ಡಿಸಿ ಎದುರು ಸಮಸ್ಯೆ ತೋಡಿಕೊಂಡ ಅಂಗವಿಲರು

ydg1
ಯಾದಗಿರಿಯಲ್ಲಿ ಗುರುವಾರ ಕರೆದಿದ್ದ ಅಂಗವಿಕಲರ ಜಿಲ್ಲಾ ಮಟ್ಟದ ಕುಂದುಕೊರತೆ ಸಭೆಯಲ್ಲಿ ಬುದ್ಧಿಮಾಂದ್ಯ ಮಹಿಳೆಯ ಸಮಸ್ಯೆಯನ್ನು ಆಲಿಸಿದ ಜಿಲ್ಲಾಧಿಕಾರಿ ಡಾ.ಸುಶೀಲಾ, ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿ ಶರಣಗೌಡ ಪಾಟೀಲ್.
Published on

ಯಾದಗಿರಿ: ಜಿಲ್ಲೆಯ ಅಂಗವಿಕಲರ ಸಮಸ್ಯೆ ಅರಿಯಲು ಜಿಲ್ಲಾಧಿಕಾರಿ ಡಾ.ಸುಶೀಲಾ ಅವರ ನೇತೃತ್ವದಲ್ಲಿ ಗುರುವಾರ ಕರೆದಿದ್ದ ಕುಂದು-ಕೊರತೆಗಳ ಸಭೆಯಲ್ಲಿ ಅವರ ನೂರೆಂಟು ಸಮಸ್ಯೆಗಳು ಅನಾವರಣಗೊಂಡ ಘಟನೆ ನಡೆಯಿತು.

ಇಲ್ಲಿನ ಮಿನಿ ವಿಧಾನಸೌಧದ ಜಿಪಂ ಸಭಾಂಗಣದಲ್ಲಿ ಕರೆದಿದ್ದ ಸಭೆಯಲ್ಲಿ ಭಾಗವಹಿಸಿದ್ದ 200ಕ್ಕೂ ಹೆಚ್ಚು ಅಂಗವಿಕಲರು ಹೊತ್ತು ತಂದ ವಿವಿಧ ಬೇಡಿಕೆಗಳ ಪಟ್ಟಿಯನ್ನು ಜಿಲ್ಲಾಧಿಕಾರಿಗಳು ಎದುರು ಬಿಚ್ಚಿಟ್ಟರು.

ಪ್ರತಿಯೊಬ್ಬರ ಸಮಸ್ಯೆ ಮತ್ತು ಬೇಡಿಕೆಗಳನ್ನು ಚಿತ್ತವಿಟ್ಟು ಆಲಿಸಿ ಕೇಳಿಸಿಕೊಂಡ ಡಾ.ಸುಶೀಲಾ ಅವರು, ಸಭೆಯಲ್ಲಿದ್ದ ಸಂಬAಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕೂಡಳೇ ಅವುಗಳಿಗೆ ಸ್ಪಂದಿಸುವAತೆ ಸೂಚಿಸಿದರು.

ಮುಖ್ಯವಾಗಿ ಸಭೆಯಲ್ಲಿ ಸಾರಿಗೆ, ಆರೋಗ್ಯ, ಮಾಸಾಶನ, ಬ್ಯಾಂಕ್ ಸಾಲ, ಶೇ.5 ಅನುದಾನದ ಬಳಕೆ, ಯುಡಿಐಡಿ ಕಾರ್ಡ್, ಕೃಷಿ ಉಪಕರಣಗಳ ವಿತರಣೆ, ಕೆಕೆಆರ್‌ಡಿಬಿಯಿಂದ ಅನುದಾನ, ರೈಲ್ವೆ ಪಾಸ್ ಯಾದಗಿರಿಯಲ್ಲಿಯೇ ಸಿಗುವಂತೆ ಮಾಡುವುದು ಸೇರಿ ಅನೇಕ ವಿಷಯಗಳು ಮುನ್ನೆಲೆಗೆ ಬಂದು ಇವುಗಳಿಂದ ಅಂಗವಿಕಲರಿಗೆ ಆಗುತ್ತಿರುವ ತೊಂದರೆ ಬಗ್ಗೆ ವಿವರಿಸಿದ ಅನೇಕರು ಕೂಡಲೇ ಬಗೆಹರಿಸಿಕೊಡುವಂತೆ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.
ಸುಮಾರು ಎರಡುವರೆ ತಾಸು ನಡೆದ ಸಭೆಯಲ್ಲಿ ಮಾತನಾಡಿದ ಅನೇಕರು, ದೈಹಿಕವಾಗಿ ಬಳಲುವ ನಾವು ಪ್ರತಿಯೊಂದು ಕೆಲಸಕ್ಕೆ ಕಚೇರಿಗಳಿಗೆ ಅಲೆಯುದು ತುಂಬಾ ತೊಂದರೆಯಾಗುತ್ತಿದೆ. ಕಚೇರಿ ಒಳಗೆ ಹೋಗಿ ಬರಲು ರ‍್ಯಾಪ್ ವ್ಯವಸ್ಥೆ ಇಲ್ಲ. ಅನೇಕ ಕಚೇರಿಗಳು ಎರಡನೇ, ಮೂರನೇ ಅಂತಸ್ತಿನಲ್ಲಿ ಇರುವುದರಿಂದ ಅಲ್ಲಿತನಕ ಹೋಗಿ ಕೆಲಸ ಮಾಡಿಕೊಂಡು ಬರಲು ಆಗುವುದಿಲ್ಲ. ಕಾರಣ ಕೆಳಗಿನ ಅಂತಸ್ತಿನಲ್ಲಿ ಇರುವಂತೆ ವ್ಯವಸ್ಥೆಯಾಗಬೇಕೆಂಬ ಬೇಡಿಕೆ ಅನೇಕರಿಂದ ಕೇಳಿ ಬಂತು.

ಸಭೆಯಲ್ಲಿ ಕೆಕೆಆರ್‌ಟಿಸಿ ಯಾದಗಿರಿ ಡಿಸಿ ಸುನೀಲಕುಮಾರ ಚಂದರಗಿ, ಜಿಲ್ಲಾ ಸರ್ಜನ್ ಡಾ.ರೀಜ್ವಾನ್ ಆಫ್ರೀನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಭೀಮರಾವ ಪಂಚಾಳ್, ಜಿಲ್ಲಾ ಅಂಗವಿಕಲ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಅಧಿಕಾರಿ ಶರಣಗೌಡ ಪಾಟೀಲ್ ಹಾಗೂ ನಿಂಗಣ್ಣ ವಂಟೂರ್, ಸಂಗನಗೌಡ ಧನರೆಡ್ಡಿ, ಚಂದ್ರಕಾAತ ರಸ್ತಾಪುರ, ವಿಶ್ವನಾಥರೆಡ್ಡಿ ಅಬ್ಬೆತುಮಕೂರು, ಬಸವರಾಜ ಬೈರಮಡ್ಡಿ, ನಾಗೇಂದ್ರ ದೊರೆ, ರವಿ ಐಕೂರ, ಬಾಬು ಜಾನೆ, ರಮೇಶ ಕೂಡ್ಲೂರು, ನಾಗರಾಜ ಶಹಾಪುರ, ಭೀಮರಾಯ ಯಾದಗಿರಿ ಇತರರಿದ್ದರು.

ಬುದ್ಧಮಾಂಧ್ಯರಿಗೆ ಮಶಾಸನ ನೀಡಲು ಸೂಚನೆ: ಸುರಪುರ ತಾಲೂಕಿನ ದೇವಿಕೇರಿ ಗ್ರಾಮದ ಒಂದು ಕುಟುಂಬ ನಾಲ್ವರು ಬುದ್ಧಿಮಾಂಧ್ಯರು ಸ್ಥಿತಿ ನೋಡುಗರ ಮನಕಲುಕಿತು. ತಂದೆ-ತಾಯಿ ಸೇರಿ ಕುಟುಂಬದಲ್ಲಿ ಯಾರು ಬೇರೆಯವರ ಆಶ್ರಯದಲ್ಲಿಯೇ ಬದುಕು ನೂಕುತ್ತಿರುವ ಇವರಿಗೆ ಸರ್ಕಾರದಿಂದ ಯಾವುದೇ ಸಹಾಯವಿಲ್ಲ. ಕೂಡಲೇ ಮಾಶಾಸನ ನೀಡುವಂತೆ ಮಲ್ಲಪ್ಪ ಪೂಜಾರಿ ಡಿಸಿ ಅವರ ಗಮನಕ್ಕೆ ತಂದಾಗ, ಕೂಡಲೇ ಅವರಿಗೆ ಪ್ರತಿತಿಂಗಳು ಎರಡು ಸಾವಿರ ರೂ. ಮಾಶಾಸನ ಸೇರಿ ಇತರೆ ಸೌಲಭ್ಯ ನೀಡುವಂತೆ ಜಿಲ್ಲಾ ಅಂಗವಿಕಲ ಕಲ್ಯಾಣಾಧಿಕಾರಿಗೆ ತಾಕೀತು ಮಾಡಿದರು.

ಕೃಷಿ ಕಾಯಕ ಮಾಡುವ ಅಂಗವಿಕಲರಿಗೆ ಶೇ. 5 ಅನುದಾನದಲ್ಲಿ ನೀಡಿವಂತೆ ಮನವಿ ಮಾಡಲಾಯಿತು. ಅಲ್ಲದೆ ನರೇಗಾದಲ್ಲಿ ಕೆಲಸ ನೀಡಬೇಕು ಎಂಬ ನಿಯಮ ಇದ್ದರೆ ಜಿಲ್ಲೆಯಲ್ಲಿ ಕೆಲಸ ನೀಡುತ್ತಿಲ್ಲ ಎಂದು ಸಭೆಯ ಗಮನಕ್ಕೆ ಸಿದ್ದಯ್ಯ ಸ್ವಾಮಿ ಕರಕಿಹಳ್ಳಿ ತಂದರು.

12ವರ್ಷಗಳ ನಂತರ ನಡೆದ ಸಭೆ: 12 ವರ್ಷಗಳ ಹಿಂದೆ ಆಗಿನ ಜಿಲ್ಲಾಧಿಕಾರಿಗಳು ಇಂತಹ ಒಂದು ಕುಂದುಕೊರೆ ಸಭೆ ನಡೆಸಿದ್ದು ಬಿಟ್ಟರೆ ಇಂದೇ ಇಂತಹ ಸಭೆ ನಡೆದಿದ್ದು, ಇದಕ್ಕೆ ಮುಖ್ಯ ಕಾರಣರಾದ ಜಿಲ್ಲಾಧಿಕಾರಿ ಡಾ.ಸುಶೀಲಾ ಅವರನ್ನು ಸಭೆಯಲ್ಲಿದ್ದ ಎಲ್ಲ ಅಂಗವಿಕಲರು ಅಭಿನಂದಿಸಿದರು. ಜನಸ್ಪಂದನ ಸಭೆಗೆ ಹೋದಾಗ ಅಲ್ಲಿ ಅನೇಕರ ಸಮಸ್ಯೆಗಳ ಪರಿಹಾರಕ್ಕಾಗಿ ಒಂದು ಸಭೆ ಕರೆಯುವಂತೆ ಮಾಡಿದ ಮನವಿ ಮೇರೆಗೆ ಈ ಸಭೆ ಕರೆಯಲಾಗಿದೆ. ನಿಮ್ಮ ಎಲ್ಲ ಬೇಡಿಕೆಗಳಿಗೆ ಸೂಕ್ತ ಪರಿಹಾರ ನೀಡಲಾಗುವುದೆಂದು ಜಿಲ್ಲಾಧಿಕಾರಿ ಹೇಳಿದರು.

ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹ: ಸ್ವಯಂ ಉದ್ಯೋಗ ಮಾಡಲು ಬ್ಯಾಂಕ್‌ನಿAದ ಸಾಲ ನೀಡಬೇಕು. ಕಚೇರಿ ಆವರಣ ಇಲ್ಲವೆ, ಹೊರಗಡೆ ಅಂಗವಿಕಲರಿಗೆ ಡಬ್ಬಾ ಅಂಗಡಿ ಇಡಲು ಅವಕಾಶ ನೀಡಬೇಕು. ವಿಕಲಚೇತನರ ಕಾರ್ಯಚಟುವಟಿಕೆಗಳಿಗಾಗಿ ಜಿಲ್ಲಾ ಕೇಂದ್ರದಲ್ಲಿ ವಿಕಲಚೇತನ ಭವನ ನಿರ್ಮಿಸಬೇಕು. ಎಲ್ಲ ಕಚೇರಿಗಳಲ್ಲಿ ರ‍್ಯಾಪ್ ವ್ಯವಸ್ಥೆ ಮಾಡಬೇಕು. ಪ್ರತಿ ಮೂರು ತಿಂಗಳಿಗೊಮ್ಮೆ ಕುಂದುಕೊರತೆ ಸಭೆ ಕರೆಯಬೇಕು. ವಿಳಂಬವಾಗದAತೆ ಪಿಂಚಣಿ ಸಿಗಬೇಕು. ಅಂತ್ಯೋದಯ ಕಾರ್ಡ್ ಸಕಾಲಕ್ಕೆ ದೊರೆಯುವಂತಾಬೇಕು ಎಂಬುದು ಸೇರಿ ವಿವಿಧ ಬೇಡಿಕೆಗೆ ಆಗ್ರಹಿಸಿದರು.

ಸಭೆಯಲ್ಲಿ ಕೈಕೊಟ್ಟ ವಿದ್ಯುತ್: ಸಭೆ ನಡೆಯುತ್ತಿದ್ದಾಗ ಎರಡು ಸಲ ವಿದ್ಯುತ್ ಕೈಕೊಟ್ಟಿತ್ತು. ಜನರೇಟರ್ ಹಾಕಲು ತಡವಾದಾಗ ಸಿಡಿಮಿಡಿಗೊಂಡ ಜಿಲ್ಲಾಧಿಕಾರಿ, ಏನ್ರಿ ಜಿಪಂ ಕಚೇರಿ ಎಂದರು. ಒಂದೆ ಮೈಕ್ ಮೂಲಕ ಎಲ್ಲರೂ ಮಾತನಾಡುತ್ತಿದ್ದಾಗ ಇನ್ನೊಂದು ಮೈಕ್ ವ್ಯವಸ್ಥೆ ಮಾಡಿ ಎಂದಾಗಲೂ ಅಲ್ಲಿ ಬೇರೆ ಮೈಕ್ ಇಲ್ಲದ ಕಾರಣ ವೇದಿಕೆಯಲ್ಲಿದ್ದ ಮೈಕ್ ತಂದು ಕೊಟ್ಟಾಗಲೂ ಇದ್ರೇನ್ರಿ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net