

ವಿಜಯವಾಣಿ ಸುದ್ದಿಜಾಲ ಬೆಂ. ಗ್ರಾಮಾಂತರ
ಡಿಸಿ ನಡಿಗೆ ಹಳ್ಳಿಯ ಕಡೆಗೆ ಕಾರ್ಯಕ್ರಮ ಕೆಲವು ಸರ್ಕಾರಿ ಸವಲತ್ತುಗಳ ಸಾಂಕೇತಿಕ ವಿತರಣೆ, ವಿಧವಾ ವೇತನ, ವೃದ್ಧಾಪ್ಯ ವೇತನ ವಿತರಣೆ ಜತೆಗೆ ರಾಜಕೀಯ ನಾಯಕರ ಭಾಷಣಗಳಿಗೆ ಸೀಮಿತವಾಗುತ್ತಿದೆ ಎಂಬ ಆರೋಪದ ನಡುವೆ ಒತ್ತುವರಿಯಾಗಿದ್ದ ಸರ್ಕಾರಿ ಶಾಲೆಗೆ ಸೇರಬೇಕಿದ್ದ ಭೂಮಿ ತೆರವುಗೊಳಿಸುವ ಮೂಲಕ ಡಿಸಿ ನಡಿಗೆ ಕಾರ್ಯಕ್ರಮ ಕೇವಲ ತೋರಿಕೆಗಲ್ಲ ಎಂಬ ಸಂದೇಶ ರವಾನಿಸಲಾಗಿದೆ.
1 ಎಕರೆ ಸ್ವಾಧೀನ: ದೇವನಹಳ್ಳಿ ತಾಲೂಕು ಬಿಜ್ಜವಾರ ಗ್ರಾಮದ ಸರ್ವೇ ನಂ.16 ರಲ್ಲಿ ಒತ್ತುವರಿಯಾಗಿದ್ದ ಸರ್ಕಾರಿ ಶಾಲಾ ಜಮೀನನ್ನು ಬುಧವಾರ ಜಿಲ್ಲಾಡಳಿತ ತೆರವುಗೊಳಿಸಿದೆ. ಜಿಲ್ಲಾಧಿಕಾರಿ ಆರ್. ಲತಾ ಸೂಚನೆ ಮೇರೆಗೆ ದೇವನಹಳ್ಳಿ ತಹಸೀಲ್ದಾರ್ ಶಿವರಾಜ್ ಮತ್ತು ಭೂ ದಾಖಲೆಗಳ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಸ್ಥಳೀಯ ರೈತರೊಬ್ಬರಿಂದ ಅತಿಕ್ರಮಣವಾಗಿದ್ದ 1 ಎಕರೆ ಜಾಗವನ್ನು ತೆರವುಗೊಳಿಸಿ ಸರ್ಕಾರಿ ಶಾಲೆಯ ಸ್ವಾಧೀನಕ್ಕೆ ಪಡೆಯಲಾಗಿದೆ. ಬಿಜ್ಜವಾರ ಗ್ರಾಮದ ಸರ್ವೇ ನಂ. 16 ರಲ್ಲಿ ಸರ್ಕಾರಿ ಶಾಲೆಗೆ 6.33 ಎಕರೆ ಭೂಮಿ ಮಂಜೂರಾಗಿತ್ತು. ಅದರಲ್ಲಿ 1 ಎಕರೆ ಭೂಮಿಯನ್ನು ಸ್ಥಳೀಯ ರೈತರೊಬ್ಬರು ಒತ್ತುವರಿಗೊಂಡಿದ್ದರು.
ಗ್ರಾಮವಾಸ್ತವ್ಯ ಪ್ರಭಾವ: ವಿಜಯಪುರ ಹೋಬಳಿ ಕೋರಮಂಗಲದಲ್ಲಿ ಡಿ.17ರಂದು ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಾಸ್ತವ್ಯದ ವೇಳೆ ಸ್ಥಳೀಯರು ಸರ್ಕಾರಿ ಶಾಲೆಗೆ ಸೇರಬೇಕಿದ್ದ 1 ಎಕರೆ ಜಾಗ ಒತ್ತುವರಿಯಾಗಿರುವ ಬಗ್ಗೆ ಅಹವಾಲು ಅರ್ಜಿ ನೀಡಿದ್ದರು. ಇದನ್ನು ಗಂಭೀರವಾಗಿ ಪರಿಗಣಿಸಿದ ಜಿಲ್ಲಾಧಿಕಾರಿ ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಸರ್ವೇ ಮಾಡಿ ಸಮಪರ್ಕ ದಾಖಲೆ ಸಿದ್ದಪಡಿಸಿ ಒತ್ತುವರಿ ತೆರವುಗೊಳಿಸುವಂತೆ ತಹಸೀಲ್ದಾರ್ ಅವರಿಗೆ ಆದೇಶಿಸಿದ್ದರು. ಅದರಂತೆ ಕಾರ್ಯೋನ್ಮುಖರಾದ ಅಧಿಕಾರಿಗಳು ಡಿಸಿ ಆದೇಶದ ನಾಲ್ಕೇ ದಿನಕ್ಕೆ ಒತ್ತುವರಿ ತೆರವು ತೆರವು ಮಾಡಿ, ಜೆಸಿಬಿ ಮೂಲಕ ಟ್ರಂಚ್ ನಿರ್ಮಾಣ ಮಾಡಿ ಶಾಲೆ ಸೇರಿರುವ ಅಷ್ಟೂ ಭೂಮಿಗೆ ಹಸ್ತುಬಸ್ತು ಮಾಡಿದ್ದಾರೆ. ಗ್ರಾಮ ಲೆಕ್ಕಾಧಿಕಾರಿಗಳಾದ ಮಾಲಾ, ಮಂಜುಳಾ, ಸಹಾಯಕ ನರಸಿಂಹಮೂರ್ತಿ, ಛಲಪತಿ, ಮುಕ್ತಾಂಬಿಕಾ, ಶ್ರೀರಾಮ ಇದ್ದರು.
ಕೋರಮಂಗಲ ಗ್ರಾಮ ವಾಸ್ತವ್ಯದಲ್ಲಿ ಸರ್ಕಾರಿ ಶಾಲೆ ಭೂಮಿ ಒತ್ತುವರಿ ಬಗ್ಗೆ ಅರ್ಜಿ ಬಂದಿತ್ತು. ಅದನ್ನು ಗಂಭೀರವಾಗಿ ಪರಿಗಣಿಸಿ ಒತ್ತುವರಿ ತೆರವಿಗೆ ಆದೇಶ ನೀಡಲಾಗಿತ್ತು. ಇದರೊಂದಿಗೆ ಸರ್ಕಾರಿ ಆಸ್ತಿಗಳಿಗೆ ಹದ್ದುಬಸ್ತು ಮಾಡುವಂತೆ ಸೂಚನೆ ನೀಡಲಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ಸರ್ಕಾರಿ ಭೂಮಿ ಒತ್ತುವರಿ ಸರ್ವೇ ನಡೆಯುತ್ತಿದ್ದು ಎಲ್ಲ ಆಸ್ತಿಗಳ ಸ್ವಾಧೀನಕ್ಕೆ ಕ್ರಮಕೈಗೊಳ್ಳಲಾಗಿದೆ.
ಆರ್.ಲತಾ ಜಿಲ್ಲಾಧಿಕಾರಿ