

ತುಮಕೂರು: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನವಿರೋಧಿ ನೀತಿ ವಿರುದ್ಧ ಯುವ ಕಾಂಗ್ರೆಸ್ ಕಾರ್ಯಕರ್ತರು ತುಮಕೂರಿನಲ್ಲಿ ಸೋಮವಾರ ಪ್ರತಿಭಟನಾ ರ್ಯಾಲಿ ನಡೆಸಿದರು.
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲು ಯತ್ನಿಸಿದ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು, ನಂತರ ಬಿಡುಗಡೆಗೊಳಿಸಿದರು.
ಟೌನ್ಹಾಲ್ ಮುಂಭಾಗ ನಡೆದ ಸಾರ್ವಜನಿಕ ಸಭೆಯಲ್ಲಿ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಮಾತನಾಡಿ, ಟೀ ಮಾರುವ ವ್ಯಕ್ತಿ ದೇಶದ ಪ್ರಧಾನಿಯಾಗಿದ್ದರೆ, ಅದಕ್ಕೆ ಡಾ.ಬಿ.ಆರ್.ಅಂಬೇಡ್ಕರ್ ಬರೆದ ಸಂವಿಧಾನವೇ ಕಾರಣ, ಇಂತಹ ಸಂವಿಧಾನ ಗೌರವಿಸದ ಬಿಜೆಪಿ ವಿರುದ್ಧ ಜನಾಕ್ರೋಶವಾಗಿದೆ ಎಂದರು.
ಪ್ರತಿಪಕ್ಷಗಳ ಶಾಸಕರನ್ನು ಅಪರೇಷನ್ ಕಮಲದ ಮೂಲಕ ಸೆಳೆದು, ಹಿಂಬಾಗಿಲಿನ ಮೂಲಕ ಅಧಿಕಾರ ನಡೆಸುತ್ತಿರುವ ಬಿಜೆಪಿಗೆ ಜನಸಾಮಾನ್ಯರ ಹಿತಬೇಕಿಲ್ಲ, ಕಪ್ಪು ಹಣ ವಾಪಸ್, ಉದ್ಯೋಗ ನೀಡುವುದಾಗಿ ನೀಡಿದ್ದ ಭರವಸೆ ಏನಾಯಿತು ಎಂದು ಪ್ರಶ್ನಿಸಿದರು.
ರಾಜ್ಯಕ್ಕೆ ಜಿಎಸ್ಟಿ ಪಾಲು ನೀಡಲು ಅಡ್ಡಗಾಲು ಹಾಕಿದ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಅವರನ್ನು ಮತ್ತೊಮ್ಮೆ ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆ ಮಾಡಿ, ಇಡೀ ರಾಜ್ಯದ ಮಾನ ಹರಾಜಿಗಿಡಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಶಿಹುಲಿಕುಂಟೆ ಮಠ್, ಮಾಜಿ ಸಚಿವ ಟಿ.ಬಿ.ಜಯಚಂದ್ರ, ಮಾಜಿ ಶಾಸಕ ಡಾ.ರಫೀಕ್ ಅಹಮದ್, ಮುಖಂಡರಾದ ಇಕ್ಬಾಲ್ ಅಹಮದ್, ರೇವಣ್ಣಸಿದ್ದಯ್ಯ, ಕಲ್ಲಹಳ್ಳಿ ದೇವರಾಜು, ಯುವಕಾಂಗ್ರೆಸ್ ಉಪಾಧ್ಯೆ ದೀಪಿಕಾರೆಡ್ಡಿ, ಸುನೀಲ್, ಪ್ರದಿಪ್, ಆಶಿಕಾ,ದಿವ್ಯಾ, ಖಾಲಿದ್, ಅನಿಲ್, ಹಿಲಾಯಿ ಸಿಖಂದರ್ ಮತ್ತಿತರರು ಇದ್ದರು.
ಕಾಂಗ್ರೆಸ್ ಜಾರಿಗೆ ತಂದ ಯೋಜನೆಗಳ ಹೆಸರು ಬದಲಾವಣೆಯಷ್ಟೇ ಕಳೆದ ಎಂಟು ವರ್ಷಗಳಲ್ಲಿ ಬಿಜೆಪಿ ಮಾಡಿದ ಸಾಧನೆ. 60 ಲಕ್ಷ ಸರ್ಕಾರಿ ಹುದ್ದೆ ಖಾಲಿ ಇದ್ದರೂ ಈ ಬಗ್ಗೆ ಪ್ರಶ್ನಿಸಿದರೆ ಇಡಿ, ಐಟಿ ಹೆಸರಿನಲ್ಲಿ ಬೆದರಿಸುವ ಕುತಂತ್ರದ ರಾಜಕಾರಣ ಮಾಡುತ್ತಿದೆ ಎಂದು ವಿಧಾನಪರಿಷತ್ ಸದಸ್ಯ ಆರ್.ರಾಜೇಂದ್ರ ದೂರಿದರು.
ರಾಜ್ಯದಲ್ಲಿ ಬಿಜೆಪಿ ಕಾರ್ಯಕರ್ತರು ಸತ್ತರೆ ನಿಷೇಧಾೆ ಮೀರಿ ಮೃತದೇಹದ ಮೆರವಣಿಗೆ ನಡೆಸಿ, ಸರ್ಕಾರವೇ ಪರಿಹಾರ ನೀಡುತ್ತದೆ, ಗುಬ್ಬಿ ತಾಲೂಕು ಪೆದ್ದನಹಳ್ಳಿಯಲ್ಲಿ ಇಬ್ಬರು ದಲಿತ ಯುವಕರ ಕೊಲೆಯಾಗಿದ್ದರೂ ಜಿಲ್ಲೆಯಲ್ಲಿರುವ ಮೂವರು ಮಂತ್ರಿಗಳು, ನಾಲ್ವರು ಶಾಸಕರು ತಿರುಗಿಯೂ ನೋಡಿಲ್ಲ ಎಂದರು.
ಬ್ಯಾನರ್ನಲ್ಲಿ ಎಸ್ಪಿಎಂ ಭಾವಚಿತ್ರಕ್ಕೆ ಕೊಕ್! ಪ್ರತಿಭಟನಾ ಸಭೆ ನಡೆದ ಟೌನ್ಹಾಲ್ ಮುಂಭಾಗ ವೇದಿಕೆಯಲ್ಲಿ ಹಾಕಿದ್ದ ಬೃಹತ್ ಬ್ಯಾನರ್ನಲ್ಲಿ ಮಾಜಿ ಸಂಸದ ಎಸ್.ಪಿ.ಮುದ್ದಹನುಮೇಗೌಡ ಭಾವಚಿತ್ರಕ್ಕೆ ಯುವಕಾಂಗ್ರೆಸ್ ಕೊಕ್ ನೀಡಿದ್ದು ಆಶ್ಚರ್ಯ ಮೂಡಿಸಿತು. ಲೋಕಸಭೆ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜತೆ ಮುನಿಸಿಕೊಂಡಿರುವ ಮುದ್ದಹನುಮೇಗೌಡ ಅವರನ್ನು ಪಕ್ಷದಲ್ಲಿ ಉಳಿಸಿಕೊಳ್ಳುವ ಬಯಕೆ ಕಾಂಗ್ರೆಸ್ ಮುಖಂಡರಿಗಿಲ್ಲ ಎಂಬುದು ವೇದಿಕೆಯಲ್ಲಿ ಅಳವಡಿಸಿದ್ದ ಬ್ಯಾನರ್ ಕಂಡ ಸಾರ್ವಜನಿಕರಿಗೆ ಮನವರಿಕೆಯಾಯಿತು.
ಬಿಜೆಪಿ ನೇತೃತ್ವದ ರಾಜ್ಯ ಹಾಗೂ ಕೇಂದ್ರ ಸರ್ಕಾರ ತಪ್ಪು ಆರ್ಥಿಕ ನೀತಿಗಳಿಂದ ಶ್ರೀಸಾಮಾನ್ಯರ ಬದುಕು ಕಷ್ಟವಾಗಿಸಿದೆ, ದಿನಬಳಕೆ ಪದಾರ್ಥ, ಇಂಧನ ಬೆಲೆ ಗಗನಕ್ಕೇರಿದ್ದು ಜನರು ಊಟಕ್ಕೂ ಪರದಾಡುವ ಸ್ಥಿತಿಯಿದ್ದು ದೇಶದೆಲ್ಲೆಡೆ ಆಕ್ರೋಶ ಎದ್ದಿದೆ. ಮುಂಬರುವ ಚುನಾವಣೆಯಲ್ಲಿ ಇದರ ಪರಿಣಾಮವನ್ನು ಬಿಜೆಪಿ ಎದುರಿಸಲಿದೆ. ಆರ್.ರಾಜೇಂದ್ರ ವಿಧಾನ ಪರಿಷತ್ ಸದಸ್ಯ