ಡಿಸಿಸಿ ಬ್ಯಾಂಕ್‌ನಿಂದ ಸೀ ಶಕ್ತಿ ಸಂಘಗಳಿಗೆ ಸಾಲದ ಚೆಕ್ ವಿತರಣೆ

20CBP3
Published on

ಚಿಕ್ಕಬಳ್ಳಾಪುರ  ಮಹಿಳೆಯರು ಆರ್ಥಿಕ ಸಬಲರಾಗಿ ಸಮಾಜದ ಮುಖ್ಯವಾಹಿನಿಯಲ್ಲಿ ಗುರುತಿಸಿಕೊಳ್ಳಬೇಕು ಎಂದು ವೈದ್ಯಕೀಯ ಶಿಕ್ಷಣ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ ಸುಧಾಕರ್ ಸಲಹೆ ನೀಡಿದರು.

ನಗರದ ಪತ್ರಕರ್ತರ ಭವನದಲ್ಲಿ ಶನಿವಾರ ಡಿಸಿಸಿ ಬ್ಯಾಂಕ್ ವತಿಯಿಂದ ಸೀ ಶಕ್ತಿ ಸಂಘಗಳಿಗೆ ಶೂನ್ಯ ಬಡ್ಡಿದರದ ಸಾಲ ವಿತರಿಸಿ ಮಾತನಾಡಿದ ಅವರು. ಮಹಿಳೆಯರು ಪ್ರತಿ ಕ್ಷೇತ್ರದಲ್ಲೂ ಸಾಧನೆಯ ಮೂಲಕ ಗಮನ ಸೆಳೆಯುತ್ತಿದ್ದಾರೆ, ಇದರ ನಡುವೆಯೂ ಅನೇಕರು ನಾಲ್ಕು ಗೋಡೆಗೆ ಸೀಮಿತವಾಗಿದ್ದು ಇವರೂ ಸಹ ಮುಖ್ಯವಾಹಿನಿಗೆ ಬರಬೇಕು ಎಂದರು.

ಮಹಿಳೆಯರಿಗೆ ವಿವಿಧ ಸವಲತ್ತುಗಳನ್ನು ಒದಗಿಸಿ ಅವರ ಶಕ್ತಿ ಹೆಚ್ಚಿಸಲಾಗುತ್ತದೆ. ಇದರಲ್ಲಿ ಡಿಸಿಸಿ ಬ್ಯಾಂಕ್‌ನ ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯವೂ ಒಂದು. ಇದು ಆರ್ಥಿಕ ಪ್ರಗತಿಗೆ ಪೂರಕವಾಗಿದ್ದು ಸದ್ವಿನಿಯೋಗಪಡಿಸಿಕೊಳ್ಳಬೇಕು ಎಂದರು.

ಶೂನ್ಯ ಬಡ್ಡಿ ದರದ ಸಾಲ ಸೌಲಭ್ಯ ಮಹಿಳೆಯರು ಆರ್ಥಿಕವಾಗಿ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು ಸಹಕಾರಿಯಾಗಿದೆ. ಸಾಲದ ಬಡ್ಡಿಯನ್ನು ಸರ್ಕಾರವೇ ಭರಿಸುವುದರಿಂದ ಫಲಾನುಭವಿಗಳಿಗೆ ಹೊರೆ ಕಡಿಮೆಯಾಗಿದೆ ಎಂದು ತಾಪಂ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ ಅಭಿಪ್ರಾಯಪಟ್ಟರು.

ಪಡೆದ ಸಾಲವನ್ನು ಕುರಿ, ಮೇಕೆ, ಹಸು ಸಾಕಣೆ ಸೇರಿ ಲಾಭದಾಯಕ ಸೂಕ್ತ ಕೆಲಸಗಳಿಗೆ ಮೀಸಲಿರಿಸಬೇಕು. ಯಾವುದೇ ಕಾರಣಕ್ಕೂ ದುಂದು ವೆಚ್ಚ ಸೇರಿ ಅನವಶ್ಯಕ ಚಟುವಟಿಕೆಗೆ ಬಳಸಬಾರದು. ಹಾಗೆಯೇ ಆರ್ಥಿಕ ಚೈತನ್ಯ ಹೊಂದುವುದರ ಜತೆಗೆ ಸಾಲ ಮರು ಪಾವತಿಸಬೇಕು ಎಂದು ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಬ್ಯಾಂಕ್ ವ್ಯವಸ್ಥಾಪಕಿ ಜ್ಯೋತಿ ಸಲಹೆ ನೀಡಿದರು.

ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ಪಿ.ನಾಗೇಶ್, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ದ್ಯಾವಪ್ಪ, ವೇದ ಸುದರ್ಶನ್, ಕೋಚಿಮುಲ್ ಮಾಜಿ ಅಧ್ಯಕ್ಷ ಕೆ.ವಿ.ನಾಗರಾಜ್ ಇತರರಿದ್ದರು.

42 ಸಂಘಗಳಿಗೆ ಸಾಲ  5 ಲಕ್ಷ ರೂ.ವರೆಗೆ ಶೂನ್ಯ ಬಡ್ಡಿ ದರದ ಸಾಲ ಯೋಜನೆಯಲ್ಲಿ 42 ಸ್ತ್ರೀಶಕ್ತಿ, ಸ್ವಸಹಾಯ ಗುಂಪುಗಳಿಗ 1.82 ಕೋಟಿ ರೂ.ಸಾಲ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಸಚಿವರು, ಜನಪ್ರತಿನಿಧಿಗಳು, ಅಧಿಕಾರಿಗಳು ಹಾಗೂ ಫಲಾನುಭವಿಗಳು ಸೇರಿ ಹಲವರು ಮಾಸ್ಕ್ ಧರಿಸಿದ್ದರೂ ಪರಸ್ಪರ ಅಂತರ ಕಾಪಾಡಿಕೊಳ್ಳುವುದನ್ನು ಮರೆತರು.

12.50 ಕೋಟಿ ರೂ. ಕಾಮಗಾರಿಗೆ ಭೂಮಿಪೂಜೆ ಚಿಕ್ಕಬಳ್ಳಾಪುರ ತಾಲೂಕಿನ ದಿಬ್ಬೂರಿನಲ್ಲಿ 96 ಲಕ್ಷ ರೂ.ವೆಚ್ಚದಲ್ಲಿ ಸರ್ಕಾರಿ ಪದವಿ ಪೂರ್ವ ಕಾಲೇಜು ಕಟ್ಟಡ, 10 ಲಕ್ಷ ರೂ.ವೆಚ್ಚದಲ್ಲಿ ಅಂಬೇಡ್ಕರ್ ಭವನ, ಜಿಲ್ಲಾಡಳಿತ ಭವನ ಹಿಂಭಾಗದಲ್ಲಿ ಸಮಾಜ ಕಲ್ಯಾಣ ಇಲಾಖೆಯಿಂದ 4.71 ಕೋಟಿ ರೂ.ವೆಚ್ಚದಲ್ಲಿ ನಿರ್ಮಿಸುತ್ತಿರುವ ಮೆಟ್ರಿಕ್ ನಂತರ ಬಾಲಕಿಯರ ವಿದ್ಯಾರ್ಥಿ ನಿಲಯ, ಚಿಕ್ಕಬಳ್ಳಾಪುರದ ಜೈ ಭೀಮ್ ವಸತಿ ನಿಲಯ ಆವರಣದಲ್ಲಿ 4.69 ಕೋಟಿ ರೂ. ವೆಚ್ಚದಲ್ಲಿ ಬಾಲಕರ ವಿದ್ಯಾರ್ಥಿ ನಿಲಯ, ಚದಲಪುರ ಬಳಿ ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಕೈಗೊಂಡಿರುವ 2 ಕೋಟಿ ರೂ.ವೆಚ್ಚದ ರಸ್ತೆ (ನಂದಿ-ವಿಜಯಪುರ) ಅಭಿವೃದ್ಧಿ ಕಾಮಗಾರಿಗೆ ಸಚಿವರು ಭೂಮಿ ಪೂಜೆ ನೆರವೇರಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net