ಕೆ.ಆರ್.ಸಾಗರ: ನಿಮ್ಮ ಯಾವುದೇ ಖಾಸಗಿ ವಿಡಿಯೋ ನಮಗೆ ಬೇಡ. ನಿಮ್ಮ ತಂಡ ಡಿಬಿಎಲ್ ಕಂಪನಿ ಜೊತೆ ನಡೆಸಿರುವ ಡೀಲ್ ವ್ಯವಹಾರದ ವಿಡಿಯೋ ಕಳುಹಿಸಿ ಕೊಡಿ ಎಂದು ಶಾಸಕ ರವೀಂದ್ರ ಶ್ರೀಕಂಠಯ್ಯ ಸಂಸದೆ ಸುಮಲತಾ ಅಂಬರೀಷ್‌ಗೆ ತಿರುಗೇಟು ನೀಡಿದರು.
ಬಸ್ತಿಪುರ ಗ್ರಾಮದಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕೆ ಭೂಮಿಪೂಜೆ ನೆರವೇರಿಸಿದ ಬಳಿಕ ಯಾವ ವಿಡಿಯೋ ಬೇಕು ಎಂದು ಹೇಳಿದರೆ ಪೆನ್ ಡ್ರೈವ್‌ಗೆ ಹಾಕಿ ಕಳುಹಿಸಿಕೊಡುವೆ ಎಂದು ಸಂಸದೆ ಹೇಳಿದ್ದಾರಲ್ಲಾ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನೀವು ಮತ್ತು ನಿಮ್ಮ ತಂಡ ನಡೆಸಿದ ಅಕ್ರಮದ ಕುರಿತು ಆಡಿಯೋ ಮತ್ತು ವಿಡಿಯೋ ನಮ್ಮ ಬಳಿ ಇದೆ. ಸಮಯ ಬಂದಾಗ ಅದನ್ನು ಜನತಾ ನ್ಯಾಯಾಲಯದ ಮುಂದಿಡುತ್ತೇವೆ. ಅವರೇ ತೀರ್ಪು ನೀಡುತ್ತಾರೆ. ನಮಗೆ ಈ ಸರ್ಕಾರದ ಮೇಲೆ ನಂಬಿಕೆ ಇಲ್ಲ. ಇಲ್ಲಿಯ ತನಕ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಮಾಡಿಲ್ಲ. ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲ್ಲ. ಆದ್ದರಿಂದ ಜನರ ಮೇಲೆ ನಮಗೆ ಭರವಸೆ ಇದೆ ಎಂದರು.
ಚುನಾವಣೆ ಬಂದಾಗ ನೀವು ಜನಸೇವೆಗೆ ಬಂದಿದ್ದ ಅಥವಾ ರಾಜಕೀಯಕ್ಕೆ ಬಂದಿದ್ದಾ ಎಂಬುದರ ಕುರಿತು ಜನರು ನಿಮಗೆ ಉತ್ತರ ನೀಡುತ್ತಾರೆ. ನಾನು ಕುಟುಂಬ ರಾಜಕಾರಣದಿಂದ ಬಂದವನು, ನಿಮ್ಮ ಹಾಗೆ ಬಣ್ಣ ಹಚ್ಚಲು ರಾಜಕೀಯಕ್ಕೆ ಬಂದಿಲ್ಲ. ತಾಕತ್ತಿದ್ದರೆ ಜಿಲ್ಲೆಯ್ಲಲಿ ಏನು ಅಭಿವೃದ್ಧಿ ಕೆಲಸ ಮಾಡಿದ್ದೀರಿ ಎಂಬುದನ್ನು ತಿಳಿಸಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಕ್ರಮ ಮಾಡುವವರು ಕರೆದರೆ ನಾವು ದೇವಸ್ಥಾನಕ್ಕೆ ಹೋಗುವವರಲ್ಲ. ನಾವೆಲ್ಲ ದೇವರ ಮೇಲೆ ನಂಬಿಕೆ ಇಟ್ಟು ದಿನ ನಿತ್ಯ ಪೂಜೆ ಮಾಡುವವರು. ನಮ್ಮದು ದೇವರ ಮೇಲೆ ನಂಬಿಕೆ ಇಟ್ಟು ರಾಜಕಾರಣ ಮಾಡುವ ಪಕ್ಷ. ನಮ್ಮ ಪಕ್ಷದ ಶಾಸಕರನ್ನು ಆಣೆ ಮಾಡಲು ಕರೆಯುವ ಯೋಗ್ಯತೆ ನಿಮಗಿಲ್ಲ ಎಂದು ಕಿಡಿಕಾರಿದರು.