ಡೀಸೆಲ್ ಮೇಲಿನ ಸೆಸ್ ಏರಿಕೆ: ಜಿಲ್ಲಾ ಟ್ರಕ್ಕರ್‌ಗಳ ಅಸೋಸಿಯೇಷನ್ ವಿರೋಧ

lorry
Published on

ಮೈಸೂರು: ಡೀಸೆಲ್ ಮೇಲೆ 2.03 ರೂ. ಸೆಸ್ ಏರಿಕೆ ನಿರ್ಧಾರದಿಂದ ರಾಜ್ಯ ಸರ್ಕಾರ ಹಿಂದೆ ಸರಿಯಬೇಕು ಎಂದು ಜಿಲ್ಲಾ ಟ್ರಕ್ಕರ್‌ಗಳ ಅಸೋಸಿಯೇಷನ್ ಒತ್ತಾಯಿಸಿದೆ.

ಡೀಸೆಲ್ ಮೇಲೆ ಸೆಸ್ ಏರಿಕೆ ಮಾಡಿರುವುದು ಲಾರಿ ಮಾಲೀಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ಹೀಗಾಗಿ ಈ ನಿರ್ಧಾರವನ್ನು ಕೂಡಲೇ ಹಿಂಪಡೆಯದಿದ್ದಲ್ಲಿ ಹೋರಾಟ ನಡೆಸಲಾಗುವುದು ಎಂದು ಸಂಘದ ಅಧ್ಯಕ್ಷ ಶ್ರೀನಿವಾಸರಾವ್ ಗುರುವಾರ ಸುದ್ದಿಗೋಷ್ಠಿಯಲ್ಲಿ ಎಚ್ಚರಿಸಿದರು.

8 ತಿಂಗಳ ಹಿಂದಷ್ಟೇ 1.50 ಪೈಸೆ ಏರಿಸಲಾಗಿತ್ತು. ಈಗ ಮತ್ತೊಮ್ಮೆ ಹೆಚ್ಚಿಸಲಾಗಿದೆ. ಆದರೆ ಇದಕ್ಕೆ ತಕ್ಕಂತೆ ಬಾಡಿಗೆ ದರ ಏರಿಕೆ ಆಗುತ್ತಿಲ್ಲ. ಈಗಾಗಲೇ ಹಳೇ ಲಾರಿಗಳಿಗೆ ಎಫ್‌ಸಿ ಶುಲ್ಕ, ಇಂಜಿನ್ ಆಯಿಲ್ ಮೊದಲಾದವುಗಳ ಬೆಲೆ ಸಹ ಅವೈಜ್ಞಾನಿಕವಾಗಿ ಏರಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.

ಲಾರಿ ಮಾಲೀಕರು ಸಾವಿರಾರು ಕೋಟಿ ರೂ. ತೆರಿಗೆ ಕಟ್ಟುತ್ತಿದ್ದಾರೆ. ಆದರೆ ಇದರಿಂದ ಲಾರಿ ಮಾಲೀಕರು ಅಥವಾ ಅವರ ಮಕ್ಕಳಿಗೆ ಸರ್ಕಾರದಿಂದ ಯಾವುದೇ ಸೌಲಭ್ಯ, ನೆರವು ದೊರೆಯುತ್ತಿಲ್ಲ. ಆದರೆ ಈಗ ದರ ಏರಿಕೆ ಮಾಡಿರುವುದರಿಂದಾಗಿ ಅಕ್ಕಿ, ಬೇಳೆ, ಅಡುಗೆ ಎಣ್ಣೆ, ಸೋಪು ಮೊದಲಾದವುಗಳ ದರ ಏರುತ್ತದೆ. ಅಂತಿಮವಾಗಿ ಇದರ ಹೊರೆ ಜನರ ಮೇಲಾಗಲಿದೆ.

ಆದ್ದರಿಂದ ರಾಜ್ಯ ಸರ್ಕಾರ ಕೂಡಲೇ ಸೆಸ್ ಏರಿಕೆ ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಪದಾಧಿಕಾರಿಗಳಾದ ಅಸ್ಗರಲಿ ಖಾನ್, ಲಿಂಗರಾಜು, ರಮೇಶ್ ಹಾಗೂ ಮಹೇಶ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net