ಕೋಲಾರ: ಸಹಕಾರಿ ಕ್ಷೇತ್ರದಿಂದ ರೈತರು, ಮಹಿಳೆಯರು, ಬಡವರು ಬದುಕು ರೂಪಿಸಿಕೊಳ್ಳಲು ಸಾಧ್ಯ ಎಂಬುದನ್ನು ಕೋಲಾರ-ಚಿಕ್ಕಬಳ್ಳಾಪುರ ಡಿಸಿಸಿ ಬ್ಯಾಂಕ್ ಇಡೀ ದೇಶಕ್ಕೆ ಸಾಧಿಸಿ ತೋರಿಸಿದೆ, ಜನ ಸ್ನೇಹಿಯಾಗಿ ಬೆಳೆಯುತ್ತಿರುವ ಸಂಸ್ಥೆಗೆ ರೈತರು, ಮಹಿಳೆಯರು ಆಧಾರ ಸ್ತಂಭವಾಗಬೇಕು ಎಂದು ಮಾಜಿ ಶಾಸಕ ಕೆ.ಆರ್.ಶ್ರೀನಿವಾಸಯ್ಯ ಕರೆ ನೀಡಿದರು.
ಕೋಲಾರ ಕಸಬಾ ದಕ್ಷಿಣ ರೇಷ್ಮೆ ಬೆಳೆಗಾರರ ಹಾಗೂ ರೈತರ ಸೇವಾ ಸಹಕಾರ ಸಂಘದಿಂದ ಆಗ್ರೋ ಬೇಸ್ ಅಗ್ರಿ ಕಾಂಪ್ಲೆಕ್ಸ್ ಮತ್ತು ಸಂಘದ ಕಟ್ಟಡ ನಿರ್ಮಾಣಕ್ಕೆ ಸೋಮವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ನಿಷ್ಠೆ, ಪ್ರಾಮಾಣಿತೆ, ಶ್ರಮದಿಂದ ಒಂದು ಸಂಸ್ಥೆಯನ್ನು ಅಭಿವೃದ್ಧಿಪಡಿಸಿ ಘನತೆ ಸಾಧಿಸಬಹುದು ಎಂಬುದನ್ನು ಡಿಸಿಸಿ ಬ್ಯಾಂಕ್ ಸಾಧಿಸಿ ತೋರಿಸಿದೆ ಎಂದರು.
ಕೋಲಾರ ಡಿಸಿಸಿ ಬ್ಯಾಂಕ್ ಇತಿಹಾಸದ ಪುಟ ಸೇರಿತು ಎಂದು ಭಾವಿಸಿದ್ದೆ. ಆದರೆ ಇಷ್ಟೊಂದು ವೇಗವಾಗಿ ತನ್ನ ಮೇಲಿನ ಅಪವಾದ ದೂರ ಮಾಡಿಕೊಂಡು ಮತ್ತೆ ರೈತರು, ತಾಯಂದಿರ ನೆರವಿಗೆ ನಿಲ್ಲುವಷ್ಟು ಶಕ್ತಿ ತುಂಬಿರುವ ಅಧ್ಯಕ್ಷ ಗೋವಿಂದಗೌಡ ಮತ್ತು ಆಡಳಿತ ಮಂಡಳಿ ಅಂಭಿನಂದನೆಗೆ ಅರ್ಹ ಎಂದರು.
ಶಾಸಕ ಕೆ.ಶ್ರೀನಿವಾಸಗೌಡ ಮಾತನಾಡಿ, ಆರ್ಥಿಕವಾಗಿ ದಿವಾಳಿಯಾಗಿದ್ದ ಡಿಸಿಸಿ ಬ್ಯಾಂಕ್ ಮತ್ತು ಕಸಬಾ ಸೊಸೈಟಿ ಎರಡೂ ಉತ್ತಮ ಸ್ಥಿತಿಗೆ ತಲುಪಿವೆ. ಕಸಬಾ ಸೊಸೈಟಿಯನ್ನು ಆರ್ಥಿಕವಾಗಿ ಮತ್ತಷ್ಟು ಬಲಿಷ್ಠಗೊಳಿಸುವ ಮೂಲಕ ಇಡೀ ರಾಜ್ಯಕ್ಕೆ ಮಾದರಿಯಾಗುವಂತೆ ಬೆಳೆಸೋಣ ಎಂದರು.
ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬ್ಯಾಲಹಳ್ಳಿ ಗೋವಿಂದಗೌಡ ಮಾತನಾಡಿ, ಬಡವರ ಅನುಕೂಲಕ್ಕಾಗಿ ಸಹಕಾರ ವ್ಯವಸ್ಥೆಯಿದೆ. ನಮ್ಮ ಬದುಕಿಗಿಂತ ಸಮಾಜದ ಕಟ್ಟ ಕಡೆಯ ವ್ಯಕ್ತಿಗೆ ಸಹಕಾರದ ಸೌಲಭ್ಯ ತಲುಪಬೇಕೆಂಬುದು ಸಹಕಾರದ ಧ್ಯೇಯ. ನಿಷ್ಕ್ರಿಯವಾಗಿದ್ದ ಸೊಸೈಟಿಗೆ ಶಾಸಕ ಶ್ರೀನಿವಾಸಗೌಡ 2.5 ಕೋಟಿ ರೂ. ಸಾಲ ಸೌಲಭ್ಯ ಕಲ್ಪಿಸಿದ್ದರಿಂದ ಇಂದು 30 ಕೋಟಿ ರೂ. ವಹಿವಾಟು ನಡೆಸುವ ಶಕ್ತಿಹೊಂದಿದೆ ಎಂದರು.
ಸೊಸೈಟಿ ಅಧ್ಯಕ್ಷ ಚೋಳಘಟ್ಟ ಎನ್.ಶ್ರೀನಿವಾಸ್ ಮಾತನಾಡಿ, ಸೊಸೈಟಿಯಿಂದ 1.50 ಕೋಟಿ ವೆಚ್ಚದಲ್ಲಿ ಮಳಿಗೆ ನಿರ್ಮಿಸಲಾಗುವುದು. ಮೊದಲನೇ ಅಂತಸ್ತು ಕಟ್ಟಡ ನಿರ್ಮಾಣಕ್ಕೆ ಮತ್ತೆ 1 ಕೋಟಿ ರೂ. ಮಂಜೂರು ಮಾಡಬೇಕು ಎಂದು ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದರು.
ಕಸಬಾ ಸೊಸೈಟಿ ಮಾಜಿ ಅಧ್ಯಕ್ಷ ಛತ್ರಕೋಡಿಹಳ್ಳಿ ಮುನೇಗೌಡ , ಡಿಸಿಸಿ ಬ್ಯಾಂಕ್ ನಿರ್ದೇಶಕರಾದ ನಾಗನಾಳ ಸೋಮಣ್ಣ, ಎಂ.ಎಲ್.ಅನಿಲ್ ಕುಮಾರ್, ಕೆ.ವಿ.ದಯಾನಂದ್, ಮಾಜಿ ನಗರಸಭೆ ಅಧ್ಯಕ್ಷ ವಿ.ಪ್ರಕಾಶ್, ಗುತ್ತಿಗೆದಾರ ಗಿರೀಶ್, ಈಕಂಬಳ್ಳಿ ನಾರಾಯಣಸ್ವಾಮಿ, ಸೊಸೈಟಿ ಉಪಾಧ್ಯಕ್ಷ ಶ್ರೀನಿವಾಸಪ್ಪ, ನಿರ್ದೇಶಕ ಎಂ.ಶ್ರೀರಾಮರೆಡ್ಡಿ, ಎ. ನಾರಾಯಣಸ್ವಾಮಿ ಇತರರಿದ್ದರು.
ಸೊಸೈಟಿ ಕಟ್ಟಡ ನಿರ್ಮಾಣಕ್ಕೆ ಬಡ್ಡಿ ರಹಿತವಾಗಿ 10 ವರ್ಷಗಳ ಅವಧಿಗೆ 1.50 ಕೋಟಿ ರೂ. ಮಂಜೂರು ಮಾಡಲಾಗಿದೆ. ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ವಿವಿಧೋದ್ದೇಶ ಸೇವಾ ಕೇಂದ್ರ ಯೋಜನೆಯಡಿ ಹಂತ-ಹಂತವಾಗಿ ಅನುದಾನ ನೀಡಿ ಕಾರ್ಯಗತಗೊಳಿಸಲಾಗುತ್ತಿದೆ. ಬ್ಯಾಲಹಳ್ಳಿ ಗೋವಿಂದಗೌಡ, ಡಿಸಿಸಿ ಬ್ಯಾಂಕ್ ಅಧ್ಯಕ್ಷ