ಡಿಸಿಸಿ ಬ್ಯಾಂಕ್ ವಿರುದ್ಧದ ಆರೋಪ ಸಾಬೀತುಪಡಿಸಲಿ : ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸವಾಲು

Published on
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಎಸ್.ವಿ.ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್ ಇದ್ದರು.
ಕೋಲಾರ ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಬ್ಯಾಂಕ್ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿದರು. ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಕೆ.ವಿ.ದಯಾನಂದ್, ಎಸ್.ವಿ.ಸುಧಾಕರ್, ಪಿಎಲ್‌ಡಿ ಬ್ಯಾಂಕ್ ಮಾಜಿ ಅಧ್ಯಕ್ಷ ಶಶಿಧರ್ ಇದ್ದರು.

ಕೋಲಾರ: ನನ್ನ ವಿರುದ್ಧ ದಾಖಲಾಗಿರುವ 9 ಕೇಸ್‌ಗಳಿಗೆ ನಾನು ತಡೆಯಾಜ್ಞೆ ಪಡೆದುಕೊಂಡಿದ್ದೇನೆ ಎಂದು ಸುಳ್ಳು ಹೇಳಿಕೆ ನೀಡಿರುವ ವಿಧಾನ ಪರಿಷತ್ ಸದಸ್ಯ ಇಂಚರ ಗೋವಿಂದರಾಜು ಸದರಿ ಪ್ರಕರಣಗಳ ಮಾಹಿತಿಯನ್ನು ಮಾಧ್ಯಮದ ಮುಂದೆ ಬಹಿರಂಗಪಡಿಸಿದರೆ ಆ ಕ್ಷಣವೇ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಸ್ಪಷ್ಟಪಡಿಸಿದರು.
ಇತ್ತೀಚೆಗೆ ಸುದ್ದಿಗೋಷ್ಠಿಯಲ್ಲಿ ಎಂಎಲ್‌ಸಿ ಇಂಚರ ಗೋವಿಂದರಾಜು ಹೇಳಿಕೆ ನೀಡಿ, ಡಿಸಿಸಿ ಬ್ಯಾಂಕ್‌ನಲ್ಲಿನ ಭ್ರಷ್ಟಾಚಾರದ ವಿರುದ್ಧ 9 ಕೇಸುಗಳು ಹೈಕೋರ್ಟ್‌ನಲ್ಲಿದ್ದು, ಅದಕ್ಕೆ ಗೋವಿಂದಗೌಡರು ತಡೆಯಾಜ್ಞೆ ತಂದಿದ್ದಾರೆ ಎಂದು ಹೇಳಿಕೆ ನೀಡಿದ್ದರ ಹಿನ್ನೆಲೆಯಲ್ಲಿ ಗೋವಿಂದಗೌಡರು ಮಂಗಳವಾರ ಸುದ್ದಿಗೋಷ್ಠಿ ನಡೆಸಿ ವಾಗ್ದಾಳಿ ನಡೆಸಿದರು.


ಸುಳ್ಳು ಆರೋಪ ಘನತೆಗೆ ತಕ್ಕುದಲ್ಲ: ಹಿರಿಯರಾದ ಗೋವಿಂದರಾಜು ಅವರಿಂದ ಇಂತಹ ಸುಳ್ಳು ಹೇಳಿಕೆ ನಿರೀಕ್ಷಿಸಿರಲಿಲ್ಲ. ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್‌ನ್ನು ಕಟ್ಟಿ ಬೆಳೆಸಿದ್ದೇವೆ. 8 ಲಕ್ಷ ಫಲಾನುಭವಿಗಳಿಗೆ 10 ಸಾವಿರ ಕೋಟಿ ರೂಪಾಯಿ ಸಾಲ ನೀಡಿದ್ದೇವೆ. ಇಂತಹ ಸಂದರ್ಭದಲ್ಲಿ ಸುಳ್ಳು ಹೇಳಿಕೆ ನೀಡುವ ಮೂಲಕ ಬ್ಯಾಂಕ್‌ನ ಘನತೆಗೆ ಮಸಿ ಬಳಿಯುವ ಕೆಲಸ ಒಳ್ಳೆಯದಲ್ಲ ಎಂದು ಗೋವಿಂದಗೌಡ ಹೇಳಿದರು.

ದಾಖಲೆ ಪ್ರದರ್ಶಿಸಲಿ: ಕೆಂಚಾಪುರ ಸೊಸೈಟಿಯಲ್ಲಿ ನಾರಾಯಣರೆಡ್ಡಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆ ಈಗಾಗಲೇ ಮುಗಿದಿದೆ. ಉಳಿದಂತೆ ಒಂದು ಪ್ರಕರಣ ದಾಖಲಾಗಿದ್ದು ಆ ಸೊಸೈಟಿಯವರು ತಡೆಯಾಜ್ಞೆ ತಂದಿದ್ದಾರೆ. ಅದರಲ್ಲಿ ನಾನು ಭಾಗಿಯಿಲ್ಲ. 9 ಪ್ರಕರಣಗಳಲ್ಲಿ ತಡೆಯಾಜ್ಞೆ ತಂದಿದ್ದರೆ ಮಾಧ್ಯಮಗಳ ಮುಂದೆ ದಾಖಲೆ ಪ್ರದರ್ಶಿಸಲಿ, ಆ ರೀತಿಯ ಅಕ್ರಮದ ವ್ಯವಸ್ಥೆಯ ಕುರ್ಚಿಯಲ್ಲಿ ಒಂದು ದಿನವೂ ನಾನು ಕೂರುವುದಿಲ್ಲ ಎಂದು ಗೋವಿಂದಗೌಡ ಹೇಳಿದರು. ಡಿಸಿಸಿ ಬ್ಯಾಂಕ್ ಸಾಲ ನೀಡಿಕೆ, ವಸೂಲಾತಿಯಲ್ಲಿ ರಾಜ್ಯಕ್ಕೆ ಮೊದಲಿದ್ದರೂ, ಠೇವಣಿ ಸಂಗ್ರಹದಲ್ಲಿ ಹಿನ್ನಡೆ ಹೊಂದಿದ್ದೇವೆ. ಇಂತಹ ಸುಳ್ಳು ಹೇಳಿಕೆ ನೀಡಿ ಜನರನ್ನು ದಿಕ್ಕುತಪ್ಪಿಸುವ ಪ್ರಯತ್ನ ನಡೆಸಿದರೆ ಬ್ಯಾಂಕನ್ನೆ ನಂಬಿರುವವರಿಗೆ ದ್ರೋಹ ಬಗೆದಂತೆ ಅಲ್ಲವೇ ಎಂದು ಪ್ರಶ್ನಿಸಿದರು.

ತನಿಖೆಗೆ ಮುಕ್ತ ಅವಕಾಶ: ಬ್ಯಾಂಕ್‌ನಲ್ಲಿ ತಪ್ಪು ನಡೆದಿದ್ದರೆ ಅದರ ವಿರುದ್ಧ ತನಿಖೆ ನಡೆಸಲು ಮುಕ್ತ ಅವಕಾಶ ನೀಡಿದ್ದೇವೆ. ಈಗಾಗಲೇ ಎಲ್ಲವೂ ಸುಳ್ಳು ಎಂದು ಸಾಬೀತಾಗಿದೆ. ಕೇವಲ ಪ್ರಚಾರಕ್ಕಾಗಿ ಸಂಸ್ಥೆಯನ್ನು ಹಾಳು ಮಾಡದಿರಿ ಎಂದು ಗೋವಿಂದಗೌಡ ಸಲಹೆ ನೀಡಿದರು.

193 ಸಂಘಗಳು ಸಬಲ: ಬ್ಯಾಂಕ್ ಉಳಿಸಬೇಕು ಎಂದು ಕಷ್ಟಪಟ್ಟು ಕೆಲಸ ಮಾಡಿದ್ದೇವೆ, ನಾನು ಅಧ್ಯಕ್ಷನಾದಾಗ ಕೇವಲ 33 ಸಂಘಗಳು ಮಾತ್ರ ಅವಿಭಜಿತ ಜಿಲ್ಲೆಯಲ್ಲಿ ಆರ್ಥಿಕವಾಗಿ ಸಬಲವಾಗಿದ್ದವು. ಆದರೆ ಈಗ 193 ಸಂಘಗಳು ಸಬಲಗೊಂಡು, ಗಣಕೀಕರಣಗೊಂಡಿವೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಸಿದ್ದರಾಮಯ್ಯ ಸ್ಪರ್ಧಿಸದಿದ್ದರೆ ನನಗೆ ಟಿಕೆಟ್ ನೀಡಿ: ಕೋಲಾರ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುವುದಾಗಿ ಈಗಾಗಲೇ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಅವರ ಸ್ಪರ್ಧೆಗೆ ನನ್ನ ಸಹಕಾರ ಇದೆ. ಒಂದು ವೇಳೆ ಅವರು ಕೋಲಾರದಲ್ಲಿ ಸ್ಪರ್ಧಿಸದಿದ್ದರೆ ನನಗೆ ಟಿಕೆಟ್ ನೀಡಲಿ. ನಾನೂ ಸಹ ಪ್ರಬಲ ಆಕಾಂಕ್ಷಿ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಒತ್ತಾಯಪಡಿಸಿದರು.

ಆರೋಪಕ್ಕೆ ಬ್ಯಾಲಹಳ್ಳಿ ಸ್ಪಷ್ಟನೆ: ಮಾಜಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಅವರು ಅಡ್ಡಗಲ್ ಸೊಸೈಟಿಯಲ್ಲಿ 33 ಕೋಟಿ ರೂಪಾಯಿ ಅವ್ಯವಹಾರವಾಗಿದೆ, ಅಲ್ಲಿ ನಕಲಿ ಸಂಘಗಳಿವೆ ಎಂದು ಹೇಳಿಕೆ ನೀಡಿದ್ದಾರೆ. ಆದರೆ ಅಲ್ಲಿ ಸಾಲ ನೀಡಿರುವುದೇ ಒಟ್ಟು 6.80 ಕೋಟಿ ರೂಪಾಯಿ. ಅಲ್ಲಿ 87 ಮಹಿಳಾ ಸಂಘಗಳಿಗೆ 4.35 ಕೋಟಿ ರೂಪಾಯಿ ಸಾಲ ನೀಡಿದ್ದೇವೆ. 267 ರೈತರಿಗೆ 2.32 ಕೋಟಿ ರೂಪಾಯಿ ನೀಡಿದ್ದೇವೆ, ಮಹಿಳೆಯರು ಪ್ರಾಮಾಣಿಕವಾಗಿ ಕಂತು ಪಾವತಿಸುತ್ತಿದ್ದು, ಈಗಾಗಲೇ 1.5 ಕೋಟಿ ರೂಪಾಯಿ ವಸೂಲಿಯಾಗಿದೆ. ಇಂತಹ ಸಂದರ್ಭದಲ್ಲಿ ಮಾಜಿ ಶಾಸಕರು ವಿಷಯ ತಿಳಿದು ಆರೋಪ ಮಾಡಬೇಕಾಗಿತ್ತು. ಅವರಿಗೆ ಮಾಹಿತಿ ಕೊರತೆಯಿದೆ. ಸಾಲ ವಿತರಣೆಯಲ್ಲಿ ಮೋಸವಾಗಿದ್ದರೆ ದೂರು ನೀಡಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ. ಇದುವರೆಗೂ ಜಿಲ್ಲೆಯಲ್ಲಿ ಆ ರೀತಿಯ ಅವ್ಯವಹಾರಕ್ಕೆ ಅವಕಾಶ ನೀಡಿಲ್ಲ, ನನಗೆ ನನ್ನ ಮಾನಹಾನಿಗಿಂತ ಬ್ಯಾಂಕಿನ ಘನತೆ ಮುಖ್ಯವಾಗಿದೆ ಎಂದು ಬ್ಯಾಲಹಳ್ಳಿ ಗೋವಿಂದಗೌಡ ಹೇಳಿದರು.

ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಂದ ಅಧ್ಯಕ್ಷ ಸ್ಥಾನ: ನಾನು ಕಳೆದ 9 ವರ್ಷ ಕಾಂಗ್ರೆಸ್ ಬೆಂಬಲಿತ ನಿರ್ದೇಶಕರಿಂದಲೇ ಆಡಳಿತ ಅಧ್ಯಕ್ಷನಾಗಿದ್ದೆ, ನನಗೆ ಈ ಸ್ಥಾನ ಸಿಗಲು ಕಾಂಗ್ರೆಸ್ ಕಾರಣ. ಅವಿಭಜಿತ ಜಿಲ್ಲೆಯ ಆ ಪಕ್ಷದ ಶಾಸಕರು ಸಹಕಾರ ನೀಡಿದ್ದಾರೆ. ನಿಮ್ಮನ್ನು ರಮೇಶ್‌ಕುಮಾರ್ ಬಲಿಪಶು ಮಾಡಿದ್ದಾರೆ ಎಂಬ ಜಿ.ಕೆ.ವೆಂಕಟಶಿವಾರೆಡ್ಡಿ ಆರೋಪಕ್ಕೆ ಪ್ರತಿಕ್ರಿಯಿಸಿದ ಅವರು, ನನ್ನ ವಿರುದ್ಧ ಎಲ್ಲರೂ ಆರೋಪ ಮಾಡಿದ್ದಾರೆ. ತನಿಖೆಗಳು ಮಾಡಿಸಿದ್ದೂ ಆಯಿತು. ಸಹಕಾರ ರಂಗದಲ್ಲಿ ರಾಜಕೀಯ ಎಂಬುದು ಅಂಟಿಕೊಂಡಿದೆ. ಜೈಲಿಗೂ ಕಳುಹಿಸುತ್ತೇನೆ, ಸಿಬಿಐ ತನಿಖೆ ಮಾಡಿಸುತ್ತೇನೆ ಎಂದು ಹೊರಟವರಿಗೆ ತನಿಖೆಯಿಂದ ಯಾವ ಪ್ರಯೋಜನವೂ ಆಗಲಿಲ್ಲ. ಅವೆಲ್ಲ ಈಗ ಮುಗಿದ ಅಧ್ಯಾಯ. ಆದರೂ ನನ್ನನ್ನು ಬಲಿಪಶು ಮಾಡಲು ದೇವರು ಮತ್ತು ಅವಿಭಜಿತ ಜಿಲ್ಲೆಯ ಬಡವರಿಂದ ಮಾತ್ರ ಸಾಧ್ಯ ಎಂದು ಗೋವಿಂದಗೌಡ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net