

ವಿಜಯಪುರ: ಸಹಕಾರಿ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿರುವ ವಿಜಯಪುರ ಡಿಸಿಸಿ ಬ್ಯಾಂಕ್ 2022-23ನೇ ಸಾಲಿನಲ್ಲಿ ಒಟ್ಟು ನಿವ್ವಳ 14.30 ಕೋಟಿ ರೂ. ಲಾಭ ಗಳಿಸಿ, ಗ್ರಾಹಕರ ವಿಶ್ವಾಸಕ್ಕೆ ಪಾತ್ರವಾಗಿದೆ ಎಂದು ಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ಎಸ್.ಎ. ಡವಳಗಿ ಹೇಳಿದರು.
ನಗರದ ಬಸವೇಶ್ವರ ವೃತ್ತದ ಕೇಂದ್ರ ಕಚೇರಿ ಶಾಖೆಯ ಸಭಾ ಭವನದಲ್ಲಿ ಶನಿವಾರ ನಡೆದ ಗ್ರಾಹಕರ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲಾದ್ಯಂತ ಡಿಸಿಸಿ ಬ್ಯಾಂಕ್ 46 ಶಾಖೆಗಳನ್ನು ಹೊಂದಿದ್ದು, ಸಂಪೂರ್ಣ ಕೋರ್ ಬ್ಯಾಂಕಿಂಗ್ ವ್ಯವಸ್ಥೆಯಡಿ ಗ್ರಾಹಕರಿಗೆ ಸೌಲಭ್ಯ ನೀಡಲಾಗುತ್ತಿದೆ ಎಂದರು.
ಬ್ಯಾಂಕ್ 2022-23ನೇ ಸಾಲಿನಲ್ಲಿ 483.03 ಕೋಟಿ ರೂ. ಸ್ವಂತ ಬಂಡವಾಳ ಹೂಡಿಕೆ ಮಾಡಲಾಗಿದೆ. ಒಟ್ಟು 3192.90 ಕೋಟಿ ರೂ. ಠೇವಣಿ ಇದೆ. ರೂ. 901.09 ಕೋಟಿಯಷ್ಟು ದುಡಿಯುವ ಬಂಡವಾಳ ಇದೆ. ಈಗಾಗಲೇ 2889.09 ಕೋಟಿ ರೂ. ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಬ್ಯಾಂಕ್ ತರಬೇತಿ ಸಂಯೋಜಕ ಆರ್.ಎಂ. ಬಣಗಾರ ಬ್ಯಾಂಕಿನ ವಿವಿಧ ಯೋಜನೆಗಳ ಕುರಿತು ಗ್ರಾಹಕರಿಗೆ ಮಾಹಿತಿ ನೀಡಿದ ಅವರು, ಬ್ಯಾಂಕಿನ ಜೊತೆಗೆ ಗ್ರಾಹಕರ ಅಭಿವೃದ್ಧಿ ಮುಖ್ಯ ಈ ದಿಸೆಯಲ್ಲಿ ಬ್ಯಾಂಕ್ 46 ಶಾಖೆಗಳನ್ನು ಹೊಂದಿದೆ. ಗ್ರಾಹಕರ ವಿಚಾರಗಳು ಸಮಸ್ಯೆ ಸ್ಥಾನಿಕವಾಗಿ ಪರಿಹಾರ ಕ್ರೂಢೀಕರಣ ವ್ಯವಸ್ಥೆ ಕುರಿತು ಗ್ರಾಹಕರಿಗೆ ಸ್ಪಂದಿಸುವ ಸಲುವಾಗಿ ಗ್ರಾಹಕ ಸಭೆ ಹಮ್ಮಿಕೊಂಡಿರುವುದಾಗಿ ತಿಳಿಸಿದ ಅವರು, ಗ್ರಾಹಕರು ಬ್ಯಾಂಕಿನಿಂದ ನೀಡುವ ಸಾಲ ಸೌಲಭ್ಯ ಪಡೆದು ಮರು ಪಾವತಿಸಿ ಬ್ಯಾಂಕಿನ ಪ್ರಗತಿಗೆ ಸಹಕರಿಸಬೇಕು ಎಂದರು.
ಬ್ಯಾಂಕ್ ಉಪ ಪ್ರಧಾನ ವ್ಯವಸ್ಥಾಪಕ ಎಸ್.ಡಿ. ಪಾಟೀಲ, ಆರ್.ಎಂ. ಪಾಟೀಲ, ತಾಲೂಕು ನೋಡಲ್ ಅಧಿಕಾರಿ ಬಿ.ಎಸ್. ಪಾಟೀಲ , ಎಸ್.ಎನ್. ಪಾಟೀಲ ಮತ್ತು ಕೇಂದ್ರ ಕಚೇರಿ ಶಾಖೆ ಹಿರಿಯ ವ್ಯವಸ್ಥಾಪಕ ಪಿ.ಎಂ. ಮುಳಗೆ ಹಾಗೂ ಸಿಬ್ಬಂದಿ ವರ್ಗದವರು ಸಭೆಯಲ್ಲಿ ಉಪಸ್ಥಿತರಿದ್ದರು.
ವಿ.ಎಂ. ಯಡವಣ್ಣವರ, ಎ.ಆರ್. ಸುನ್ನೆವಾಲೆ, ಬಿ.ಎಸ್. ಹೇರಲಗಿ, ಪಿಕೆಪಿಎಸ್ ದರ್ಗಾ ಹಿಟ್ಟಿನಹಳ್ಳಿ ಅರಕೇರಿ ಸಂಘಗಳ ಸಿಇಒಗಳು ಮತ್ತು ಬಿ.ಡಿ. ಮಹಿಳಾ ಬ್ಯಾಂಕಿನ ಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಯ ಪ್ರತಿನಿಧಿಗಳು ಹಾಗೂ ಬ್ಯಾಂಕ್ ಇನ್ನಿತರ ಗ್ರಾಹಕರು ಹೆಚ್ಚಿನ ಸಂಖ್ಯೆಯಲ್ಲಿ ಸಭೆಯಲ್ಲಿ ಭಾಗವಹಿಸಿದ್ದರು.