

ಮಂಜುನಾಥ ಕೋಳಿಗುಡ್ಡ ಬೆಳಗಾವಿ
ತೀವ್ರ ಕುತೂಹಲ ಕೆರಳಿಸಿರುವ ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಬಿಡಿಸಿಸಿ) ಆಡಳಿತ ಮಂಡಳಿ ನಿರ್ದೇಶಕರ ಅವಿರೋಧ ಆಯ್ಕೆಗೆ ಅಂತಿಮ ಕಸರತ್ತು ನಡೆದಿದೆ.
ಎಲ್ಲ 16 ನಿರ್ದೇಶಕ ಸ್ಥಾನಗಳಿಗೆ ಒಮ್ಮತದ ಅಭ್ಯರ್ಥಿ ಆಯ್ಕೆಯ ಪ್ರಯತ್ನಗಳ ನಡುವೆ ಕೆಲ ಪ್ರಬಲ ಆಕಾಂಕ್ಷಿಗಳು ಸ್ಪರ್ಧೆಯ ಪೈಪೋಟಿಗಿಳಿದಿರುವುದು ಚರ್ಚೆಗೆ ಕಾರಣವಾಗುತ್ತಿದೆ.
ಖಾನಾಪುರ, ಬೈಲಹೊಂಗಲ, ಸವದತ್ತಿ, ಯರಗಟ್ಟಿ, ರಾಮದುರ್ಗ, ಚನ್ನಮ್ಮನ ಕಿತ್ತೂರು, ರಾಯಬಾಗ, ನಿಪ್ಪಾಣಿ, ಅಥಣಿ ಸೇರಿ ವಿವಿಧ ತಾಲೂಕುಗಳಲ್ಲಿ ಬಿಡಿಸಿಸಿ ನಿರ್ದೇಶಕರ ಚುನಾವಣೆ ಕುರಿತು ಶಾಸಕ ಬಾಲಚಂದ್ರ ಜಾರಕಿಹೊಳಿ ನೇತೃತ್ವದಲ್ಲಿಯೇ ತಾಲೂಕು ಮಟ್ಟದ ಪಿಕೆಪಿಎಸ್‌ಗಳ ಸಭೆ ನಡೆಸಿ ಅಭ್ಯರ್ಥಿ ಪರ ಅಭಿಪ್ರಾಯ ಸಂಗ್ರಹಿಸಲಾಗುತ್ತಿದೆ. ಗೋಕಾಕ, ಮೂಡಲಗಿ, ಹುಕ್ಕೇರಿ, ಚಿಕ್ಕೋಡಿ, ಕಾಗವಾಡ ಭಾಗದಲ್ಲಿ ಪಕ್ಷರಾಜಕಾರಣ ಪ್ರವೇಶಿಸಿರುವ ಪರಿಣಾಮ ಅಭ್ಯರ್ಥಿಗಳ ಆಯ್ಕೆಯ ಕಗ್ಗಂಟು ಕಂಡು ಬರುತ್ತಿದೆ.
ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಕೆಎಲ್‌ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ, ಶಾಸಕ ಲಕ್ಷ್ಮಣ ಸವದಿ ಸೇರಿ ಹಾಲಿ, ಮಾಜಿ ಶಾಸಕರು ಎಲ್ಲರ ಹಿತದೃಷ್ಟಿಯಿಂದ ಅವಿರೋಧ ಆಯ್ಕೆಗೆ ನಿರಂತರ ಸಭೆ ನಡೆಸುತ್ತಿದ್ದಾರೆ.
ಸಹಕಾರ ಇಲಾಖೆ ಅಧಿಕಾರಿಗಳ ಮಾಹಿತಿ ಪ್ರಕಾರ, ಬಿಡಿಸಿಸಿ ಬ್ಯಾಂಕಿನ 16 ನಿರ್ದೇಶಕ ಸ್ಥಾನಗಳಿಗೆ 2025ರ ಅಕ್ಟೋಬರ್ 19ರಂದು ಚುನಾವಣೆ ನಡೆಯುವ ಸಾಧ್ಯತೆಯಿದ್ದು, ಅಧಿಕೃತ ಆದೇಶ ಹೊರಬರಬೇಕಿದೆ. ಮತದಾರರ ಸಂಖ್ಯೆ, ಸಂಘ- ಸಂಸ್ಥೆಗಳ ಪ್ರತಿನಿಧಿ ಚುನಾವಣೆಯಲ್ಲಿ ಅವಕಾಶ ಕಲ್ಪಿಸದಿರುವ ಬಗ್ಗೆ ಆಕ್ಷೇಪಣೆಗಳು ಬಂದಿವೆ ಎಂದು ಮಾಹಿತಿ ನೀಡಿದ್ದಾರೆ.
12 ಸ್ಥಾನಕ್ಕೆ ಒಮ್ಮತದ ಅಭ್ಯರ್ಥಿಗಳು: 10ರಿಂದ 12 ನಿರ್ದೇಶಕರ ಅವಿರೋಧ ಆಯ್ಕೆ ಬಹುತೇಕ ಅಂತಿಮಗೊಂಡಿದ್ದು, 4ರಿಂದ 5 ಸ್ಥಾನಗಳಿಗೆ ಮಾತ್ರ ಚುನಾವಣೆ ನಡೆಯಲಿದೆ. ಇದೀಗ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಸ್ಪರ್ಧೆಯಿಂದ ಹಿಂದೆ ಸರಿದಿರುವುದು ಅವಿರೋಧ ಆಯ್ಕೆಯ ದಾರಿ ಸುಗಮವಾಗಿದೆ ಎಂದು ಬ್ಯಾಂಕ್ ನಿರ್ದೇಶಕರು ತಿಳಿಸಿದ್ದಾರೆ.
ಜಿಲ್ಲೆಯ ರಾಜಕಾರಣ ದೃಷ್ಟಿಯಿಂದ ಎಂಎಲ್‌ಸಿ ಚನ್ನರಾಜ ಹಟ್ಟಿಹೊಳಿ ಬಿಡಿಸಿಸಿ ನಿರ್ದೇಶಕ ಚುನಾವಣೆ ಸ್ಪರ್ಧೆಯಿಂದ ಹಿಂದೆ ಸರಿದಿದ್ದಾರೆ. ಖಾನಾಪುರ ತಾಲೂಕಿನಿಂದ ಸ್ಪರ್ಧಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಂಡಿದ್ದರು. ಅವರೊಂದಿಗೆ ಚರ್ಚಿಸಿದ ಬಳಿಕ ಸ್ಪರ್ಧಿಸದಿರಲು ಸಮ್ಮತಿಸಿದ್ದಾರೆ. ಈ ವಿಷಯ ಕುರಿತು ಮುಂದಿನ ದಿನಗಳಲ್ಲಿ ಮಾಹಿತಿ ಹಂಚಿಕೊಳ್ಳಲಾಗುವುದು. | ಸತೀಶ ಜಾರಕಿಹೊಳಿ ಜಿಲ್ಲಾ ಉಸ್ತುವಾರಿ ಜಿಲ್ಲೆಯ ರಾಜಕೀಯ ಪರಿಸ್ಥಿತಿ, ಬಿಡಿಸಿಸಿ ಬ್ಯಾಂಕ್ ಆಡಳಿತ ನಡೆಸುವ ಕುರಿತು ಹೊಂದಾಣಿಕೆ ಮಾಡಿಕೊಂಡು ಹೋಗುವ ಕುರಿತು ಸಚಿವ ಸತೀಶ ಜಾರಕಿಹೊಳಿ ಅವರೊಂದಿಗೆ ಸುದೀರ್ಘ ಚರ್ಚೆ ನಡೆಸಿದ ಬಳಿಕ ಬಿಡಿಸಿಸಿ ನಿರ್ದೇಶಕ ಚುನಾವಣೆ ಕಣದಿಂದ ಹಿಂದೆ ಸರಿದಿದ್ದು, ಅವರ ನಿರ್ಧಾರಕ್ಕೆ ಬದ್ಧವಾಗಿದ್ದೇನೆ. | ಚನ್ನರಾಜ ಹಟ್ಟಿಹೊಳಿ ವಿಧಾನ ಪರಿಷತ್ ಸದಸ್ಯ