ಡಿವೈಎಸ್ಪಿ ವಿರುದ್ಧ ಕ್ರಮವಾಗದಿದ್ದರೆ ನಾಳೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಎಚ್.ಡಿ.ರೇವಣ್ಣ

ಡಿವೈಎಸ್ಪಿ ವಿರುದ್ಧ ಕ್ರಮವಾಗದಿದ್ದರೆ ನಾಳೆ ಪ್ರತಿಭಟನೆಯ ಎಚ್ಚರಿಕೆ ನೀಡಿದ ಎಚ್.ಡಿ.ರೇವಣ್ಣ
Published on

ಹಾಸನ ಜಿಲ್ಲೆಯಲ್ಲಿ ಪೊಲೀಸ್ ಇಲಾಖೆ ಅವ್ಯವಸ್ಥೆಯಿಂದ ಕೂಡಿದೆ. ಇದನ್ನು ನಿಯಂತ್ರಿಸಲು ಉನ್ನತ ಅಧಿಕಾರಿಗಳು ವಿಫಲವಾಗಿದ್ದು, ಡಿಜಿಪಿ ನಿದ್ದೆಗೆ ಜಾರಿದ್ದಾರೆ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಆಕ್ರೋಶ ವ್ಯಕ್ತಪಡಿಸಿದರು.

ಹಾಸನ ಡಿವೈಎಸ್‌ಪಿ ಉದಯ್ ಭಾಸ್ಕರ್, ವೃತ್ತ ನಿರೀಕ್ಷಕ ರೇಣುಕಾ ಪ್ರಸಾದ್ ಸೇರಿದಂತೆ ಕಾನೂನುಬಾಹಿರ ಚಟುವಟಿಕೆಗಳಲ್ಲಿ ತೊಡಗಿರುವ ಎಲ್ಲಾ ಅಧಿಕಾರಿಗಳನ್ನು ಕೂಡಲೇ ವರ್ಗಾವಣೆ ಮಾಡಿ ಸುಗಮವಾಗಿ ಚುನಾವಣೆ ನಡೆಸಲು ಅನುವು ಮಾಡಿಕೊಡಬೇಕು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಮನವಿ ಮಾಡಿದರು.

ಹಾಸನ ಪೊಲೀಸ್ ಠಾಣೆಗಳು ರೌಡಿಗಳ ಕೇಂದ್ರವಾಗಿದೆ. ಈ ಬಗ್ಗೆ ದೂರು ನೀಡಲು ಪೊಲೀಸ್ ಮಹಾ ನಿರ್ದೇಶಕರಿಗೆ ದೂರು ನೀಡಲು ಕರೆ ಮಾಡಿದರು ಕರೆ ಸ್ವೀಕರಿಸುತ್ತಿಲ್ಲ. ಡಿಜಿಪಿ ಜೆಡಿಎಸ್ ವತಿಯಿಂದ ಕರೆ ಮಾಡಿದರೆ ಪ್ರತಿಕ್ರಿಯೆ ನೀಡುತ್ತಿಲ್ಲ. ಬಿಜೆಪಿ ವತಿಯಿಂದ ಕರೆ ಮಾಡಿದರೆ ಮಾತ್ರ ಪ್ರತಿಕ್ರಿಯೆ ನೀಡುತ್ತಾರೆ. ಅವರು ಬಿಜೆಪಿ ಏಜೆಂಟ್ ರೀತಿ ಕೆಲಸ ಮಾಡುತ್ತಿದ್ದಾರೆ. ಡಿಜಿಪಿ ಸ್ಥಾನಕ್ಕೆ ಗೌರವವಿದೆ. ಅದರಂತೆ ನಡೆದುಕೊಳ್ಳಿ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಡಿಜಿ, ಐಜಿ ಎಲ್ಲರೂ ನನ್ನ ಕೈ ಕೆಳಗೆ ಇದ್ದಾರೆ ಎಂದು ಹೇಳಿಕೊಂಡಿರುವ ಡಿವೈಎಸ್‌ಪಿ ಉದಯ್ ಭಾಸ್ಕರ್ ಹಾಸನ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಲು ಅಗತ್ಯ ಇರುವ ಎಲ್ಲಾ ರೀತಿಯ ಸಹಕಾರ ನೀಡಲು ಅಗತ್ಯ ಸಿದ್ಧತೆ ಮಾಡಿಕೊಂಡಿದ್ದಾರೆ. ಅವರೇ ಮುಂದೆ ನಿಂತು ನಗರದ ರಸ್ತೆಗಳನ್ನು ಬಂದ್ ಮಾಡಿ ಜನರಿಗೆ ಬಿಜೆಪಿಯ ಉಡುಗೊರೆಗಳನ್ನು ಹಂಚುತ್ತಿದ್ದಾರೆ. ಇಂತಹವರಿಂದ ನಿಷ್ಪಕ್ಷಪಾತವಾಗಿ ಚುನಾವಣೆ ನಿರೀಕ್ಷಿಸಲು ಸಾಧ್ಯವೇ? ಡಿವೈಎಸ್‌ಪಿ ವಿರುದ್ಧ ಬುಧವಾರ ಸಂಜೆಯೊಳಗೆ ಕ್ರಮವಾಗದಿದ್ದರೆ ಗುರುವಾರ ಬೆಳಗ್ಗೆ ಎಸ್‌ಪಿ ಕಚೇರಿ ಮುಂದೆ ನಾಲ್ಕು ಸಾವಿರ ಜೆಡಿಎಸ್ ಕಾರ್ಯಕರ್ತರೊಂದಿಗೆ ಪ್ರತಿಭಟನೆ ಮಾಡಲಾಗುವುದು. ಈ ವೇಳೆ ಏನಾದರೂ ಸಮಸ್ಯೆ ಆದರೆ ಪೊಲೀಸ್ ಇಲಾಖೆಯೇ ನೇರ ಹೊಣೆ ಎಂದು ಎಚ್ಚರಿಸಿದ್ದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ತಾಲೂಕು ಅಧ್ಯಕ್ಷ ಎಸ್. ದ್ಯಾವೇಗೌಡ, ಮುಖಂಡರಾದ ಕರೀಗೌಡ, ಕೆ.ಎಂ. ರಾಜೇಗೌಡ, ಇದ್ದರು

ಸ್ವರೂಪ್ ಯಾರೆಂದು ನನಗೆ ಗೊತ್ತಿಲ್ಲ: ರೇವಣ್ಣ

ಕುಮಾರಣ್ಣ ಹೇಳಿರುವ ಸಾಮಾನ್ಯ ಕಾರ್ಯಕರ್ತ ಮತ್ತು ಸ್ವರೂಪ್ ಯಾರು ಎಂಬುದು ನನಗೆ ಗೊತ್ತಿಲ್ಲ ಎಂದು ಮಾಜಿ ಸಚಿವ ಎಚ್.ಡಿ ರೇವಣ್ಣ ಹೇಳಿದ್ದಾರೆ.

ಮಂಗಳವಾರ ಮಾಜಿ ಸಿಎಂ ಕುಮಾರಸ್ವಾಮಿ ಅವರು ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವುದಾಗಿ ಪುನರ್‌ಉಚ್ಛರಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ರೇವಣ್ಣ, ಈ ಬಗ್ಗೆ ನನಗೆ ಗೊತ್ತಿಲ್ಲ ಎಂದು ಹೇಳಿದರು. ಕುಮಾರಣ್ಣ ಹೇಳಿರುವ ಸಾಮಾನ್ಯ ಕಾರ್ಯಕರ್ತನು ಗೊತ್ತಿಲ್ಲ, ಸ್ವರೂಪ್ ಯಾರು ಎಂಬುದು ನನಗೆ ಗೊತ್ತಿಲ್ಲ ಎನ್ನುತ್ತಲೇ ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net