

ಗೌರಿಬಿದನೂರು : ಪ್ರತಿ ಹಳ್ಳಿಯಲ್ಲಿ ಸ್ತ್ರೀಶಕ್ತಿ ಸ್ವಹಾಯ ಸಂಘಗಳಿಗೆ ಡಿಸಿಸಿ ಬ್ಯಾಂಕ್ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ಅವರನ್ನು ಆರ್ಥಿಕವಾಗಿ ಸಬಲೀಕರಣ ಮಾಡುತ್ತಿದೆ ಎಂದು ಶಾಸಕ ಎನ್.ಎಚ್.ಶಿವಶಂಕರರೆಡ್ಡಿ ಹೇಳಿದರು.
ತಾಲೂಕಿನ ಕಾಚಮಾಚೇನಹಳ್ಳಿ ಶ್ರೀ ಬೊಮ್ಮಲಿಂಗಶ್ವೇರ ದೇವಾಲಯ ಆವರಣದಲ್ಲಿ ಡಿಸಿಸಿ ಬ್ಯಾಂಕ್ ಬುಧವಾರ ಹಮ್ಮಿಕೊಂಡಿದ್ದ ಸಾಲದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಸೊನಾಗಾನಹಳ್ಳಿ ವಿಎಸ್‌ಎಸ್‌ಎನ್ ಸೊಸೈಟಿಯಿಂದ 15 ಮಹಿಳಾ ಸ್ತ್ರೀ ಶಕ್ತಿ ಸಂಘಕ್ಕೆ 75 ಲಕ್ಷ ರೂ. ಸಾಲ, 39 ರೈತರಿಗೆ 38 ಲಕ್ಷ 30ಸಾವಿರ ರೂ. ಕೃಷಿ ಸಾಲ, ಕಾಚಮಾಚೇನಹಳ್ಳಿ ಸೊಸೈಟಿ ಮೂಲಕ 30 ಸಂಘಗಳಿಗೆ 1ಕೋಟಿ 50ಲಕ್ಷ ರೂ., ಇಡಗೂರು ಸೊಸೈಟಿಯಿಂದ 13 ಸಂಘಗಳಿಗೆ 65 ಲಕ್ಷ ರೂ.ಗಳನ್ನು ಶೂನ್ಯ ಬಡ್ಡಿದರದಲ್ಲಿ ವಿತರಿಸಿ ಮಾತನಾಡಿ, ಸಾಲ ತೆಗದುಕೊಂಡ ಮಹಿಳೆಯರು ಉಳಿತಾಯಕ್ಕೆ ಹೆಚ್ಚು ಒತ್ತು ನೀಡಿ, ಆ ಹಣವನ್ನು ಇದೇ ಬ್ಯಾಂಕ್‌ನಲ್ಲಿ ನಿಮ್ಮ ಖಾತೆಗೆ ಹಾಕಿ ಉಳಿತಾಯ ಮಾಡಿಕೊಳ್ಳಬೇಕು ಎಂದರು.
ಡಿಸಿಸಿ ಬ್ಯಾಂಕ್ ನಿರ್ದೇಶಕ ಮರಳೂರು ಹನುಮಂತರೆಡ್ಡಿ ಮಾತನಾಡಿ, ಮಹಿಳೆಯರೇ ಡಿಸಿಸಿ ಬ್ಯಾಂಕ್‌ನ ಆಧಾರ ಸ್ತಂಭ. ಅವರ ಅಭಿವೃದ್ಧಿಗೆ ಸದಾ ಬ್ಯಾಂಕ್ ಬದ್ಧವಾಗಿದೆ. ಡಿಸಿಸಿ ಬ್ಯಾಂಕನಿಂದ ಸಾಲ ಪಡೆಯಲು ಸ್ತ್ರೀ ಶಕ್ತಿ ಸಂಘಗಳಿಂದ ಲಂಚ ಪಡೆಯಲಾಗುತ್ತಿದೆ ಎಂದು ರಾಜಕೀಯ ಪ್ರೇರಿತವಾದ ಆರೋಪಗಳಲ್ಲಿ ಹುರುಳಿಲ್ಲ. ಡಿಸಿಸಿ ಬ್ಯಾಂಕ್‌ನಲ್ಲಿ ಆನ್‌ಲೈನ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಅಸ್ಪಾಂಪಾಷ, ತಾಪಂ ಅಧ್ಯಕ್ಷ ಆರ್.ಲೋಕೇಶ್, ಎಪಿಎಂಸಿ ಮಾಜಿ ಅಧ್ಯಕ್ಷ ಆರ್.ಬೊಮ್ಮಣ, ತಾಪಂ ಸದಸ್ಯ ನಾಗೇಶ್, ಕಾರ್ಯದರ್ಶಿ ನಾಗರಾಜು, ಮಂಜುನಾಥ್ ಇಡಗೂರು, ಲಕ್ಷ್ಮೀದೇವಮ್ಮ, ಮುಖಂಡರಾದ ಎಚ್.ಎನ್.ಪ್ರಕಾಶ್‌ರೆಡ್ಡಿ, ಅಶ್ವತ್ಥಪ್ಪ, ರಾಜಗೋಪಲಚಾರಿ, ಲಕ್ಷ್ಮೀಪತಿ, ಮೇಲ್ವಿಚಾರಕ ಚಂದ್ರಶೇಖರ್ ಇತರರಿದ್ದರು.