

ಸಾಗರ: ತಾಲೂಕಿನ ತಾಳಗುಪ್ಪ ಕೂಡ್ಲಿ ಮಠದ ಆಡಳಿತ ಮಂಡಳಿಯು ಮಡಿವಾಳ ಹಾಗೂ ಒಕ್ಕಲಿಗ ಕುಟುಂಬವನ್ನು ಒಕ್ಕಲೆಬ್ಬಿಸಲು ದೌರ್ಜನ್ಯ ನಡೆಸುತ್ತಿದೆ ಎಂದು ಆರೋಪಿಸಿ ರೈತ ಸಂಘ(ಡಾ. ಗಣಪತಿಯಪ್ಪ ಬಣ)ದಿಂದ ತಹಸೀಲ್ದಾರ್ ಕಚೇರಿ ಎದುರು ಸೋಮವಾರ ಅಹೋರಾತ್ರಿ ಧರಣಿ ಆರಂಭಿಸಿದ್ದಾರೆ.
ಪ್ರತಿಭಟನಾ ಸ್ಥಳಕ್ಕೆ ಮಂಗಳವಾರ ಭೇಟಿ ನೀಡಿದ ಉಪವಿಭಾಗಾಧಿಕಾರಿ ಪಲ್ಲವಿ ಸಾತೇನಹಳ್ಳಿ, ಈ ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ನಾವು ಯಾವ ವಿಚಾರವನ್ನೂ ಇತ್ಯರ್ಥ ಮಾಡಲು ಬರುವುದಿಲ್ಲ. ಓಡಾಡಲು ದಾರಿ ಬಿಟ್ಟುಕೊಡಬೇಕು ಎಂದು ಮನವಿ ಮಾಡಿದ್ದೀರಿ. ಆ ಬಗ್ಗೆ ಮಾತನಾಡಿ ಸಂಜೆಯೊಳಗಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಉಪವಿಭಾಗಾಧಿಕಾರಿ ಭರವಸೆಗೆ ಸಮ್ಮತಿಸದ ರೈತ ಸಂಘದ ಅಧ್ಯಕ್ಷ ದಿನೇಶ್ ಶಿರವಾಳ, ಈ ಪ್ರದೇಶದಲ್ಲಿ ಮಡಿವಾಳ ಮತ್ತು ಒಕ್ಕಲಿಗ ಸಮುದಾಯಕ್ಕೆ ಸೇರಿದ ಕುಟುಂಬಗಳು ಹಲವು ವರ್ಷಗಳಿಂದ ಇಲ್ಲಿ ವಾಸಿಸುತ್ತಿವೆ. ಕೂಡ್ಲಿ ಮಠದ ಪಕ್ಕದಲ್ಲಿ ವಸತಿ ಉದ್ದೇಶಕ್ಕೆ ಲೇಔಟ್ ನಿರ್ಮಾಣವಾಗುತ್ತಿರುವ ಕಾರಣದಿಂದ ಈ ಪ್ರದೇಶದ ಜನರನ್ನು ಒಕ್ಕಲೆಬ್ಬಿಸಲು ಮುಂದಾಗುತ್ತಿದ್ದಾರೆ. ಇಲ್ಲಿ ವಾಸಿಸುತ್ತಿರುವ ಕುಟುಂಬಗಳ ಜಾಗ ಮಂಜೂರಾತಿಯ ಕಡತಗಳೂ ನಾಪತ್ತೆಯಾಗಿವೆ. ಕಂದಾಯ ಇಲಾಖೆಯಲ್ಲಿ ಪಟ್ಟಭದ್ರ ಹಿತಾಸಕ್ತಿಗಳು ಈ ಕೆಲಸ ಮಾಡುತ್ತಿವೆ ಎಂಬ ಅನುಮಾನವಿದೆ. ಮೊದಲು ನಮ್ಮ ನ್ಯಾಯಯುತ ಬೇಡಿಕೆಗಳು ಪೂರೈಕೆಯಾಗಬೇಕು. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಬರಬೇಕು. ಅಲ್ಲಿಯವರೆಗೂ ನಮ್ಮ ಹೋರಾಟ ನಿಲ್ಲಿಸುವುದಿಲ್ಲ ಪ್ರತಿಭಟನೆ ಮುಂದುವರಿಸುತ್ತೇವೆ ಎಂದು ಪಟ್ಟುಹಿಡಿದರು.