ಡಿಸೆಂಬರ್‌ನಲ್ಲಿ ಸಫಾಯಿ ಕರ್ಮಚಾರಿಗಳ ಸಭೆ

HUN-NOV-6-1(SHIVANNA VISIT)
ಹುಣಸೂರು ನಗರದ ಪ್ರವಾಸಿ ಮಂದಿರದಲ್ಲಿ ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಅಧ್ಯಕ್ಷ ಎಂ.ಶಿವಣ್ಣ ಪೌರಕಾರ್ಮಿಕರೊಂದಿಗೆ ಸಭೆ ನಡೆಸಿದರು. ಪ್ರಭಾರ ಪೌರಾಯುಕ್ತೆ ಎಲ್.ರೂಪಾ, ಪೆರುಮಾಳ್, ಶಿವಕುಮಾರ್, ಮಹದೇವ್ ಇತರರು ಇದ್ದರು.
Published on

ಹುಣಸೂರು: ಸಫಾಯಿ ಕರ್ಮಚಾರಿಗಳ ಕುಂದು ಕೊರತೆ ಕುರಿತು ಸಮಗ್ರ ಚರ್ಚೆ ಮತ್ತು ಪರಿಹಾರಕ್ಕಾಗಿ ಡಿಸೆಂಬರ್‌ನಲ್ಲಿ ಹುಣಸೂರಿನಲ್ಲಿ ಅಧಿಕಾರಿಗಳೊಂದಿಗೆ ಸಭೆ ಆಯೋಜಿಸಲಾಗುವುದು ಎಂದು ಸಫಾಯಿ ಕರ್ಮಚಾರಿಗಳ ಆಯೋಗದ ರಾಜ್ಯಾಧ್ಯಕ್ಷ ಎಂ.ಶಿವಣ್ಣ ತಿಳಿಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಭಾನುವಾರ ಪೌರಕಾರ್ಮಿಕರೊಂದಿಗೆ ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದ ಅವರು, ರಾಜ್ಯದ ಬಹುತೇಕ ಜಿಲ್ಲಾ ಕೇಂದ್ರಗಳಲ್ಲಿ ಸಫಾಯಿ ಕರ್ಮಚಾರಿಗಳ ಸಮಸ್ಯೆಗಳ ಕುರಿತು ಈಗಾಗಲೇ ಸಭೆ ನಡೆಸಿದ್ದೇನೆ. ಮೈಸೂರು ಜಿಲ್ಲೆಯಲ್ಲಿ ಹುಣಸೂರು, ಪಿರಿಯಾಪಟ್ಟಣ ಮತ್ತು ಕೆ.ಆರ್.ನಗರ ತಾಲೂಕುಗಳಿಗೆ ಭೇಟಿ ನೀಡಬೇಕಿದೆ. ಹುಣಸೂರಿನಲ್ಲಿ ಡಿಸೆಂಬರ್‌ನಲ್ಲಿ ಅಧಿಕಾರಿಗಳು ಮತ್ತು ಸಫಾಯಿ ಕರ್ಮಚಾರಿಗಳನ್ನು ಒಳಗೊಂಡು ಸಭೆ ನಡೆಯಲಿದೆ. ಹುಣಸೂರು ತಾಲೂಕಿನಲ್ಲಿ ಪೌರಕಾರ್ಮಿಕರ ಮತ್ತು ಸಫಾಯಿ ಕರ್ಮಚಾರಿಗಳ ಸಮಸ್ಯೆಗಳು ಸಾಕಷ್ಟಿದ್ದು, ಸಭೆಯಲ್ಲಿ ಪರಿಹಾರೋಪಾಯ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯ ಮತ್ತು ಕೇಂದ್ರ ಸರ್ಕಾರ ಸಫಾಯಿ ಕರ್ಮಚಾರಿಗಳ ಸರ್ವತೋಮುಖ ಅಭಿವೃದ್ಧಿಗೆ ನಿರ್ಣಯಿಸಿವೆ. ರಾಜ್ಯಾಧ್ಯಕ್ಷನಾದ ನಂತರ ದೇಶದ ಇತರ ರಾಜ್ಯಗಳಲ್ಲಿ ಸಫಾಯಿ ಕರ್ಮಚಾರಿಗಳ ಸ್ಥಿತಿಗತಿ, ಅವರಿಗಾಗಿ ಇರುವ ಕಾರ್ಯಕ್ರಮಗಳ ಕುರಿತು ತಿಳಿಯಲು ಈಗಾಗಲೇ ಪ್ರವಾಸ ನಡೆಸಿ ಮಾಹಿತಿ ಪಡೆದಿದ್ದೇನೆ. ಇದಲ್ಲದೆ ರಾಜ್ಯ ಸರ್ಕಾರ 17 ಜನರ ತಂಡ ರಚಿಸಿದ್ದು, ಸಿಂಗಪುರ ಪ್ರವಾಸ ಕೈಗೊಂಡು ಅಲ್ಲಿನ ಸಫಾಯಿ ಕರ್ಮಚಾರಿಗಳಿಗಾಗಿ ಕೈಗೊಂಡಿರುವ ಅಭಿವೃದ್ಧಿಪರ ಕಾರ್ಯಕ್ರಮಗಳ ಮಾಹಿತಿ ಪಡೆಯಲಿದೆ ಎಂದು ಹೇಳಿದರು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಫಾಯಿ ಕರ್ಮಚಾರಿಗಳ ಅಭಿವೃದ್ಧಿಗಾಗಿ ಕಟಿಬದ್ಧರಾಗಿದ್ದಾರೆ. ಅದಕ್ಕೆ ಉದಾಹರಣೆಯೆಂದರೆ ಈಗಾಗಲೇ ರಾಜ್ಯದ 11 ಸಾವಿರಕ್ಕೂ ಹೆಚ್ಚು ಪೌರಕಾರ್ಮಿಕರ ಸೇವೆ ಕಾಯಂಗೊಳಿಸಿರುವುದು. ಡಿಸೆಂಬರ್ ಅಂತ್ಯದ ವೇಳೆಗೆ ಉಳಿದವರನ್ನೂ ಸರ್ಕಾರ ಕಾಯಂಗೊಳಿಸಲಿದೆ. ಸಫಾಯಿ ಕರ್ಮಚಾರಿಗಳ ಆರೋಗ್ಯ, ಶಿಕ್ಷಣ, ವಸತಿ ಮುಂತಾದವುಗಳ ಕುರಿತು ತೀವ್ರ ಕಾಳಜಿ ಹೊಂದಿದ್ದು, ರಾಜ್ಯದಲ್ಲಿ ಈ ಸಮುದಾಯದಲ್ಲಿ ಬದಲಾವಣೆಯ ಪರ್ವವನ್ನು ಮುಖ್ಯಮಂತ್ರಿಗಳು ಮಾಡಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯೆ ರಾಣಿ ಪೆರುಮಾಳ್, ತಾಲೂಕು ಪೌರಕಾರ್ಮಿಕರ ಸಂಘದ ಅಧ್ಯಕ್ಷ ಮುರುಗೇಶ್, ನಗರಸಭೆ ಮಾಜಿ ಅಧ್ಯಕ್ಷ ಎಂ.ಶಿವಕುಮಾರ್, ಮುಖಂಡರಾದ ಎಚ್.ಸಿ.ಮಾದ, ಪೆರುಮಾಳ್, ಕೃಷ್ಣ, ರಮೇಶ್, ದಲಿತ ಮುಖಂಡರಾದ ಬಲ್ಲೇನಹಳ್ಳಿ ಕೆಂಪರಾಜು, ಜೆ.ಮಹದೇವ್, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net