧಿಗಳಿಗೆ ಹಮ್ಮಿಕೊಳ್ಳಲಾಗಿದ್ದ ಡೆಂಘಿ ವೈರಸ್‌ನಿಂದ ಹರಡುವ ರೋಗದ ಬಗ್ಗೆ ಎಚ್ಚರ ವಹಿಸಲು ಹಮ್ಮಿಕೊಳ್ಳಲಾಗಿದ್ದ ಒಂದು ದಿನದ ಕಾರ್ಯಾಗಾರ ಉದ್ದೇಶಿಸಿ ಮಾತನಾಡಿದ ಅವರು, ಡೆಂಘಿ ಪ್ರಕರಣಗಳು ದಿನೇದಿನೆ ಹೆಚ್ಚಾಗುತ್ತಿದ್ದು, ಆಸ್ಪತ್ರೆಗಳಲ್ಲಿ ಹಾಸಿಗೆಗಳೇ ಸಾಕಾಗುತ್ತಿಲ್ಲ. ಜನರಲ್ಲೂ ಕೂಡ ಆತಂಕ ಹೆಚ್ಚಾಗಿ ಕೆಲವರು ತಾಲೂಕು ಆಸ್ಪತ್ರೆ ಇತರೆ ಕಡೆ ಚಿಕಿತ್ಸೆ ಪಡೆಯದೇ ನೇರವಾಗಿ ಜಿಲ್ಲಾ ಆಸ್ಪತ್ರೆಗೆ ಬರುತ್ತಿದ್ದಾರೆ. ಇದರಿಂದಲೇ ಜಿಲ್ಲಾ ಆಸ್ಪತ್ರೆಯಲ್ಲಿ ಹಾಸಿಗೆ ಕೊರತೆ ಎದುರಿಸುತ್ತಿದೆ ಎಂದು ಹೇಳಿದರು.
ಡೆಂೆ ನಿಯಂತ್ರಣ ಮಾಡುವುದು ಹೇಗೆ?
ಇದು ವೈರಸ್‌ನಿಂದ ಹರಡುವ ರೋಗವಾಗಿದ್ದು, ಇದನ್ನು ಬಾರದಾಗೆ ನೋಡಿಕೊಳ್ಳುವುದು ಉತ್ತಮ. ಈ ಕಾಯಿಲೆಯಿಂದ ಸಾವು-ನೋವುಗಳು ಕೂಡ ಸಂಭವಿಸಬಹುದು. ಹಳ್ಳಿಯಿಂದ ಪಟ್ಟಣದವರೆಗೂ ಎಲ್ಲಾ ಹಂತದಲ್ಲೂ ಸಹ ಎಚ್ಚರಿಕೆಯಿಂದ ರೋಗ ಹರಡದಂತೆ ನೋಡಿಕೊಳ್ಳಬೇಕು. ಬೀದಿ ಬದಿ ಕ್ಯಾಂಟಿನ್‌ಗಳು ಹೆಚ್ಚಾಗಿದ್ದು, ಫುಡ್ ಪಾರ್ಕ್‌ಗಳು ಹೆಚ್ಚಾಗಿದ್ದು ತ್ಯಾಜ್ಯ ಹೆಚ್ಚಾಗಿ ಎಲ್ಲೆಂದರಲ್ಲಿ ಬೀಳುತ್ತಿದೆ. ಎಳ ನೀರನ್ನು ಕೊಚ್ಚಿ ಬುರುಡೆಯನ್ನು ಹಾಗೆ ಎಸೆಯಲಾಗುತ್ತಿದೆ. ಇನ್ನು ಹಳ್ಳಿಗಳಲ್ಲಿ ಕಾಯಿ ಸುಲಿದು ಅದರ ಚಿಪ್ಪುಗಳನ್ನು ತಿಂಗಳುಗಟ್ಟಲೇ ಅಲ್ಲೆ ಬಿಟ್ಟಿರುತ್ತಾರೆ. ಒಡೆದು ಹೋದ ಮಡಿಕೆ, ಪ್ಲಾಸ್ಟಿಕ್, ಟೈರ್ ಸೇರಿದಂತೆ ಇತರೆ ಸಾಮಾಗ್ರಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಮತ್ತು ಚರಂಡಿಗಳಲ್ಲಿ ತಿಂಗಳುಗಟ್ಟಲೆ ನೀರು ನಿಲ್ಲುವುದರಿಂದ ಸೊಳ್ಳೆಗಳ ಸಂತಾನೋತ್ಪತ್ತಿ ಹೆಚ್ಚಾಗಿ ಸೊಳ್ಳೆಯಿಂದ ಡೆಂೆ ಹರಡುತ್ತದೆ ಎಂದು ಮಾಹಿತಿ ನೀಡಿದರು.
ನೀರಿನಲ್ಲಿ ಸೊಳ್ಳೆ ಮೊಟ್ಟೆ ಇಡುವುದರಿಂದ ನೀರು ನಿಲ್ಲದಾಗೆ ನೋಡಿಕೊಂಡರೇ ಸೊಳ್ಳೆಗಳ ಉತ್ಪತ್ತಿಯಾಗದಂತೆ ತಡೆಯಬಹುದು. ಇದರ ಬಗ್ಗೆ ಜಾಗೃತಿಯನ್ನು ಒಂದು ಇಲಾಖೆಯಿಂದ ಮಾಡಲು ಸಾಧ್ಯವಿಲ್ಲ. ಹಲವಾರು ಇಲಾಖೆಗಳು ಕೈಜೋಡಿಸುವ ಮೂಲಕ ಆರೋಗ್ಯದ ಬಗ್ಗೆ ತರಬೇತಿ ನೀಡಿ ಅರಿವು ಮೂಡಿಸಿ ತಡೆಗಟ್ಟಿದರೆ ಮಾತ್ರ ಈ ರೋಗದಿಂದ ಮುಕ್ತಿ. ಹಾಸನ ಜಿಲ್ಲೆಯಲ್ಲಿ ಸ್ಥಳೀಯವಾಗಿ ಮಲೇರಿಯಾ ಪ್ರಕರಣ ವರದಿಯಾಗಿಲ್ಲ ಎಂದು ತಿಳಿಸಿದರು.
ಇನ್ನು ಕೀಟ ಶಾಸ್ತ್ರಜ್ಞ ಅಧಿಕಾರಿ ರಾಜೇಶ್ ಕುಲಕರ್ಣಿ ಅವರು ಮಾತನಾಡಿ, ಸೊಳ್ಳೆಯು ಮೊಟ್ಟೆಗಳನ್ನು ನೀರಿನ ಮೇಲೆ ಇಡುತ್ತವೆ. ಆ ಮೊಟ್ಟೆಗಳು ಲಾರ್ವಾ ಆಗಿ ನಂತರ ಪ್ಯೂಪಾಗಳನ್ನಾಗಿ ಮಾರ್ಪಾಡು ಹೊಂದುತ್ತವೆ. ನಂತರ ವಯಸ್ಕ ಸೊಳ್ಳೆಗಳಾಗಿ ಬೆಳವಣಿಗೆ ಹೊಂದುತ್ತವೆ. ವಯಸ್ಕ ಸೊಳ್ಳೆಗಳು ಎರಡು ದಿನದಲ್ಲೇ ಪ್ರಬುದ್ಧತೆ ಹೊಂದಿ ಗಂಡು ಸೊಳ್ಳೆಗಳೊಡನೆ ಸಂಧಿಸಿ ನಂತರ ಮೊಟ್ಟೆ ಬೆಳವಣಿಗೆಗಾಗಿ ಹೆಣ್ಣು ಸೊಳ್ಳೆಗಳು ಮಾನವರನ್ನು ಇಲ್ಲವೇ ಜಾನುವಾರುಗಳನ್ನು ಕಚ್ಚುತ್ತವೆ. ಆಗ ಸೊಳ್ಳೆ ಬಾಯಿಯ ಜೊಲ್ಲು ರಸದಲ್ಲಿ ರೋಗಾಣು ನಮ್ಮ ದೇಹ ಪ್ರವೇಶಿಸಿ ರೋಗ ತಗಲುತ್ತದೆ. ಇದೆ ವೇಳೆ ಸೊಳ್ಳೆ ಉತ್ಪತ್ತಿ ಆಗದಂತೆ ಮೊದಲೇ ನಿಗಾವಹಿಸಿ ಡೆಂೆಯಿಂದ ಮುಕ್ತಿ ಹೊಂದುವಂತೆ ಜಾಗೃತಿ ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವ ಬಗ್ಗೆ ಮಾಹಿತಿ ನೀಡಿದರು.
ಇದೆ ವೇಳೆ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಕೆ.ಎಚ್. ವೇಣುಕುಮಾರ್, ರಾಜ್ಯ ಪತ್ರಕರ್ತರ ಸಂಘದ ರಾಜ್ಯ ಕಾರ್ಯಕಾರಣಿ ಸದಸ್ಯ ಎಚ್.ಬಿ. ಮದನ್ ಗೌಡ, ಆರೋಗ್ಯ ಇಲಾಖೆಯ ನಾಗಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net