ಡಿಸಿಸಿ ಬ್ಯಾಂಕ್ ಅಕ್ರಮದ ಆರೋಪ, ಸತ್ಯ ಅರಿಯದೆ ಗಾಳಿಯಲ್ಲಿ ಗುಂಡು, ಸಚಿವ ಸುಧಾಕರ್ ಟೀಕೆಗೆ ಅಧ್ಯಕ್ಷ ಗೋವಿಂದಗೌಡ ತಿರುಗೇಟು

22CBP2
Published on

ಚಿಕ್ಕಬಳ್ಳಾಪುರ: ಜಿಲ್ಲಾ ಸಹಕಾರ ಬ್ಯಾಂಕಿನಲ್ಲಿ ಯಾವುದೇ ಭ್ರಷ್ಟಾಚಾರ ನಡೆದಿಲ್ಲ. ಆದರೆ, ಸಚಿವ ಡಾ.ಕೆ.ಸುಧಾಕರ್ ಕೆಲವರ ಮಾತುಗಳನ್ನು ನಂಬಿ ಸತ್ಯಾಸತ್ಯತೆ ಅರಿಯದೆ ಟೀಕಿಸುತ್ತಿದ್ದಾರೆ ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೋಲಾರ ಮತ್ತು ಚಿಕ್ಕಬಳ್ಳಾಪುರ ಅವಳಿ ಜಿಲ್ಲೆಯಲ್ಲಿ ಸಾಲ ಮಂಜೂರಾತಿಗೆ ಸಲ್ಲಿಕೆಯಾದ ಎಲ್ಲ ಅರ್ಜಿಗಳನ್ನು ತಾರತಮ್ಯ ತೋರದೆ ಇತ್ಯರ್ಥಪಡಿಸಲಾಗಿದೆ ಎಂದು ನಗರದ ಪತ್ರಕರ್ತರ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಸ್ಪಷ್ಟಪಡಿಸಿದರು.

ಹಿಂದೆ ಡಿಸಿಸಿ ಬ್ಯಾಂಕ್‌ನ ವಹಿವಾಟು ಕೇವಲ 45 ಕೋಟಿ ರೂ. ಇತ್ತು. ಆದರೆ, ನಮ್ಮ ಅಧಿಕಾರಾವಧಿಯಲ್ಲಿ 13 ಶಾಖೆಯ ವ್ಯಾಪ್ತಿಯಲ್ಲಿ ಬರೋಬ್ಬರಿ 1,200 ಕೋಟಿ ರೂ. ಸಾಲ ನೀಡಲಾಗಿದೆ. ಇದು ದುರ್ಬಲವಾಗಿದ್ದ ಬ್ಯಾಂಕ್ ಸುಸ್ಥಿತಿಯಲ್ಲಿರುವುದಕ್ಕೆ ನಿದರ್ಶನ. ಹೀಗಿರುವಾಗ ಶ್ರೀನಿವಾಸಪುರ ಮತ್ತು ಕೆಜಿಎಫ್‌ಗೆ ಮಾತ್ರ ತಲಾ 400 ರಿಂದ 500 ಕೋಟಿ ರೂ.ಕೊಟ್ಟಿದ್ದಾರೆ ಎಂಬ ಸಚಿವರ ಹೇಳಿಕೆ ಸರಿಯಲ್ಲ. ಸಾಲದ ಹಣದಲ್ಲಿ ಕೇವಲ ಎರಡು ಕ್ಷೇತ್ರಕ್ಕೆ ಇಷ್ಟು ಪ್ರಮಾಣವನ್ನು (900 ಕೋಟಿ ರೂ.) ಕೊಡಲು ಸಾಧ್ಯವೇ? ಎಂದು ಪ್ರಶ್ನಿಸಿದರು.

ಡಿಸಿಸಿ ಬ್ಯಾಂಕಿನಲ್ಲಿ ಯಾರ ಹಸ್ತಕ್ಷೇಪವಿಲ್ಲ. ಯಾರೂ ರಿಂಗ್ ಮಾಸ್ಟರ್ ಇಲ್ಲ. ಎಲ್ಲರೂ ಪಕ್ಷಾತೀತವಾಗಿ ಸಹಕಾರ ನೀಡಿದ್ದಾರೆ. ತಪ್ಪು ಸಂದೇಶದ ಮೂಲಕ ಗೊಂದಲ ಮೂಡಿಸುವ ಇಲ್ಲವೇ ಇನ್ನೊಬ್ಬರ ತೇಜೋವಧೆಯ ಕೆಲಸ ಮಾಡಬಾರದು ಎಂದು ಗೋವಿಂದಗೌಡ ಸಿಡಿಮಿಡಿಗೊಂಡರು.

ಬ್ಯಾಂಕಿನ ವಹಿವಾಟಿಗೆ ಸಂಬಂಧಿಸಿದಂತೆ ಯಾರೇ ಆಗಲಿ ದಾಖಲೆ ಸಮೇತ ದೂರು ಕೊಡಬೇಕೇ ಹೊರತು ಗಾಳಿಯಲ್ಲಿ ಗುಂಡು ಹೊಡೆಯುವುದಲ್ಲ, ಅನುಮಾನವಿದ್ದಲ್ಲಿ ವಹಿವಾಟಿನ ದಾಖಲೆಗಳನ್ನು ಪರಿಶೀಲಿಸಬಹುದೆಂದು ಬ್ಯಾಂಕ್ ನಿರ್ದೇಶಕ ಅನಿಲ್ ಕುಮಾರ್ ಸವಾಲೆಸೆದರು.

ಸಾಲ ವಿತರಣೆ ಪ್ರಮಾಣ: ಬೆಳೆ, ಸ್ವ-ಸಹಾಯ, ಮಧ್ಯಮ ಅವಧಿ ಮತ್ತು ಕೃಷಿಯೇತರ ಸಾಲ ಸೇರಿ ವಿತರಣೆಯ 12,111 ಕೋಟಿ ರೂ. ಪೈಕಿ ಕೋಲಾರಕ್ಕೆ 212.25 ಕೋಟಿ ರೂ., ಚಿಂತಾಮಣಿ 169.73, ಮುಳಬಾಗಿಲು 120.89, ಶಿಡ್ಲಘಟ್ಟ 111.11, ಬಂಗಾರಪೇಟೆ 105.13, ಕೆಜಿಎಫ್ 94.77, ಬಾಗೇಪಲ್ಲಿ 94.10, ಗೌರಿಬಿದನೂರು 87.59, ಮಾಲೂರು 75.76, ಶ್ರೀನಿವಾಸಪುರ 72.54, ಚಿಕ್ಕಬಳ್ಳಾಪುರ 42.89, ಗುಡಿಬಂಡೆ 19.50 ಕೋಟಿ ರೂ. ಮತ್ತು ಡೈರಿಗೆ ಶಾಖೆಗೆ 4.82 ಕೋಟಿ ರೂ. ನೀಡಲಾಗಿದೆ ಎಂದು ಡಿಸಿಸಿ ಬ್ಯಾಂಕ್ ದಾಖಲೆ ಬಿಡುಗಡೆ ಮಾಡಿದೆ.

ಸಿಡಿ ದೂರಿನ ತಡೆಯಾಜ್ಞೆ ಕೇಳುತ್ತಿಲ್ಲ: ಡಿಸಿಸಿ ಬ್ಯಾಂಕ್‌ನಲ್ಲಿ ನಡೆದಿದೆ ಎನ್ನಲಾಗುತ್ತಿರುವ ಭ್ರಷ್ಟಾಚಾರದ ದೂರಿನ ತನಿಖೆಯ ವಿರುದ್ಧ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿರುವುದನ್ನು ಸಚಿವರು ಪ್ರಶ್ನಿಸಿದ್ದಾರೆ. ಆದರೆ, ಇದೇ ಮಾದರಿಯಲ್ಲಿ ಅವರು ಸಿಡಿ ವಿಚಾರವಾಗಿ ತಡೆಯಾಜ್ಞೆ ತಂದಿದ್ದಾರೆ. ಇದನ್ನು ನಾವು ಕೇಳುತ್ತಿಲ್ಲವಲ್ಲ ಎಂದು ಗೋವಿಂದಗೌಡ ಪರೋಕ್ಷವಾಗಿ ಸುಧಾರಕ್‌ಗೆ ಟಾಂಗ್ ನೀಡಿದರು. ಹಲವು ಬಾರಿ ತನಿಖೆ ನಡೆದರೂ ಅವ್ಯವಹಾರದ ಹೆಸರಿನಲ್ಲಿ ಹಳೇ ಆರೋಪಗಳಿಗೆ ಸಂಬಂಧಿಸಿದಂತೆ ಅನೇಕರು ದೂರು ಸಲ್ಲಿಸಿದ್ದಾರೆ. ಇದರಿಂದ ಬ್ಯಾಂಕಿನ ತೇಜೋವಧೆಯಾಗುತ್ತಿದ್ದು, ಸುಗಮ ಮತ್ತು ಪಾರದರ್ಶಕ ಆಡಳಿತಕ್ಕೆ ತೊಂದರೆಯಾಗುತ್ತಿದೆ. ಈ ಕಾರಣಕ್ಕೆ ತಡೆಯಾಜ್ಞೆ ತರಲಾಗಿದೆಯೇ ಹೊರತು ಬೇರೆ ಉದ್ದೇಶವಿಲ್ಲ ಎಂದು ಸಮಜಾಯಿಷಿ ನೀಡಿದರು.

ಗೊಂದಲ ಮೂಡಿಸುವ ಉದ್ದೇಶ: ಕಳೆದ 15 ವರ್ಷಗಳಿಂದ ತನ್ನ ಒಡೆತನದ ಸಂಸ್ಥೆಯು ಬ್ಯಾಂಕಿನಲ್ಲಿ ನಿಯಮಾನುಸಾರ ವಹಿವಾಟು ನಡೆಸುತ್ತಿದೆ. ಆದರೆ, ಹಿಂದೆ ಸುಮ್ಮನಿದ್ದು ಇದೀಗ ಅಪಸ್ವರ ಎತ್ತುತ್ತಿರುವುದು ಸರಿಯಲ್ಲ ಎಂದು ಕೆಜಿಎಫ್ ಶಾಸಕಿ ರೂಪಕಲಾ ಅಸಮಾಧಾನ ವ್ಯಕ್ತಪಡಿಸಿದರು. ಸಾಲ ವಿತರಣೆಯಲ್ಲಿ ಡಿಸಿಸಿ ಬ್ಯಾಂಕ್ ಯಾವುದೇ ತಾರತಮ್ಯ ಮಾಡಿಲ್ಲ, ಲೋಪದೋಷಗಳೂ ಇಲ್ಲ, ಇವರ ಆರೋಪಗಳನ್ನು ಜನ ನಂಬದಿರುವುದರಿಂದ ದಿಕ್ಕು ತಪ್ಪಿಸಲು ಇಲ್ಲದ ವಿಚಾರಗಳನ್ನು ತೇಲಿ ಬಿಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net