ಡಿಸಿ ಹೆಗಲೇರಿದ ಫಲಾನುಭವಿ ಹಾಜರಾತಿ ಹೊಣೆ

CTD DC OFFICE -----
Published on

ಡಿಪಿಎನ್ ಶ್ರೇಷ್ಠಿ, ಚಿತ್ರದುರ್ಗ

ರಾಜ್ಯ ಸರ್ಕಾರ 2 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಮೇ 20 ರಂದು ಹೊಸಪೇಟೆಯಲ್ಲಿ ಹಮ್ಮಿಕೊಳ್ಳಲಿರುವ ಸಾಧನಾ ಸಮಾವೇಶಕ್ಕೆ ಅಂದಾಜು 2 ಲಕ್ಷ ಫಲಾನುಭವಿಗಳು ಸೇರುವ ನಿರೀಕ್ಷೆ ಇದೆ. ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಸಂಪುಟ ಸದಸ್ಯರು ಭಾಗವಹಿಸಲಿದ್ದಾರೆ.

ರಾಜ್ಯದಲ್ಲಿ ಹಲವು ವರ್ಷಗಳಿಂದ ನೆನೆಗುದಿಯಲ್ಲಿದ್ದ ಹಟ್ಟಿ, ತಾಂಡಾ, ಕ್ಯಾಂಪ್ ಮತ್ತಿತರ ದಾಖಲೆ ರಹಿತ ಜನವಸತಿ ಪ್ರದೇಶಗಳನ್ನು ಕಂದಾಯ ಗ್ರಾಮಗಳನ್ನಾಗಿ ರಚಿಸಿ ನಿವಾಸಿಗಳಿಗೆ ಹಕ್ಕು ಪತ್ರ, ಇತರ ಸವಲತ್ತುಗಳನ್ನು ವಿತರಿಸಲು ಉದ್ದೇಶಿಸಲಾಗಿದೆ. ಕಾರ್ಯಕ್ರಮಕ್ಕೆ ನಿರ್ದಿಷ್ಟ ಸಂಖ್ಯೆಯಲ್ಲಿ ಫಲಾನುವಿಗಳನ್ನು ಕರೆದುಕೊಂಡು ಹೋಗಿ, ಮರಳಿ ಕರೆ ತರುವ ಹೊಣೆ ಎಲ್ಲ ಜಿಲ್ಲಾಧಿಕಾರಿಗಳ ಹೆಗಲೇರಿದೆ.

ಪ್ರತಿ ಜಿಲ್ಲೆಯಿಂದ ಕನಿಷ್ಠ 50 ರಿಂದ ಗರಿಷ್ಠ 20 ಸಾವಿರದವರೆಗೆ ಫಲಾನುಭವಿಗಳನ್ನು ಆಯಾ ಜಿಲ್ಲಾಡಳಿತಗಳು ಸಮಾವೇಶಕ್ಕೆ ಕರೆದೊ ಯ್ಯಬೇಕಾಗಿದೆ. ಇದಕ್ಕಾಗಿ ನೋಡೆಲ್ ಅಧಿಕಾರಿಗಳನ್ನೂ ನೇಮಿಸಲಾಗಿದೆ. ಕಂದಾಯ ಸಚಿವ ಕೃಷ್ಣಬೈರೇಗೌಡ ಅವರು ವಿವಿಧ ಜಿಲ್ಲೆಗಳಲ್ಲಿ ಪ್ರವಾಸ ಮಾಡಿ ಇಲಾಖೆಯ ಪ್ರಗತಿ ಪರಿಶೀಲಿಸಿದ್ದಾರೆ.

ಚಿತ್ರದುರ್ಗ, ದಾವಣಗೆರೆ, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ಕೊಪ್ಪಳ, ವಿಜಯನಗರ ಸಹಿತ ನಾನಾ ಜಿಲ್ಲೆಗಳಿಂದ 10 ರಿಂದ 20 ಸಾವಿರಕ್ಕೂ ಅಧಿಕ ಫಲಾನುಭವಿಗಳು ಹೊಸಪೇಟೆಗೆ ತೆರಳಬೇಕಿದೆ. ತುಮಕೂರು, ಹಾವೇರಿ, ದಾವಣಗೆರೆ, ಗದಗ, ರಾಯಚೂರು, ಧಾರವಾಡ ಇತ್ಯಾದಿ ಜಿಲ್ಲೆಗಳಿಂದ 2 ಸಾವಿರದಿಂದ ಏಳೆಂಟು ಸಾವಿರ ಸೇರಿ ಎಲ್ಲ ಜಿಲ್ಲೆಗಳಿಂದ ಅಂದು ಹೊಸಪೇಟೆಯಲ್ಲಿ 2ಲಕ್ಷಕ್ಕೂ ಅ ಧಿಕ ಫಲಾನುಭವಿಗಳು ಹಾಗೂ ಇವರೊಂದಿಗೆ ಕಾಂಗ್ರೆಸ್ ಕಾರ್ಯಕರ್ತರು ಕೂಡ ಅಧಿಕ ಸಂಖ್ಯೆಯಲ್ಲಿ ಸಮಾವೇಶದಲ್ಲಿ ಭಾಗಿಯಾಗುವ ನಿರೀಕ್ಷೆ ಇದೆ.

ಸಮಾವೇಶಕ್ಕೆ ವಿವಿಧ ಜಿಲ್ಲೆಗಳಿಂದ ಫಲಾನುಭವಿ ಹಾಗೂ ಅವರ ಕುಟುಂಬದ ಒಬ್ಬ ಸದಸ್ಯರನ್ನು ಕರೆದೊಯ್ಯಲು ಕೆಎಸ್‌ಆರ್‌ಟಿಸಿ ಹಾಗೂ ಖಾಸಗಿ ಸೇರಿ ಅಂದಾಜು 6 ಸಾವಿರ ಬಸ್‌ಗಳನ್ನು ನಿಗದಿಪಡಿಸಲಾಗಿದೆ. ಇವುಗಳಲ್ಲಿ ಕೆಎಸ್‌ಆರ್‌ಟಿಸಿಯ ಅಂದಾಜು 5 ಸಾವಿರ ಬಸ್‌ಗಳು ಹೊಸಪೇಟೆಗೆ ತೆರಳುವ ಸಾಧ್ಯತೆ ಇದೆ. ಬಸ್‌ಗಳೊಂದಿಗೆ ಟಿಟಿ, ಕಾರು ಮತ್ತಿತರ ವಾಹನಗಳಲ್ಲೂ ಜನರು ಪ್ರಯಾಣಿಸಲಿದ್ದಾ ರೆ.

ಸಿದ್ದರಾಮಯ್ಯರ ಹಿಂದಿನ ಸರ್ಕಾರದ ಅವಧಿ(2017-18)ಯಲ್ಲಿ ಕಂದಾಯ ಗ್ರಾಮಗಳ ಕಾಯ್ದೆ ರಚನೆಯಾಗಿತ್ತು. ಕಳೆದ ಆರು ವರ್ಷಗಳಲ್ಲಿ ಅಂದಾಜು 1.10 ಲಕ್ಷ ಹಕ್ಕು ಪತ್ರಗಳು ಸಿದ್ಧವಾಗಿದ್ದರೆ, ಕಳೆದ ಎರಡು ವರ್ಷಗಳ ಅವಧಿಯಲ್ಲಿ 1ಲಕ್ಷದಷ್ಟು ಹಕ್ಕು ಪತ್ರಗಳು ಫಲಾನುಭವಿಗಳಿಗೆ ವಿತರಿಸಲು ಸಿದ್ಧವಾಗಿವೆ. ಕೇಂದ್ರದ ಗಣತಿ ಘೋಷಣೆ ಹಿನ್ನೆಲೆಯಲ್ಲಿ ಜೂನ್ 30 ರೊಳಗೆ ಕಂದಾಯ ಗ್ರಾಮಗಳ ರಚನೆ ಪೂರ್ಣಗೊಳಿಸುವಂತೆ ಸಚಿವರು ಕಂದಾಯ ಇಲಾಖೆ ಅಧಿಕಾರಿಗಳಿಗೆ ಗಡುವು ನೀಡಿದ್ದಾರೆ.

....ಕೋಟ್...

ನಮ್ಮ ಜಿಲ್ಲೆಯಿಂದ ಹೊಸಪೇಟೆಗೆ ಅಂದಾಜು 15 ಸಾವಿರ ಜನರನ್ನು ಕರೆದುಕೊಂಡು ಹೋಗಲಾಗುತ್ತದೆ. ಜಿಲ್ಲೆಯಲ್ಲಿ ಕಂದಾಯ ಗ್ರಾಮಗಳ ರಚನೆಗೆ 316 ವಸತಿ ಪ್ರದೇಶಗಳನ್ನು ಗುರುತಿಸಲಾಗಿತ್ತು. 96 ಪ್ರಾಥಮಿಕ ಹಾಗೂ 206 ಅಂತಿಮ ಅಧಿಸೂಚನೆ ಆಗಿವೆ. 61 ವಸತಿ ಪ್ರದೇಶಗಳು ಕಂದಾಯ ಗ್ರಾಮಗಳೆಂದು ಅಧಿಸೂಚಿಸಲು ಬಾಕಿ ಇದೆ.

ಟಿ. ವೆಂಕಟೇಶ್, ಜಿಲ್ಲಾಧಿಕಾರಿ, ಚಿತ್ರದುರ್ಗ.

------

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net