ಡಿಸಿಯಿಂದ ನ್ಯಾಯದ ಭರವಸೆ:ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ಹೋರಾಟಗಾರರು

ಡಿಸಿಯಿಂದ ನ್ಯಾಯದ ಭರವಸೆ:ತಾತ್ಕಾಲಿಕವಾಗಿ ಪ್ರತಿಭಟನೆ ಹಿಂಪಡೆದ ಹೋರಾಟಗಾರರು
Published on

ಹಾಸನ: ಹೇಮಾವತಿ ಜಲಾಶಯ ಸಂತ್ರಸ್ತರು ಕಳೆದು 75 ವರ್ಷಗಳಿಂದ ಹೋರಾಟ ಮಾಡುತ್ತಿದ್ದರೂ ನ್ಯಾಯ ಸಿಕ್ಕಿಲ್ಲ. ಜಿಲ್ಲಾಧಿಕಾರಿಗಳು ನಮಗೆ ಸೂಕ್ತ ನ್ಯಾಯ ದೊರಕಿಸಿಕೊಡುವ ಭರವಸೆ ನೀಡಿದ್ದಾರೆ. ಹೀಗಾಗಿ ನಮ್ಮ ಹೋರಾಟವನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿದೆ ಎಂದು ಹೇಮಾವತಿ ಜಲಾಶಯ ಸಂತ್ರಸ್ತರ ಹೋರಾಟ ಸಮಿತಿ ಅಧ್ಯಕ್ಷ ಎಸ್. ಕೃಷ್ಣ ತಿಳಿಸಿದರು.

ಸೆ.26ರಂದು ಜಿಲ್ಲಾಧಿಕಾರಿ ಕಚೇರಿಯಲ್ಲಿ ಹೇಮಾವತಿ ತಂತ್ರಸ್ತರ ಸಭೆ ನಡೆಸಲಾಯಿತು. ಈ ವೇಳೆ ಸಂತ್ರಸ್ತರಿಗೆ ಆಗಿರುವ ಅನ್ಯಾಯವನ್ನು ಅರಿತ ಜಿಲ್ಲಾಧಿಕಾರಿಗಳು ತಕ್ಷಣವೇ ಎಡಿಎಲ್‌ಆರ್ ನೇತೃತ್ವದಲ್ಲಿ ಒಂದು ಸಮಿತಿ ರಚನೆ ಮಾಡುವುದಾಗಿ ಭರವಸೆ ನೀಡಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.

51 ವರ್ಷಗಳಿಂದ ನಮಗೆ ಯಾವ ಅಧಿಕಾರಿಗಳಾಗಲಿ, ಜನಪ್ರತಿನಿಧಿಗಳಾಗಲಿ ನಮ್ಮ ಸಮಸ್ಯೆಯನ್ನು ಆಲಿಸಿಲ್ಲ. ಆದರೆ ಜಿಲ್ಲಾಧಿಕಾರಿ ಸತ್ಯಭಾಮಾ ಅವರು ನಮ್ಮೆಲ್ಲಾ ಮಾಹಿತಿಗಳನ್ನು ಕೂಲಂಕಶವಾಗಿ ಕೇಳಿ, ಅಂಕಿ- ಅಂಶಗಳ ಸಮೇತ ಭೂ ಸ್ವಾಧೀನ ಅಧಿಕಾರಿ ಮಂಜುನಾಥ್ ಅವರಿಂದ ಮಾಹಿತಿ ಬರೆದುಕೊಂಡು ತಕ್ಷಣವೇ ಇದರ ಬಗ್ಗೆ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದ್ದಾರೆ. ಅಲ್ಲದೇ ಶೀಘ್ರದಲ್ಲಿ ನಮ್ಮ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಸಂತ್ರಸ್ತರಿಗೆ ಪೋಡಿ, ಖಾತೆ ಪಹಣಿ ಹಾಗೂ ಮನೆ ಕಟ್ಟಿರುವವರ ಜಾಗಕ್ಕೆ ಹಕ್ಕು ಪತ್ರ ಕೊಡಿಸುವ ಕೆಲಸವನ್ನು ಕಾಲಮಿತಿಯಲ್ಲಿ ಮುಗಿಸಿ ಕೊಡಲಾಗುವುದು ಎಂದು ಹೇಳಿದ್ದಾರೆ. ಇದರಿಂದ ನಮ್ಮ ಹೋರಾಟಕ್ಕೆ ಸದ್ಯದ ಮಟ್ಟಿಗೆ ಫಲ ಸಿಕ್ಕಿದೆ. ಆದ್ದರಿಂದ ನಾವು ನಡೆಸುತ್ತಿದ್ದ ಹೋರಾಟವನ್ನು ತಾತ್ಕಾಲಿಕವಾಗಿ ನಿಲ್ಲಿಸಲಾಗಿದೆ ಎಂದು ಹೇಳಿದರು.

ಹೇಮಾವತಿ ಸಂತ್ರಸ್ತರ ಸಮಸ್ಯೆಗೆ ಈಗಾಗಲೇ 8000 ಅರ್ಜಿಗಳು ಬಂದಿದ್ದು, ಅದರಲ್ಲಿ ಕೇವಲ ಶೇ. 10 ಅರ್ಜಿಗಳಿಗೆ ಹಕ್ಕುಪತ್ರ ನೀಡಲಾಗಿದೆ. ಉಳಿದ 6000ಕ್ಕೂ ಹೆಚ್ಚು ಅರ್ಜಿಗಳು ಹಾಗೆ ಉಳಿದುಕೊಂಡಿವೆ. ಇದರ ಬಗ್ಗೆಯೂ ಕೂಡ ಗಮನ ಹರಿಸಬೇಕು ಎಂದು ಅವರಿಗೆ ಮನವಿ ಮಾಡಿದ್ದೇವೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net