ಡಿವೈಎಸ್ಪಿ ರಾಮಚಂದ್ರಪ್ಪಗೆ ಜಾಮೀನು

Published on

ಮಧುಗಿರಿ: ಕಚೇರಿಗೆ ದೂರು ನೀಡಲು ಬಂದಿದ್ದ ಮಹಿಳೆಯನ್ನು ಪುಸಲಾಯಿಸಿ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧಿತನಾಗಿದ್ದ ಮಧುಗಿರಿ ಡಿವೈಎಸ್ಪಿ ಎ.ರಾಮಚಂದ್ರಪ್ಪಗೆ ಶುಕ್ರವಾರ ಪಟ್ಟಣದ 4ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ. ನ್ಯಾಯಾಧೀಶ ಕೆ.ಯಾದವ ಅವರು ಷರತ್ತುಬದ್ಧ ಜಾಮೀನು ಮಂಜೂರು ಮಾಡಿದ್ದಾರೆ. ಪಾವಗಡದಿಂದ ಜಮೀನು ವ್ಯಾಜ್ಯದ ಬಗ್ಗೆ ದೂರು ಕೊಡಲು ಬಂದ ಮಹಿಳೆಯನ್ನು ಡಿವೈಎಸ್ಪಿ ರಾಮಚಂದ್ರಪ್ಪ ಕಚೇರಿಯ ಶೌಚಗೃಹಕ್ಕೆ ಕರೆದೊಯ್ದು ದೌರ್ಜನ್ಯ ಎಸಗಿದ್ದಾರೆ ಎನ್ನಲಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿತ್ತು. ಈ ಕುರಿತು ಎಸ್​ಪಿ ಕೆ.ವಿ. ಅಶೋಕ್​ ರಾಜ್ಯ ಪೋಲೀಸ್​ ಮಹಾ ನಿರ್ದೇಶಕ ಅಲೋಕ್​ ಮೋಹನ್​ ಅವರಿಗೆ ವರದಿ ಸಲ್ಲಿಸಿದ್ದರು. ಈ ವರದಿ ಆಧರಿಸಿ ಅಮಾನತು ಮಾಡಿ ಆದೇಶಿಸಿದ್ದರು. ನಂತರ ಮಹಿಳೆ ನೀಡಿದ ದೂರಿನ ಹಿನ್ನೆಲೆಯಲ್ಲಿ ಬಂಧಿಸಲಾಗಿತ್ತು. ಇದೇ ರೀತಿಯ ಇನ್ನೊಂದು ಪ್ರಕರಣದಲ್ಲಿ ಮತ್ತೋಬ್ಬ ಮಹಿಳೆ ದೂರು ನೀಡಿದ್ದು, ಈ ಪ್ರಕರಣ ಬಾಕಿ ಇದೆ. ಸುಮಾರು 15 ದಿನಗಳಿಂದ ಕಾರಾಗೃಹದಲ್ಲಿದ್ದ ಆರೋಪಿಯು ಸದ್ಯಕ್ಕೆ ಜಾಮೀನಿನಿಂದ ಹೊರಬಂದಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net