

ಕೊಳ್ಳೇಗಾಲ: ವಿದ್ಯಾರ್ಥಿ ಜೀವನದಲ್ಲೆ ಜಿಲ್ಲಾಧಿಕಾರಿ ಕಾರ್ಯವೈಖರಿಯನ್ನು ಅವರೊಟ್ಟಿಗಿದ್ದು ವೀಕ್ಷಣೆ ಮಾಡುವ ಅವಕಾಶ ತಾಲೂಕಿನ ಇಬ್ಬರು ವಿದ್ಯಾರ್ಥಿನಿಯರಿಗೆ ಲಭಿಸಿದೆ.
ವಿಶ್ವ ಯುವ ಕೌಶಲ ದಿನದ ಅಂಗವಾಗಿ ಕೌಶಲಾಭಿವೃದ್ಧಿ ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯಿಂದ ಆಯೋಜಿಸಿದ್ದ ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಚಾಮರಾಜನಗರ ಜಿಲ್ಲೆಯಿಂದ 16 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಇವರಲ್ಲಿ ಕೊಳ್ಳೇಗಾಲದ ಜೆಎಸ್‌ಎಸ್ ಮಹಿಳಾ ಪದವಿ ಕಾಲೇಜಿನ ಪ್ರಥಮ ಬಿ.ಕಾಂ. ವಿದ್ಯಾರ್ಥಿನಿ ಆಗ್ನೇಸ್ ಸಾರಾ ಆಯ್ಕೆಯಾಗಿದ್ದು, ಜಿಲ್ಲೆಗೆ ಟಾಪರ್ ಆಗಿದ್ದಾರೆ. ಅಲ್ಲದೇ, ರಾಜ್ಯ ಮಟ್ಟದಲ್ಲಿ ಎರಡನೇ ಸ್ಥಾನ ಪಡೆದು 10 ಸಾವಿರ ರೂ. ನಗದು ಬಹುಮಾನ ಪಡೆದಿರುವ ಇದೇ ಕಾಲೇಜಿನ ವಿದ್ಯಾರ್ಥಿನಿ ರಾಜೇಶ್ವರಿ ಸಹ ಆಯ್ಕೆಯಾಗಿದ್ದಾರೆ.
ಪಟ್ಟಣದ ಆಶ್ರಯ ಬಡಾವಣೆ ನಿವಾಸಿ, ಎಸ್.ವಿ.ಕೆ.ಕಾಲೇಜಿನ ಪ್ರಾಧ್ಯಾಪಕ ಜೋಸೆಫ್ ಅಲೆಕ್ಸಾಂಡರ್ ಮತ್ತು ಮಾಂಬಳ್ಳಿ ಸರ್ಕಾರಿ ಪ್ರೌಡಶಾಲೆ ಶಿಕ್ಷಕಿ ಶರ್ಮಿಳಾ ದಂಪತಿ ಪುತ್ರಿ ಜೆ.ಅಗ್ನೇಸ್ ಸಾರಾ ಒಂದು ದಿನ ಜಿಲ್ಲಾಧಿಕಾರಿ ಕಾರ್ಯವೈಖರಿ ನೋಡುವ ಅವಕಾಶಕ್ಕೆ ಪಡೆದಿದ್ದಾರೆ. ಇಂತಹ ಅಪರೂಪದ ಅವಕಾಶ ಮಗಳಿಗೆ ದೊರೆಯುತ್ತದೆಂದು ನಿರೀಕ್ಷಿಸಿರಲಿಲ್ಲ ಎಂದು ತಾಯಿ ಶರ್ಮಿಳಾ ತಿಳಿಸಿದ್ದಾರೆ.
ತಾಲೂಕಿನ ಕಾಮಗೆರೆ ಗ್ರಾಮದ ನಿವಾಸಿ ಜಡೇಸ್ವಾಮಿ ಮತ್ತು ಜಯಮ್ಮ ದಂಪತಿ ಪುತ್ರಿ ಜೆ.ರಾಜೇಶ್ವರಿ. ತಂದೆ, ತಾಯಿ ಕೂಲಿ ಕಾರ್ಮಿಕರು. ಬಡತನದ ನಡುವೆಯೂ ತಮ್ಮ ಪ್ರತಿಭೆಯಿಂದ ಗುರುತಿಸಿಕೊಂಡಿದ್ದಾರೆ.
ಆನ್‌ಲೈನ್‌ನಲ್ಲಿ ಸ್ಪರ್ಧೆ:
ಕರ್ನಾಟಕ ಕೌಶಲ ಅಭಿವೃದ್ಧಿ ನಿಗಮದಿಂದ ಕೌಶಲ ಸ್ಫೂರ್ತಿ ಶೀರ್ಷಿಕೆಯಡಿ ರಾಜ್ಯದ ಕಾಲೇಜು ವಿದ್ಯಾರ್ಥಿಗಳಿಗೆ ಶಕ್ತಿಯುತ ಸುಸ್ಥಿರ ಬೆಳವಣಿಗೆಗಾಗಿ ಕೌಶಲಯುತ ಮಾನವ ಸಂಪನ್ಮೂಲ ಸೃಷ್ಟಿಸುವ ಮಾರ್ಗಗಳು ವಿಷಯದಲ್ಲಿ ರಾಜ್ಯ ಮಟ್ಟದ ಪ್ರಬಂಧ ಸ್ಪರ್ಧೆಯನ್ನು ಜುಲೈ ತಿಂಗಳಲ್ಲಿ ಆನ್‌ಲೈನ್ ಮೂಲಕ ಆಯೋಜಿಸಲಾಗಿತ್ತು. ಜಿಲ್ಲೆಯಿಂದ 40 ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಓದಿನ ಹಂತದಲ್ಲೇ ಜಿಲ್ಲಾಧಿಕಾರಿಗಳೊಂದಿಗೆ ಸಮಯ ಕಳೆಯುವ ಅವಕಾಶ ಮುಂದಿನ ಸಾಧನೆಯ ದಾರಿಗೆ ಪ್ರೇರಣೆಯಾಗಲಿದೆ.