ಡಿಸಿಸಿ ಬ್ಯಾಂಕ್ ಶಾಖೆಗಳಲ್ಲಿ ಖಾತೆ ತೆರೆದು ವ್ಯವಹಾರ ನಡೆಸಿ

12bgp-5ph
Published on

ಬಾಗೇಪಲ್ಲಿ: ಮಹಿಳೆಯರು, ರೈತರು, ಕೃಷಿ ಕಾರ್ಮಿಕರಿಗೆ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಆಸರೆಯಾಗಿದೆ, ಬ್ಯಾಂಕ್‌ನ ಶಾಖೆಗಳಲ್ಲಿ ಖಾತೆ ತೆರೆದು ವ್ಯವಹಾರ ಮಾಡಿದರೆ ಸಹಕಾರ ಸಂಘಗಳು ಉಳಿಯಲು ಸಾಧ್ಯವಾಗುತ್ತದೆ ಎಂದು ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ತಿಳಿಸಿದರು.

ಪಟ್ಟಣದ ಕೊಂಡಂವಾರಿಪಲ್ಲಿ ಎಸ್‌ಎಲ್‌ಎನ್ ಕಲ್ಯಾಣ ಮಂಟಪದಲ್ಲಿ ಡಿಸಿಸಿ ಬ್ಯಾಂಕ್ ವತಿಯಿಂದ ಸ್ತ್ರೀಶಕ್ತಿ ಸಂಘಗಳಿಗೆ, ರೈತರಿಗೆ ಸಾಲ ವಿತರಿಸಿ ಮಾತನಾಡಿದ ಅವರು, ಬ್ಯಾಂಕ್ ಸಾಲ ವಿತರಣೆಯಲ್ಲಿ ಮೂಂಚೂಣೆಯಲ್ಲಿದೆ, ಆದರೆ ಇಲ್ಲಿ ಸಾಲ ಸೌಲಭ್ಯ ಪಡೆದ ಬಹಳಷ್ಟು ರೈತರು, ಸ್ತ್ರೀಶಕ್ತಿ ಸಂಘಗಳ ಸದಸ್ಯರು ಬೇರೆ ಬ್ಯಾಂಕ್‌ಗಳಲ್ಲಿ ವ್ಯವಹಾರಗಳಲ್ಲಿ ಮಾಡುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ತಾಲೂಕಿನಲ್ಲಿ ಸ್ತ್ರೀಶಕ್ತಿ ಸ್ವಸಹಾಯ ಗುಂಪುಗಳ ರಚನೆ ಹಾಗೂ ರೈತರಿಗೆ ಸಾಲ ವಿತರಣೆಗೆ ಎಲ್ಲ ವ್ಯವಸಾಯ ಸೇವಾ ಸಹಕಾರ ಸಂಘಗಳ ಆಡಳಿತ ಮಂಡಳಿಗಳು ಮುತುವರ್ಜಿ ವಹಿಸಿ ಕೆಲಸ ಮಾಡಬೇಕಾಗಿದೆ. ಈಗಾಗಲೇ ತಾಲೂಕಿನಲ್ಲಿ 60 ಕೋಟಿ ರೂ. ಸಾಲ ವಿತರಣೆ ಮಾಡಲಾಗಿದ್ದು ಇನ್ನೂ 60 ಕೋಟಿ ರೂ. ಸಾಲ ವಿತರಿಸಲು ಹಿಂಜರಿಯುವುದಿಲ್ಲ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಭಯವಿತ್ತರು.

ತಾಲೂಕಿನ ವಿವಿಧ ಪ್ರಾಥಮಿಕ ಕೃಷಿ ಪತ್ತಿನ ಸೇವಾ ಸಹಕಾರ ಸಂಘಗಳ ವ್ಯಾಪ್ತಿಯ 738 ಸದಸ್ಯರಿಗೆ 5.58 ಕೋಟಿ ರೂ.ಸಾಲ ವಿತರಿಸಲಾಯಿತು. ಬ್ಯಾಂಕ್ ನಿರ್ದೇಶಕ ವಿ.ವೆಂಕಟಶಿವಾರೆಡ್ಡಿ, ಕೋಚಿಮುಲ್ ನಿರ್ದೇಶಕ ವಿ.ಮಂಜುನಾಥರೆಡ್ಡಿ, ಬ್ಯಾಂಕ್ ವ್ಯವಸ್ಥಾಪಕ ಸಿ.ಎನ್.ಚೇತನ್ ಕುಮಾರ್, ಮೇಲ್ವಿಚಾರಕ ಎನ್.ಆಂಜನೇಯ, ನಗದು ಗುಮಾಸ್ತ ಮಂಜುನಾಥ್, ಯಲ್ಲಂಪಲ್ಲಿ ವಿಎಸ್‌ಎಸ್‌ಎನ್ ಅಧ್ಯಕ್ಷ ಯರ‌್ರಕಿಟ್ಟಪ್ಪ, ಮುಖ್ಯಕಾರ್ಯನಿರ್ವಹಣಾಧಿಕಾರಿಗಳಾದ ಸಿ.ವೆಂಕಟರವಣಪ್ಪ, ಶ್ರೀರಾಮು, ನರಸಿಂಹಪ್ಪ, ಶ್ರೀನಿವಾಸ, ನಂಜುಂಡ, ಸೋಮಶೇಖರ್, ಶಿವಾರೆಡ್ಡಿ, ನಾಗಭೂಷಣರಾವ್ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net