ಡಿಸಿ ಕಚೇರಿ ಜಾಗದಲ್ಲಿಯೇ ಜಿಲ್ಲಾ ಸಂಕೀರ್ಣ ನಿರ್ಮಿಸಿ

photo-1
Published on

ಬೀದರ್: ಈಗಿರುವ ಡಿಸಿ ಕಚೇರಿ ಆವರಣದಲ್ಲೇ ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣ ನಿರ್ಮಿಸಲು ಕ್ರಮ ಕೈಗೊಳ್ಳುವಂತೆ ಶಾಸಕ ರಹೀಮ್ ಖಾನ್ ಅವರು ಮುಖ್ಯಮಂತ್ರಿ ಯಡಿಯೂರಪ್ಪ ಅವರಲ್ಲಿ ಮನವಿ ಮಾಡಿದ್ದಾರೆ.

ಬುಧವಾರ ಇಲ್ಲಿ 100 ಹಾಸಿಗೆಗಳ ಆಸ್ಪತ್ರೆ ಉದ್ಘಾಟನಾ ಸಮಾರಂಭದಲ್ಲಿ ಈ ಕುರಿತು ಮುಖ್ಯಮಂತ್ರಿ ಅವರಿಗೆ ಭೇಟಿಯಾಗಿ ಚರ್ಚೆ ನಡೆಸುವ ಜತೆಗೆ ಲಿಖಿತ ಮನವಿಪತ್ರವೂ ಸಲ್ಲಿಸಿದರು. ಸಾರ್ವಜನಿಕರ ಹಿತದಿಂದ ಜಿಲ್ಲಾ ಸಂಕೀರ್ಣಕ್ಕೆ ಈಗಿರುವ ಡಿಸಿ ಕಚೇರಿ ಆವರಣವೇ ಸೂಕ್ತವಾಗಿದೆ. ಯಾವುದೇ ಕಾರಣಕ್ಕೂ ನಗರ ಬಿಟ್ಟು ದೂರದಲ್ಲಿರುವ ಕೊಳಾರ್ ಹತ್ತಿರದ ಪ್ರದೇಶದಲ್ಲಿ ಮಾಡಬಾರದು ಎಂದು ಗಮನ ಸೆಳೆದಿದ್ದಾರೆ.

ಈಗಿನ ಡಿಸಿ ಕಚೇರಿ ಆವರಣದಲ್ಲಿ ಸಂಕೀರ್ಣ ನಿರ್ಮಿಸಲು ಹಿಂದಿನ ಸಿಎಂ ಸಿದ್ದರಾಮಯ್ಯ ಅವರು ಶಂಕುಸ್ಥಾಪನೆ ನೆರವೇರಿಸಿದ್ದಾರೆ. ಕಟ್ಟಡ ನಿರ್ಮಾಣಕ್ಕೆ ಅನುದಾನವೂ ಲಭ್ಯವಿದೆ. ಆದರೂ ಎರಡ್ಮೂರು ವರ್ಷಗಳಿಂದ ಕೆಲಸ ಆರಂಭಿಸುತ್ತಿಲ್ಲ. ಇದ್ದ ಜಾಗ ಬಿಟ್ಟು ಕೊಳಾರ್ ಹತ್ತಿರದ ಜಾಗ ಪ್ರಸ್ತಾಪಿಸಿರುವುದು ಸರಿಯಲ್ಲ. ಇದರಿಂದ ಜನರಿಗೆ ಅನಾನುಕೂಲವಾಗಲಿದೆ. ಈಗಾಗಲೇ ಅಲ್ಲಿನ ಸ್ಥಳವನ್ನು ಸಹ ಬೀದರ್ ತೋಟಗಾರಿಕೆ ಕಾಲೇಜಿಗೆ ಕೊಡಲು ಸರ್ಕಾರದ ಮಟ್ಟದಲ್ಲಿ ತೀರ್ಮಾನವಾಗಿದೆ. ಈ ಎಲ್ಲ ಕಾರಣಗಳಿಂದ ಯಾವುದೇ ಗೊಂದಲಕ್ಕೆ ಆಸ್ಪದ ನೀಡದೇ ಡಿಸಿ ಕಚೇರಿ ಆವರಣದಲ್ಲಿ ಕೆಲಸ ಆರಂಭಿಸಲು ಕೋರಿದರು.

ಮನವಿ ಪತ್ರ ಸ್ವೀಕರಿಸಿದ ಸಿಎಂ ಅವರು, ಬೇಡಿಕೆ ಕುರಿತು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ಅನುದಾನವಿದ್ದರೂ ಕೆಲಸ ಆರಂಭ ಮಾಡದ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದ್ದಾರೆ. ಬೆಂಗಳೂರಿಗೆ ಬಂದು ಈ ಬಗ್ಗೆ ಚರ್ಚಿಸಲು ಆಹ್ವಾನ ನೀಡಿದ್ದಾರೆ. ಶೀಘ್ರ ಬೆಂಗಳೂರಿಗೆ ತೆರಳಿ ಸಿಎಂ ಅವರಿಗೆ ಎಲ್ಲ ಮಾಹಿತಿ ನೀಡುವೆ ಎಂದು ಖಾನ್ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net