

ಹಾಸನ: ಸೊಳ್ಳೆಯ ವೈರಸ್‌ನಿಂದ ಡೆಂಗ್ಯೂ ಮಾರಕ ರೋಗವು ಮನುಷ್ಯನಿಗೆ ಹರಡುತ್ತಿದ್ದು, ಈ ಬಗ್ಗೆ ಮುಂಜಾಗ್ರತಾ ಕ್ರಮ ವಹಿಸುವ ಮೂಲಕ ಎಚ್ಚರದಿಂದ ಇರುವಂತೆ ಜಿಲ್ಲಾ ರೋಗ ನಿಯಂತ್ರಣಾಧಿಕಾರಿ ಡಾ. ನಾಗಪ್ಪ ತಿಳಿಸಿದರು.
ನಗರದ ಬೀರನಹಳ್ಳಿಯಲ್ಲಿರುವ ಆರೋಗ್ಯ ಕೇಂದ್ರದ ಬಳಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ ಅಂಗವಾಗಿ ಬುಧವಾರ ಹಮ್ಮಿಕೊಂಡಿದ್ದ ಜಾಗೃತಿ ಜಾಥಕ್ಕೆ ಹಸಿರು ಬಾವುಟ ತೋರುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು, ಡೆಂಗ್ಯೂ ಜ್ವರವೂ ಈಡಿಸ್ ಎಂಬ ಹೆಣ್ಣು ಸೊಳ್ಳೆಯ ಕಚ್ಚುವಿಕೆಯಿಂದ ಉಂಟಾಗುತ್ತದೆ. ಸೋಂಕಿತ ವ್ಯಕ್ತಿಗೆ ಕಚ್ಚಿದ ನಂತರ ಸೋಂಕಿಲ್ಲದ ವ್ಯಕ್ತಿಯನ್ನು ಈ ಸೊಳ್ಳೆ ಕಚ್ಚಿದಾಗ ಮಾತ್ರ ಈ ಕಾಯಿಲೆ ಹರಡುತ್ತದೆ ಎಂದು ಹೇಳಿದರು.
ಡೆಂಗ್ಯೂ ಕಾಯಿಲೆ ಜ್ವರದಂತಹ ರೋಗ ಲಕ್ಷಣಗಳನ್ನು ಉಂಟು ಮಾಡಬಹುದು ಮತ್ತು ಡೆಂೆ ಹೆಮರಾಜಿಕ್ ಜ್ವರ ಎಂದು ಕರೆಯುವ ಡೆಂಗ್ಯೂ ತೀವ್ರ ಸ್ವರೂಪವು ಅಧಿಕ ರಕ್ತಸ್ರಾವ, ಹೃದಯಾಘಾತದಿಂದ ಸಾವಿಗೆ ಕಾರಣವಾಗಬಹುದು. ಇಂದಿಗೂ ಸಹ ಈ ಕಾಯಿಲೆ ವ್ಯಾಪಕವಾಗಿದ್ದು ಇದರ ಬಗ್ಗೆ ಜಾಗೃತಿ ಮೂಡಿಸುವ ಗುರಿಯನ್ನು ಆರೋಗ್ಯ ಇಲಾಖೆ ಹೊಂದಿದೆ. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ಡೆಂಗ್ಯೂ ತಡೆಗಟ್ಟುವಿಕೆಯ ಬಗ್ಗೆ ಜನರಿಗೆ ತಿಳಿಸಲು ಹಲವಾರು ಕಾರ್ಯಕ್ರಮಗಳನ್ನು ಆಯೋಜಿಸುತ್ತ ಬಂದಿದೆ ಎಂದು ಮಾಹಿತಿ ನೀಡಿದರು.
ಈಡಿಸ್ ಸೊಳ್ಳೆಗಳು ಉಷ್ಣ ವಲಯದ ಮತ್ತು ಉಪೋಷ್ಣ ವಲಯದ ಹವಾಮಾನದಲ್ಲಿ ಹೆಚ್ಚು ಸಾಮಾನ್ಯವಾಗಿವೆ. ಡೆಂೆ ಕಾಯಿಲೆಯ ಸಾಮಾನ್ಯ ಲಕ್ಷಣಗಳೆಂದರೆ ತೀವ್ರ ಜ್ವರ, ತಲೆನೋವು, ವಾಕರಿಕೆ, ದದ್ದು ಮತ್ತು ದೇಹದ ಅಂಗಾಂಗಗಳ ನೋವು. ಕೆಲವು ಸಂದರ್ಭಗಳಲ್ಲಿ, ಈ ಕಾಯಿಲೆ ಮಾರಣಾಂತಿಕವಾಗಬಹುದು. ಡೆಂಗ್ಯೂ ವಿರುದ್ಧ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವುದು ಮುಖ್ಯ. ಹಳೆಯ ಹೂ ಕುಂಡಗಳು, ನಿಂತ ಮಳೆ ನೀರು, ಚರಂಡಿ ಅಥವಾ ಇತರ ಯಾವುದೇ ಪ್ರದೇಶದಲ್ಲಿ ನಿಂತಿರುವ ಅಲ್ಪ ಪ್ರಮಾಣದ ನೀರಿನಲ್ಲಿ ಈ ಸೊಳ್ಳೆಗಳು ಮೊಟ್ಟೆ ಇಡುತ್ತವೆ. ಹಾಗಾಗಿ ಮನೆಯ ಸುತ್ತ ಎಲ್ಲೂ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ನಿಮ್ಮ ಮನೆಯನ್ನು ಸ್ವಚ್ಛವಾಗಿ ಮತ್ತು ವ್ಯವಸ್ಥಿತವಾಗಿ ಇರಿಸಿಕೊಳ್ಳಿ. ಉದಾಹರಣೆಗೆ ಹಳೆಯ ಟೈರುಗಳು ಮತ್ತು ಇತರೆ ವಸ್ತುಗಳಲ್ಲಿ ನೀರು ಶೇಖರಣೆಯಾಗದಂತೆ ನೋಡಿಕೊಳ್ಳಿ ಎಂದು ಸಲಹೆ ನೀಡಿದರು.
ಜಾಥ ಕಾರ್ಯಕ್ರಮದಲ್ಲಿ ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಅಧಿಕಾರಿ ವೇಣುಗೋಪಾಲ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಹರೀಶ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಶಿವಶಂಕರ್, ತಾಲೂಕು ಆರೋಗ್ಯಾಧಿಕಾರಿ ಡಾ. ವಿಜಯ್, ನಿವೃತ್ತ ಪೊಲೀಸ್ ಸಬ್‌ಇನ್ಸ್ ಪೆಕ್ಟರ್ ಕರೀಗೌಡ ಇತರರು ಉಪಸ್ಥಿತರಿದ್ದರು.