

ಬೀದರ್: ಕರೊನಾ ಸೋಂಕಿನಿಂದ ಗುಣಮುಖರಾಗಿ ಬ್ರಿಮ್ಸ್ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ ಬೆನ್ನಲ್ಲೇ ಹೊರಗಡೆ ಸುತ್ತಾಟ ಆರಂಭಿಸಿದ ತಬ್ಲಿಘಿ ವಿರುದ್ಧ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಓಲ್ಡ್ ಸಿಟಿಯ ಕುಸುಮ್ ಗಲ್ಲಿ ನಿವಾಸಿ ಶೋಯೋಬುದ್ದಿನ್ ಇಸುಫೋದ್ದಿನ್ ಕಚೇರಿವಾಲೆ (38) ವಿರುದ್ಧ ಪ್ರಕರಣ ದಾಖಲಾಗಿದೆ. ತಬ್ಲಿಘಿ ಜಮಾತ್ ಸಭೆಗೆ ಹೋಗಿ ಬಂದ ನಂತರ ಇವರಿಗೆ ಕರೊನಾ ಸೋಂಕು ತಗುಲಿತ್ತು. ಬ್ರಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಪೂರ್ಣ ಗುಣಮುಖರಾಗಿದ್ದ ಇವರನ್ನು ಬುಧವಾರ ರಾತ್ರಿ ಡಿಸ್ಚಾರ್ಜ್ ಮಾಡಿ 14 ದಿನ ಕಡ್ಡಾಯ ಹೋಮ್ ಕ್ವಾರಂಟೈನ್ಗೆ ಸೂಚಿಸಲಾಗಿತ್ತು. ಆದರೆ ಗುರುವಾರ ಬೆಳಗ್ಗೆಯಿಂದಲೇ ವಿವಿಧೆಡೆ ಸುತ್ತಾಡುತ್ತ ನಿಯಮ ಪಾಲಿಸದೆ ಮೊಂಡುತನ ಪ್ರದಶರ್ಿಸಿದ್ದರಿಂದ ಪೊಲೀಸರು ಕ್ರಮ ಜರುಗಿಸಿದ್ದಾರೆ.
14 ದಿನ ಮನೆಬಿಟ್ಟು ಹೊರಬರದಂತೆ ಕೈ ಮೇಲೆ ಸೀಲ್ ಹಾಕಲಾಗಿತ್ತು. ಇದನ್ನು ಕಡ್ಡಾಯ ಪಾಲಿಸಲು ಜಿಲ್ಲಾಧಿಕಾರಿ ಡಾ.ಮಹಾದೇವ ಅವರು ಬಿಡುಗಡೆ ಸಂದರ್ಭದಲ್ಲಿ ತಾಕೀತು ಮಾಡಿದ್ದರು. ಆದರೂ ಗುರುವಾರ ರಂಗಮಂದಿರ ಹತ್ತಿರದ ಸಹೋದರ ರಫಿಯೋದ್ದಿನ್ ಕಚೇರಿವಾಲೆ ಮನೆ ಇತರೆಡೆ ಸುತ್ತಾಟ ನಡೆಸಿದ್ದಾರೆ. ಇದನ್ನು ಗಮನಿಸಿದ ಎಎಸ್ಐ ದಶರಥ ದೂರು ನೀಡಿದ್ದರಿಂದ ಪ್ರಕರಣ ದಾಖಲಿಸಲಾಗಿದೆ. ಕರೊನಾ ಸೋಂಕು ಹರಡಿಸುವ ಅಪಾಯ ಇರುವುದರಿಂದ ಇವರ ವಿರುದ್ಧ ಕ್ರಮ ಜರುಗಿಸಲು ದೂರಿನಲ್ಲಿ ಕೋರಲಾಗಿದೆ.